https://archive.org/details/unset0000unse_t2n3
ಬಹಿಷ್ಕಾರ
-ಬಡವರಿಗೆ-
ಪಾತ್ರಗಳು
ರಂಗಣ್ಣ ಕಚೇರಿ ಮುಖ್ಯ
ಲಕ್ಷ್ಮೀಪತಿ ಈತನ ಸ್ನೇಹಿತ-ಡಾಕ್ಟರು
ವೆಂಕಟಲಕ್ಷ್ಮಮ್ಮ ರಂಗಣ್ಣನ ಪತ್ನಿ
ನರಸು ಹಿರಿಯ ಮಗಳು
ಕಿಟ್ಟಿ ಮಗ
ಪುಟ್ಟಿ ಚಿಕ್ಕ ಮಗಳು
ಅವಸಾನಕಾಲ ಪ್ರಾಪ್ತಳಾದ ರಂಗಣ್ಣನ ತಾಯಿ
ಇಬ್ಬರು ಬ್ರಾಹ್ಮಣರು
ಸ್ಥಾನ-ರಾಮಪ್ಪರ ಕಾಲ-ಆಧುನಿಕ
----------------------------------------------------
ಪ್ರಥಮ ರಂಗ
ಸ್ಥಾನ:- ರಂಗಣ್ಣನ ಮನೆ ಮುಂದಿನ ಕೋಣೆ
[ಈತನ ಮುದಿ ತಾಯಿಯ ಅಂತ್ಯ ಕಾಲಾವಸ್ಥೆಯಲ್ಲಿ ಮಂಚದ ಮೇಲೆ ಮಲಗಿರುವಳು.
ರಂಗಣ್ಣನು ಪಕ್ಕದಲ್ಲಿರುವನು.., ವೆಂಕಮ್ಮನು ನರಸುವನ್ನೂ, ಕಿಟ್ಟಿಯ ಕೂಸನ್ನೂ ಸಂತೈಸುತ್ತಿರುವರು,
ಲಕ್ಷ್ಮೀಪತಿಯು ಕೋಣೆಯ ಮಧ್ಯದಲ್ಲಿ ಸ್ತಂಭಿತನಾಗಿ ನಿಂತಿರುವನು.]
ತಾಯಿ: (ರಂಗಣ್ಣನನ್ನು ಎಡಗೈಯಿಂದ ತಬ್ಬಿಕೊಂಡು) ಹಯ್ಯೋ?! ಮಗೂ... ನನ್ನ ಹದ್ನಾರ್ನೇ
ವಯಸ್ಸಲ್ಲಿ ವರ್ಷ ಕೂಡ ತುಂಬದ ನಿನ್ನ... ನನ್ಕೈಲಿಟ್ಟು... (ಮಗನನ್ನು ಬಾಚಿ ತಬ್ಬಿಕೊಳ್ಳುತ್ತಾ)
ನಮ್ಮಿಬ್ಬರನ್ನೂ ಬಿಟ್ಬಿಟ್ಹೋದ ನಿಂಮ್ತಂದೇಗೆ... ಈ ಎರಡು ವರ್ಷಗಳ ಶ್ರಾದ್ದ ತಪ್ಹೋದ್ಮೇಲೆ...
ಸತ್ರೂನೂವೆ ನನಗ್ಸದ್ಗತಿ ತಾನೇ ಎಲ್ಲೀದೂ?... ಹಯ್ಯೋ !... ಕಾದಿದ್ದೂ... ಕಾದಿದ್ದೂ... ಕೊನೇಗೆ...
ಮೋಸ್ಹೋದ್ನೆಲ್ಲಾ.. (ಕೈಯನ್ನು ನರಸುವಿನ ಕಡೆಗೆ ತೋರಿಸಿ) ಯಾಕ್ಹುಟ್ಟಿದ್ಲೀ ಶನೀ?,.. (ತಗ್ಗಿದ
ಧ್ವನಿಯಿಂದ) ಗಂಗೋದ್ಕ... ಗಂಗೋದ್ಕ. ಮಗೂ... ಹೋಗ್ತಿಧೇನೆ... ಕಿವೀಲಿ.... ನಾರಾಯಣಾ,
ನಾರಾಯಣಾನ್ನು,
ವೆಂಕಟಲಕ್ಷ್ಮಮ್ಮ: (ಥಟ್ಟನೆ ಕಾಶೀ ತಾಮ್ರದ ಗುಗಾಕುಂಭವನ್ನು ಡಾಕ್ಟ್ರಿಗೆ ಕೈಯಿಂದ ತೋರಿಸಿ)
ಡಾಕ್ಟ್ರೆ ಅಕೋ! ಅಲ್ಲಿ... ಪಾತ್ರೆ ಉದ್ದರಣೆ ಪಕ್ದಲ್ಲೇ ಇದೆ.
[ಲಕ್ಷ್ಮೀಪತಿಯು ಗಂಗೋದಕವನ್ನು ತಾಮ್ರದ ಚೊಂಬಿನಿಂದ ಪಂಚಪಾತ್ರೆಗೆ ಬಗ್ಗಿಸಿ,
ರಂಗಣ್ಣನು ಉದ್ದರಣೆ, ಉದ್ದರಣೆಯಾಗಿ..."ಅಮ್ಮಾ! ಅಮ್ಮಾ!!” ಎಂದು ಹಂಬಲಿಸುತ್ತಾ,
"ನಾರಾಯಣ, ನಾರಾಯಣಾ” ಎಂದು ಜಪಿಸುತ್ತಾ ತಾಯಿಯ ಬಾಯಿಗೆ ಗಂಗೆಯನ್ನು
ಹಾಕುವನು.]
ನರಸು: (ತಾಯಿಯ ಭುಜಗಳನ್ನು ಹಿಡಿದು ಕುಲುಕಿ ಆಲುಗಿಸುತ್ತಾ) ಅಮ್ಮಾ!..
ನನ್ಯಾಕ್ಬೈತಾಳಜ್ಜಿ.... ಸಾಯೋವಾಗ?
ವೆಂಕಮ್ಮ: (ನರಸುವನ್ನು ತಬ್ಬಿಕೊಂಡು ತಗ್ಗಿನ ಧ್ವನಿಯಿಂದ) ಷ್! ಸುಮ್ನಿರ್ಕಂದ...
ಈಗ್ಸುಮ್ನಿರು,
ತಾಯಿ: ನಾ...ರಾ.ಯ... (ಪ್ರಾಣಗಳನ್ನು ಬಿಡುವಳು.)
ರಂಗಣ್ಣ: (ತಾಯಿಯ ದೇಹದ ಮೇಲೆ ಮುಖವನ್ನು ಹೊರಳಿಸುತ್ತಾ ಹಯ್ಯೋಮ್ಮಾ!..
ಸಾಯೋವಗ್ಕೂಡಾ..ಸದ್ಗತಿ ಮೇಲ್ಸಂದೇಹ ಪಟ್ಕೊಂಡ್ಸತ್ಯಾ?!!.. ಸಾರ್ಥಕ್ವಿದೇನೇ..
ನಾನ್ಹುಟ್ಟಿದ್ದಕ್ನಿನ್ಹೊಟ್ಟೇಲಿ... (ನರಸುವನ್ನು ಸೂಚಿಸಿ) ಯಾಕ್ಹುಟ್ಟಿದ್ಲೀ ಶನೀ?...
ನರಸು: (ತಾಯಿಯ ಭುಜಗಳನ್ನು ಹಿಡಿದು ಕುಲುಕಿ ಅಲುಗಿಸುತ್ತಾ) ಅಮ್ಮಾ... ಅಪ್ನೂವೆ !!...
ಬಯ್ತಾನೆ. ಏನಮ್ಮಾ... ನಾನ್ಮಾಡಿದ್ತಪ್ಪು?
ವೆಂಕಮ್ಮ: (ನರಸುವಿನ ಹಣೆಯನ್ನಾಘ್ರಾಣಿಸುತ್ತಾ ಕಣ್ಣೀರು ಸುರಿಸುತ್ತಾ ಗದ್ಗದ ಧ್ವನಿಯಿಂದ)
ದಮ್ಮಯ್ಯ... ನನ್ಕಂದ... ಸದ್ಯ ಈಗ್ಸುಮ್ನಿರು...
----------------------------------------------------------------------
ಲಕ್ಷ್ಮೀಪತಿ: (ಮಂಚವನ್ನು ಸಮೀಪಿಸಿ ಮೃತಳಾದಾಕೆಯ ಕಣ್ಣುಗಳನ್ನು ಮುಚ್ಚುತ್ತಾ)
ರಂಗಣ್ಣಾ... You must be brave...ನೀನೇ ಹಿಗೆ... give way... ಮಾಡ್ಬಿಟ್ರೆ ಮಿಕ್ಕೋರ್ಗತೆಯೇನು?
(ರಂಗಣ್ಣನನ್ನು ಮಂಚದಿಂದೀಚೆಗೆ ಸೆಳೆಯುತ್ತಾ)... ಇನ್ನಾಕೆ troubles ಏನು... ಮುಗೀತು!
ರಂಗಣ್ಣ (ರಂಗಸ್ಥಳದ ಮುಂಭಾಗವನ್ನು ಸೇರಿ ಲಕ್ಷ್ಮೀಪತಿಯನ್ನು ತಬ್ಬಿಕೊಂಡು, ಹಣೆಯನ್ನು
ಬಡಿದುಕೊಳ್ಳುತ್ತಾ... Toubles ಮುಗೀತೂ!!.. ಹಯ್ಯೋ! ಲಕ್ಷ್ಮೀಪತಿ... troublcsಎಲ್ಮುಗೀತು?...
ನಾಳೆ ಶವಾನ. ಸಾಗ್ಸೋಕೆ ಜನಗ್ಳು. ಸಿಕ್ಬೇಕಲ್ಲಾ!!! (ಜ್ಞಾನತಪ್ಪಿ ಲಕ್ಷ್ಮೀಪತಿಯ ಹೆಗಲ
ಮೇಲೆ ಒರಗವನು.)
(ಪರದೆಯು ಥಟ್ಟನೆ ಬೀಳುವುದು]
ದ್ವಿತೀಯ ರಂಗ
(ಸ್ಥಾನ: ರಾಮಪುರದ ಒಂದು ಬೀದಿ]
(ಕಾಲ: ಎರಡು ವರ್ಷಗಳ ಅನಂತರ, ರಂಗಣ್ಣನ ತಾಯಿಯ ಶ್ರಾದ್ಧದ ದಿನ.)
[ರಂಗಣ್ಣನು ತಲೆಯ ಮೇಲೆ ಗಂಟುಗಳನ್ನು ಇಟ್ಟುಕೊಂಡಿರುವ ಇಬ್ಬರು ಬ್ರಾಹ್ಮಣರೊಂದಿಗೆ ಪ್ರವೇಶಿಸುವನು.]
ರಂಗಣ್ಣ: ನಮ್ಮನೇ ಹೆಚ್ಗಟ್ಲೇಗೆ ಇವತ್ತು ಬ್ರಾಹ್ಮಣ ಸಿಕ್ಕೋದಸಾಧ್ಯ ಅಂತ ನಿಶ್ಚಯಿಸ್ಕೊಂಡು,
ನಾನ್ಕೂತದ್ದೂ, ದಾರಿ ತಪ್ಪಿ, ನಮ್ಮೂರ್ಕಡೆ ತಿರ್ಗಿ, ಹಸ್ದು ನೀವ್ಗಳು ನನ್ಸೇರಿದ್ದೂ, ಇವೆರ್ಡೂ.
ಎಕ್ಕಾಲದಲ್ಲೆ ಹೊಂದಿದ್ದು... ನೀವ್ಹೇಳೋ ಹಾಗೆ, ದೈವನಿಯಾಮ್ಕ... ಆದ್ರೆ... ನಮ್ಮನೇ ಶ್ರಾದ್ಧಾನ
ಜರಗ್ಸೋಕೆ ನನಗಿರೋ ಆತುರದಲ್ಲಿ ತಡೀಲಾರ್ದ ಹಸ್ವನ್ನ ತೀರ್ಸ್ಕೋಳ್ಳೊಕಾತುರ್ಪಡ್ತಿರೋ ನಿಮ್ಮನ್ನ
ನಮ್ಮನೇ ನಿಮಂತ್ರಣಕ್ಕೊಪ್ಪಿಸ್ಬಿಟ್ಟು... ಆದ್ರಿಂದ ಮುಂದೆ ನಿಮಗೊದಗ್ಬಹುದಾದ ಅಪಾಯಕ್ಕೆ
ನಿಮ್ಮನ್ಗುರಿ ಮಾಡೋದು ನನಗೆ ಧರ್ಮವಲ್ಲ, ಬ್ರಾಹ್ಮಣ್ಯವಲ್ಲ, ಆದ್ರಿಂದ ನನ್ನ ಪುರ್ವೋತ್ತರಾನ್ಕೇಳಿ
ಮನಸ್ಸಿಗೆ ಮಂದಣ್ಮಾಡ್ಕೊಂಡು, ಈ ಕೆಲಸದಿಂದ ನಿಮ್ಹೆಗಲಿಗ್ಹತ್ಬಹುದಾದ ಜವಾಬ್ದಾರಿನ ವಹಿಸ್ಕೋಬೇಕೇ
ಹೊರ್ತು ನೀವು ಕೇವ್ಲ ಕ್ಷುತ್ಬಿಡೇನ ತೀರಿಸ್ಕೊಳ್ಳೋ ಆತುರದಲ್ಲಿ... ದುಡುಕಬಾರ್ದು... ನನ್ಹೆಸ್ರು
ರಂಗಣ್ಣ ಗೋತ್ರ ವಾಸಿಷ್ಟ,
1ನೇ ಬ್ರಾಹ್ಮಣ: ಮತ್ತಿನ್ನೇನ್ಲೈಕು, ಸ್ವಾಮಿ? ವಾಸಿಷ್ಟ ಗೊತ್ತದ ಬ್ರಾಹ್ಮಣನೇ
ನಿಮಂತ್ರಣಕ್ಕೊಪ್ಕೊಂಡಾಕ್ಷಣ್ವೇ ಆಪಾಯಾ ಅಂದ್ರೇನ್ನಮಗೆ...? ಅದೇನ್ಜವಾಬ್ದಾರಿ ಹತ್ತೀತು ನಮ್ಹೆಗಲ್ನ... ನಾವೆಲ್ಲ.. ಬ್ರಾಹ್ಮಣ್ರು ತಾನೆ?
2ನೇ ಬ್ರಾಹ್ಮಣ: ಹೌದು ಭಟ್ರೆ... ಹೌದು ಸ್ವಾಮಿ, ಅದೇ ನನ್ಗೂ ಆಶ್ಚರ್ಯ... ನಿಮ್ಮನೇ
ಬ್ರಾಹ್ಮಣಾರ್ಥಕ್ಕೊಪ್ಕೊಂಡು ನಿಮ್ಮಿವತ್ತಿನ್ಕೃತ್ಯಾನ ನಡ್ಸಿದ್ರಿಂದ ನಿಮ್ಪರಾರ್ಥದಲ್ಲಿ ನಾವು ಭಾಗಿಗಳೇ
ಹೊರ್ತು ಅಪಾಯ ಎಂಥಾದ್ದು ನಮಗೆ ?
----------------------------------------------------------
ರಂಗಣ್ಯ: ಕೇಳೀ... ಇವತ್ತಿನ್ಕೆಲ್ಸಾನ ನೀವುಗ್ಳು ನಡ್ಸಿಕೊಟ್ರೆ, ನಿಮಗೊಂದ್ವೇಳೆ ಒದಗೊ
ಆಪಾಯಾನ... ಒಂದೇ ಮಾತ್ಲಿ ಹೇಳ್ಬಿಡ್ತೇನೆ. ಬಹಿಷ್ಕಾರ... ನನಗ್ಯಾವ ಸನ್ನಿಧಾನದಿಂದ ಬಹಿಷ್ಕಾರ
ಬಿದ್ದಿದೆಯೊ ಅದೇ ಸನ್ನಿಧಾನದಿಂದ ನಿಮ್ಗೂ ಬೀಳ್ಬಹ್ದು, ಬಹಿಷ್ಕಾರ!!
1ನೇ ಬ್ರಾಹ್ಮಣ: (ಬೆಚ್ಚಿಬಿದ್ದು) ಬಹಿಷ್ಕಾರ!? ನಿಮಗೆ ಸನ್ನಿಧಾನದಿಂದ!?... ಕ್ಷಮ್ಸಿ,
ಎಷ್ಟೋ ಕೃತ್ರಿಮಾನ ಮಾಡೋರ್ನ ಕರುಣ ದೃಷ್ಟಿಯಿಂದ ನೋಡಿ... ಅಲ್ಪಸ್ವಲ್ಪ ಪ್ರಾಯಶ್ಚಿತ್ತದಿಂದ್ಲೇ
ಪುನಃ ಶುದ್ದಿಮಾಡಿ ಬ್ರಾಹ್ಮಣ್ಕೇನುಳಿಸ್ಕೋಟ್ಟು ಬದಕ್ಸಿರೋ ಶಾಂತಿಮೂರ್ತಿಯಾದ ಸನ್ನಿಧಾನ... ನಿಮ್ಮಂಥವರಿಗೇಂದ್ರೇನು?! ಬಹಿಷ್ಕಾರಾಂದ್ರೇನು?... ನೀವ್ಮಾಡಿದ್ಮಹತ್ಪಾಪ, ಕೋಪಿಸ್ಕೋಬೇಡಿ,
ಏನ್ ಬ್ರಹ್ಮತ್ಯವೇ, ಸ್ತ್ರೀಹತ್ಯವೇ, ಶಿಶುಹತ್ಯವೇ... ಇಲ್ಲಾ ನೀವೇನು ಮಾಂಸಾದರೇ?!...
ಅರ್ಥ್ವಾಗ್ಲಿಲ್ಲಾ?...
ರಂಗಣ್ಣ: ದಯವಿಟ್ಕೇಳೀ, ನೀವ್ಹೇಳೋ ಹತ್ಯಗಳ್ನ ನಾನ್ಮಾಡಿದ್ದೇ ಆದ್ರೆ, ಸನ್ನಿಧಾನ ಇರ್ಲೀ
ಸರ್ಕಾರಾನೇ ಗಲ್ಲಿಗ್ಹಾಕ್ತಿತ್ನನ್ನ! ಇನ್ ಮಾಂಸ ಭಕ್ಷಣ್ವೋ.... ಮಾಂಸಭಕ್ಷಿಗ್ಳು, ಮಧುಪಾಯಿಗ್ಳು ಆದ
ಎಷ್ಟೋ ಧನ್ವಂತ ಬ್ರಾಹ್ಮಣ್ರಿಗೆ ಇರೋ ಧನ ನನಗೂ ಇದ್ದಿದ್ರೆ, ಆವರಿಗುಳಿದಿರೊ ಬ್ರಾಹ್ಮಣ್ಕೆ ನನಗೂ
ಉಳೀತಿತ್ತು... ನಾನೂ ನನ್ಧರ್ಮದಲ್ಯೂ ನನ್ನಾಚಾರದಲ್ಯೂ ಎಷ್ಟ್ರ ಮಟ್ಟಿಗೆ ಈ ಕಲಿಯುಗದಲ್ಲಿ,
ಬ್ರಾಹ್ಮಣ, ಗೃಹಸ್ಥ, ತನ್ಜಾತೀ ಧರ್ಮಾನ ಜರಗ್ಸೋಕೆ ಸಾಧ್ಯವೋ ಅಷ್ಟನ್ನೂ, ಏಳೆಬಿಡದೇ ನಡಾಸ್ತಾ
ಬಂದಿದ್ರೂನೂವೇ... ನನ್ಮಹತ್ಪಾಪ ನನಗಾಲಕ್ಷ್ಮೀಕಟಾಕ್ಷವಿಲ್ಲದ್ದು. ಧನಪಿಶಾಚಿ ಬಾಯ್ಲಿಬಿದ್ದು, ಆ
ಧನದಾವೇಶ್ದಲ್ಲಿರೊ ಸಮಾಜ, ಧನದಲ್ದಿರೋ ನನ್ಮೇಲೆ ಎತ್ತಿರೋ ಕೈಯ್ನ... ಸನ್ನಿಧಾನಾನೂ,
ಆನುಮೋದಿಸಿ, ಧನಸಂಚಯನ ಮಾಡೊ ವೈಶ್ಯವೃತ್ತೀನ್ನೂ ಸ್ವಧರ್ಮದಲ್ಲಿ ಸಂಯೋಗಿಸಿದ
ಬ್ರಾಹ್ಮಣ ಬ್ರಾಹ್ಮಣ್ನೇ ಹೊರ್ತು, ಧನ್ವಿಲ್ದ ಬ್ರಾಹ್ಮಣ ಆಬ್ರಾಹ್ಮಣಾಂತ ತೀರ್ಮಾನ್ಸಿ, ಬಹಿಷ್ಕಾರಾನ
ಕರುಣಿಸಿದ್ದು... ತಾವ್ಹೇಳ್ದ ಕರುಣಾಪೂರಿತರಾದ ಶಾಂತಿಮೂರ್ತಿ... ಸನ್ನಿಧಾನ... ಈ ಕಾಲ್ದಲ್ಲಿ
ಭಾಗ್ಯವಂತ್ರಿಗೆ ಬ್ರಾಹ್ಮಣ್ಕೇನೇ ಹೊರ್ತು, ಭಾಗ್ಯವಿಲ್ದ ಬಡವ್ರಿಗೆ... ಬಹಿಷ್ಕಾರ. ನನ್ಚರಿತ್ರೇನೆ
ವಿವರಿಸ್ತೇನೆ... ಅದನ್ನ ತಾಳ್ಮೆಯಿಂದ್ಕೇಳಿದ್ಮೇಲೇನೇ ತಮ್ಮುಂದಿನ್ಕ್ರಮಾನ ಯೋಚ್ಸಿ ನಿರ್ಣಯಿಸ್ಕೊಳ್ಬೇಕು.
ನನ್ಗಾರ್ಹಸ್ತ ಧರ್ಮಾನ ಯಥಾವಿಧಿ ಜರುಗುಸ್ತಿದ್ದೆ... ನನ್ಹೋಟ್ಟೇಲ್ಹುಟ್ಟಿದ್ಮಗ್ಳು ವಿವಾಹವಯಸ್ನ
ಹೊಂದಿದಾರಭ್ಯ... ವರನ್ನಿಶ್ಚಯ್ಸೊಕೆ ನಾನ್ಪಟ್ಕಷ್ಟ ಅಷ್ಟಿಷ್ಟಲ್ಲ... ಆದ್ರೆ ನಾಲ್ವೇಳ್ವಾಗೆ ಧನಪಿಶಾಚಿಗೆ
ದಾಸರಾದ ಸಮಾಜ ಏರ್ಪಡ್ಸಿರೋ ವರಶುಲ್ಕಾ ವದಗ್ಸೋ ಹಣ, ಕೇವ್ಲ ಬಡ ಬ್ರಾಹ್ಮಣ್ನಾದ ನನ್ನಲ್ಲಿ
ಇಲ್ಲದ್ರಿಂದ ವರ ಸಿಕ್ಕಿಲ್ಲ... ಸಮಾಜ ಸನ್ನಿಧಾನಗಳ ಏರ್ಪಾಟಿಗೆ ವಳಪಡ್ದ ಪ್ರಕೃತಿ ನಮ್ಮೆಲ್ಕನಿಕರ್ಡಿಡ್ದೇ
ಕಾಲಕ್ರಮೇಣ ನನ್ಪುತ್ರೀನಾ ರಜಸ್ವಲೆಯನ್ನಾಗಿ ಮಾಡ್ಬಿಟ್ಲು... ಇನ್ನು ಅವಿವಾಹಿತಳಾದ ರಜಸ್ವಲೇನ
ಮನೆಯಿಂದ ವದ್ದೋಡಸ್ದೆ ಇರೋ ಬ್ರಾಹ್ಮಣ, ಚಂಡಾಲ್ನಿಗೆ ಸಮಾನ ಅಂತ ತೀರ್ಮಾನ್ಸಿ ಬಹಿಷ್ಕಾರ ಕರುಣ್ಸಿದ್ದು...ಸನ್ನಿಧಾನ. ಇದ್ರ ಫಲ ಎರ್ಡು ವರ್ಷದ ಶ್ರಾದ ತಪ್ಹೋಯ್ತು ನಮ್ತಂದೇಗೆ,
ಆಮೇಲ್ಸತ್ನನ್ತಾಯಿ ನನ್ಕೈಯಿನ್ಪಿಂಡ ಮುಟ್ದೇ ಇರೋ ನಮ್ತಂದೇನ ಸೇರೋ ವಿಷ್ಯದಲ್ಲಿ ಸಂದೇಹ
ಪಟ್ಗೊಂಡು ಪ್ರಾಣಬಿಟ್ಲು, ಅವ್ಳು ಹೋದ್ಮೇಲೋ ನನ್ದೈಹಿಕ ಸ್ಥಿತಿ ಸ್ವಲ್ಪ ಗುಣ್ವಾಗಿ, ಸರ್ಕಾರಿ
ಉದ್ಯೋಗದಲ್ಲಿ ಇರೋ ನನ್ಗೆ ವರ್ಮಾನ ಹೆಚ್ಚುತ್ಲೂನೂವೆ... ಮಿಕ್ಮನೆಗ್ಳಲ್ಲಿ ಎಂಟಾಣೆಗೆ ಬಿಡೋ
ತರ್ಪಣಕ್ಕೆ ಮುಂದೊದಗ್ಭಹುದಾದ ಪ್ರಾಯಶ್ಚಿತ್ತಕ್ಕೇಂತ ಎಂಟ್ರೂಪಾಯಿ ನನ್ನಿಂದ ಸುಲ್ಕೊಂಡು,
ಶ್ರಾದಕ್ಕೂನೂವೇ ಮಿಕ್ಕೊರ್ಮನೇಲ್ಸಂಪಾದ್ಸೋದ್ರ ಹತ್ರಷ್ಟು ನನ್ಹತ್ರ ಎಳ್ಕೊಂಡು ಈ ಎರ್ಡು
------------------------------------------------------------------------
ವರ್ಷ್ವೂ ನಮ್ಮನೇ ಕೃತ್ಯಗಳ್ನ... ನನಗ್ಬಹಿಷ್ಕಾರ ಬಿದ್ದಿದ್ರೂನೂವೇ ಸಾಂಗೋಪಾಂಗ್ವಾಗಿ ನಡೆಸ್ತಲೇ
ಇದ್ದಾರೆ, ಬ್ರಾಹ್ಮಣ್ರು. ಅದೇ ಪ್ರಕಾರ ನಿಮ್ಗೂನೂ ಕಟ್ಲೆ ಏರ್ಪಡ್ಸಿರೋ ಸಂಭಾವ್ನೆಗೆ ಹತ್ರಷ್ಟು
ಒದಗ್ಸೋಕ್ನಾನೂ ಸಿದ್ಧ. ಆದ್ರೆ ನಿಮಗಿದನ್ನೆಲ್ಲಾ ವಿವರಸ್ದೇನೇನೆ ನಿಮ್ಕೈಯಿಂದ ನನ್ಕೃತ್ಯಾನ್ಮಾಡಸ್ಕೊಂಡು
ಮುಂದಕ್ಕೆ ನಿಮ್ಮನ್ನೂ ಸಿಗ್ಹಾಕಿದ ಪಾಪ ನನ್ತಲೇಮೇಲೆ ಬೀಳ್ಬಾರ್ದು ಅಂತ ವಂಚ್ನೆ ಇಲ್ದೆ ವಿವರ್ಸಿದ್ದು,
ನನ್ಚರಿತ್ರೇನ.... ಆಕೊ ನೋಡಿ... ಈ ಬೀದಿಯುದ್ದಕ್ಕೂ ಎರ್ಡ್ಸಾಲುಗಳೂ..., ನಮ್ಜ್ಞಾತಿಗ್ಳ
ಮನೆಗ್ಳು... ಇವುಗಳೊಂದೊಂದ್ಮನೇಲೂ, ಅನ್ಯೋನ್ಯ ಐಕ್ಮತ್ಯಗಳ್ನ ಕೊಡ್ದಿದ್ರೂನೂವೆ, ಪರಸ್ಥಳದ
ಬ್ರಾಹ್ಮಣ್ರಿಗನ್ನಾಹಾಕೋ ಯೋಗ್ತೆ ಕೊಟ್ಟಿಧಾನೇ ದೇವ್ರು ನಂಕುಟುಂಬಕ್ಕೆಲ್ಲಾ!... ಆದ್ರಿಂದ
ಒಂದೊಂದ್ಮನೇಲು ವಿಚಾರ್ಸಿ... ನನ್ಚರಿತ್ರೇನ ಚನ್ನಾಗರಿತು ನನ್ಜ್ಞಾತಿಗಳ್ಕಥೇನೂ ಕೇಳಿದ್ಮೇಲೆ, ನಿಮ್ಮನಸ್ಸಂಪೂರ್ಣ್ವಾಗೊಪ್ಸಿ... ನಮ್ಮನೇ ಕರ್ಮಗಳ್ಗೊಪ್ಕೊಂಡು... ನನ್ಪಿತೃಗಳಿಗ್ಪಿಂಡಾನ್ತಲ್ಪ್ಸೋ...
ಸಹಾಯಾನ್ಮಾಡೋಕೆ ನಿಮಗಿಷ್ಟ್ವಾಗಿದ್ಪಕ್ಷಕ್ಕೇನೆ.... ನನಗೂ... ನನ್ನೃಹಿಣಿಗೂ - ನಂಪಿತೃಗಳಿಗೂ...
ತೃಪ್ತೀ ಅಂತ್ನಾನ್ಹೇಳ್ಬೇಕಾದ್ನನ್ಭಾರ!... ನಾವೀಗ್ಹಾದ್ಬಂದ ಕಾಳಮ್ಮನ್ಗುಡಿ ಪ್ರಾಕಾರ್ದಲ್ಲೇ ಕಾದಿರ್ತೇನೆ.
ಹೋಗ್ಬನ್ನಿ
.
ಬ್ರಾಹ್ಮಣ್ರು: ಆದಕ್ಕೇನು ಸ್ವಾಮೀ? ನಿಮ್ಮಿಷ್ಟವಿದ್ದಂತೇ ಆಗ್ಲಿ,
[ರಂಗಣ್ಣನು ಹಿಂದಕ್ಕೂ, ಬ್ರಾಹ್ಮಣರು ಮುಂದಕ್ಕೂ ಹೊಗುವರು.]
ತೃತೀಯ ರಂಗ
(ಸ್ಥಾನ: ರಂಗಣ್ಣನ ಮನೆ ಮುಂದಿನ ಕೋಣೆ)
[ರಂಗಣ್ಣನ ಐಹಿಕ ಸ್ಥಿತಿಯು ಗುಣವಾಗಿರುವುದು ಕೋಣೆಯಲ್ಲಿ ವಿರ್ಪಡಿಸಲ್ಪಟ್ಟಿರುವ ಕುರ್ಚಿ,
ಮೇಜು, ಕುಗನ್ನಡಿ ಇತ್ಯಾದಿಗಳಿಂದ ವ್ಯಕ್ತಪಡುವುದು.)
ಕಾಲ: ದ್ವಿತೀಯ ರಂಗದ ಕಾಲ.
[ವೆಂಕಟಲಕ್ಷ್ಮಮ್ಮ ನರಸವೂ ಪ್ರವೇಶಿಸುವರು.]
ನರಸು: ಅಮ್ಮಾ, ಅನ್ನತ್ತಪ್ಲೇನಿಳ್ಸಿ... ಗಂಜೀ ಬಸ್ದದ್ದಾಯ್ತು... ತರ್ಕಾರಿ... ಗಡ್ಡೆಗೆಣ್ಸುಗ್ಳು
ಬೇಯ್ತಾ ಇದೆ... ಇನ್ನೇನಮ್ಮಾ?
ವೆಂಕಮ್ಮ: ನಾಳೆಯಲೆ ಕಟ್ಬಿಚ್ಚಿಡು... ಇದೋ ಬಂದೆ ನಾನೇ (ನರಸುವು ನಿಷ್ಕ್ರಮಿಸುವಳು)...
ಕಿಟ್ಟೂ ಯಾಕ್ಬರ್ಲಿಲ್ವೋ !! ಇನ್ನೂ... ಇನ್ನಿವರ್ಹೊದ್ಕೆಲ್ಸ್ವೇನಾಯ್ತೋ ಕಾಣ್ನೆಲ್ಲಾ... ಇದ್ಯಾವ
ಪರಾಕೃತಪಾಪದ್ಫಲ್ವೋ... ಇದೆಂಥಾ ಪರಿಕ್ಷೆಯೋ ... ದೇವ್ರೇ ಬಲ್ಲ... ಸದ್ಯ ಈವತ್ತಿನ್ಕರ್ಮಕ್ಕೆ
ಇಬ್ಬರ್ಬ್ರಾಹ್ಮಣ್ರು ಸಿಕ್ಕಿದ್ರೆಲ್ಲಾ ಆದ್ಹಾಗಾಯ್ತು... (ಕಣ್ಣುಗಳಿಂದ ಕೇಳುತ್ತಾ) ಯಾರು! ಇವ್ರೇನೋ...
ಅಲ್ಲಾ... ಓ... ಕಿಟ್ಟುನೇ...!
ಕಿಟೂ.: (ಪ್ರವೇಶಿಸಿ] ಇಕೋಮ್ಮಾ ಪಂಚೆಗ್ಳು... ಇನ್ನೇನ್ ಸ್ನಾನಾ ಮಾಡಿ.ಧೋತ್ರಗಳ್ನ
ನೆನಸಿ ಒಂಗ್ಸೋದ್ತಾನೆ?
-------------------------------------------------------
ವೆಂಕಮ್ಮ: ಹೂಂ.
ಕಿಟ್ಟೂ: (ಬೀದಿಬಾಗಿಲ ಕಡೆ ತಿರುಗಿ) ಅಕ್ಕೋ ಅಪ್ನೂ ಬಂದ... ಮುಖಾನ್ನೋಡಿದ್ರೆ,
ಬ್ರಾಹ್ಮಣ್ರು ಸಿಕ್ಕಿದ್ಹಾಗ್ಯೇ ಕಾಣುತ್ತೆ, ನಾನಿನ್ ಸ್ಥಾನಕ್ಹೊರಡ್ತೇನಮ್ಮಾ: ಹಂಡೇಲ್ಲ್ನೀರಿಧೆ ತಾನೆ ?
ವೆಂಕಮ್ಮ: ಹೂಂ ನೀರೂ ಸೇದಿ... ಹಂಡೇನೂ ತುಂಬಿ ಕಟ್ಗೇನೂ ತಾನೆ ವಡ್ಡು...
ಕಾಸಿಟ್ಟಿದಾಳಪ್ಪಾ... ನರ್ಸು...
(ಕಿಟ್ಟೂ ನಿಷ್ಕ್ರಮಿಸುವನು, ರಂಗಣ್ಣನು ಪ್ರವೇಶಿಸುವನು.]
ವೆಂಕಮ್ಮ: ಸಿಕ್ಕಿದ್ರೇ... ಬ್ರಾಹ್ಮಣ್ರು!?
ರಂಗಣ್ಣ; (ಎಗತಾಳಿಯಂದ) ಸಿಕ್ಕಿದ್ಹೌದು ... ಆದ್ರವ್ರು... ಬ್ರಾಹ್ಮಣ್ರೋ! ಅಲ್ವೋ!...
ನನಗಿನ್ನೂ. ಸಂದೇಹವೆ!
ವೆಂಕಮ್ಮ: (ಆತುರದಿಂದ) ಇದೇನಿದೂ?.. ಅರ್ಥ್ವಾಗ್ಲಿಲ್ಲ ನನ್ಗೆ... ಯಾರದು....
ವೊಪ್ಕೊಂಡಿರೋದು... ನಮ್ಮೂರಲ್ಲಿ?... ನಮಗ್ತಿಳೀದವ್ರು?
ರಂಗಣ್ಣ: ಯಾರೇನೂ? (ತಾತ್ಸಾರವಾಗಿ) ಈ ವೂರ್ನೋರೂಂಬೋ ಚಪ್ಲ... ಇನ್ನೂ
ಇಡ್ಕೊಂಡಿದೀಯಾ ನಿನ್ಮನಸ್ನಲ್ಲಿ? ಬೆಳಗ್ಗಿಂದಾ ತಿರ್ಗಿ ತಿರ್ಗಿ .. ವೂರ್ಬಾಕ್ಲು ಸೇರಿ... ಸುಂಕದ್ಕಟ್ಟೇಲ್ಕೂತಿದ್ದೆ...
ಕಾಲ್ಸೋತು !... ಬಂದ್ಸೇರಿದ್ರಿಬ್ರು ಪರಸ್ಥಳ್ದ ಬ್ರಾಹ್ಮಣ್ರು... ಕೇಳಿದರ್ಯಥಾಪ್ರಕಾರ... ವೂರ್ಹ್ಯಾಗಿಧೆ....
ಮಳೆ ಹ್ಯಾಗೆ... ಬೆಳೆ ಹ್ಯಾಗೆ ಜನಸಂಖ್ಯೆ ಜನಾರೋಗ್ಯ... ಅಮಲ್ದಾರ್ರ ಹೆಸ್ರು... ಕೊನೆಗೂನೂ...
ಯಥಾಪ್ರಕಾರವಾಗ್ಯೇ ಮುಟ್ಸೇ ಮುಟ್ಸಿದ್ರು... ಪ್ರಶ್ನೇನಾ... ಊಟದನ್ಕೂಲ್ದ ವಿಷ್ಯಾನ... ಇನ್ನೇನು
ಹೇಳ್ಕೊಂಡೆ ಹಣೆಬರಾನೆ... ನಿಮಂತ್ರಣಕ್ಕೆಂತ... ಆಡ್ತಿದ್ನನ್ನ ಬ್ರಾಹ್ಮಣ್ರ ಬೇಟೇನಾ !
ಇನ್ನೊಪ್ಕೊಳ್ಳೋಕೇನವರಿಗಭ್ಯಂತ್ರ!... ಊರ್ಕಡೆ ಕಾಲ್ಹಾಕ್ತಾ... ಹಣ್ಜಾರೋದು!....
ಸಕ್ರೇಪಟ್ಣದಲ್ಬೀಳೊದು !.... ಹಾಲ್ನಲ್ಧುಮ್ಕೋದು, ಅಂಬೊ ಉಪ್ಮಾನಾನ; ನಾನ್ಹುಡ್ಕಿ ದಣ್ದು,
ಸುಂಕದ್ಕಟ್ಟೇಲಿ ಕೂತಿದ್ದದ್ದಕ್ಕೂ, ಅವ್ರೂನೂ ಆ ಕ್ಷಣ್ವೆ ಬಂದು ನನ್ಸಂಧ್ಸಿದ್ದಕ್ಕೂ ಹೊಂದಿದ್ದು,
ದೈವನಿಯಾಮ್ಕ ಅಂತ ಹೇಳ್ಕೊಳ್ತಾ ಬಂದ್ಸೇರಿದ್ವಿ... ನಮ್ಜ್ಞಾತಿಗ್ಳ ಸರ್ಹದ್ನ.., ಇನ್ನೇನ್ನಿನಗ್ಗೊತ್ತಿಲ್ಲದ್ದು!?..
ಬಂತು... ಹೋದ್ವರ್ಷ್ದ ಶ್ರಾದ್ಧದ ಜ್ಞಾಪ್ಕ!... ಬಂದ್ಬ್ರಾಣ್ರನ್ನೆಲ್ಲಾ... ಬಹಿಷ್ಕಾರದ ಗೊಗ್ಗಯ್ಯತ್ತೋರ್ಸಿ,
ಹೆದರ್ಸೋಡ್ಸಿದ್ದು... ಇನ್ನನ್ಜ್ಞಾತಿಗ್ಳ ಬಾಯಿಂದ್ಹೊರಟು ಅವ್ರು ತಿಳ್ಕೊಳ್ಳೋಕ್ಬದ್ಲಾಗಿ... ನಾನೇ
ತಿಳ್ಸೋದ್ಮೇಲೂ ಅಂತ... ನಮ್ಮನೇ ವಿಚಿತ್ರ ಚರಿತ್ರೇನ... ವಿವರ್ಸಿದ್ದಲ್ದೆ... ಅವ್ರಿಗೂ ಹೇಳ್ದೆ
ಬುದ್ದಿವಾದಾನ... ಹಸಿವಿನ್ಗಲಾಟೇಲಿ ನಮ್ಮನೆ ನಿಮಂತ್ರಣಕ್ಕೊತ್ತೊಂಬಿಟ್ಟು, ಮುಂದ್ಬೀಳ್ಬಹುದಾದ,
ಬಹಿಷ್ಕಾರ ಅಪಾಯಾನ ಆವ್ರಿಗೆ ಮೊದ್ಲೇ ತಿಳಿಸ್ದೇ ಇದ್ದಾಪ ನನಗ್ಬೇಡ, ನಮ್ಜ್ಞಾತಿಗಳ್ನ ವಿಚಾರ್ಸಿ,
ನನ್ಚರಿತ್ರೇನ ಅವರ್ಬಾಯಿಂದರ್ತು, ಆಮೇಲೊಂದ್ವೇಳೆ, ನನ್ನ ಸ್ಥಿತಿನಾ ಕನಿಕರ್ಸಿ, ಧೈರ್ಯದಿಂದ
ಇವತ್ತಿನ್ಕೆಲ್ಸಾನ, ನಡ್ಸಿ ಕೊಡೋಕೆ ಒಪ್ಪೋದಾದ್ರೇನೆ ನನ್ಮನಸ್ಸಿಗೆ ನೆಮ್ದಿ, ಅಂತ್ಹೇಲಿ ಕಳ್ಸಿಬಿಟ್ಟು,
ಹೃದಯಾ ಬೇಯ್ತಾ, ಕಾಳಮ್ಮನ್ಗುಡಿ ಪ್ರಕಾರದಲ್ಕೂತಿದ್ದೆ!... ನಾನ್ ಹಾಕ್ದಂದಾಜ್ಗಂರ್ಧ್ಗಂಟೇ
ಮುಂಚೇನೇ ಬಂದ್ರುತಿರ್ಗೀ !... ಜರಗ್ಡ ವ್ಯವ್ಹಾರ ವಿಶೇಷಗಳ್ನೆಲ್ಲಾ ವಿವರ್ಸ್ದ್ರು !... ಹೊಸ್ದೇನೂ ಇಲ್ಲ!....
ನನ್ನೊಡ್ಡಪ್ಪನ ಮಗ ತನ್ಜವ್ಳೀ ಅಂಗ್ಡೀನೇ ಇವ್ರ ಮುಂದಿಟ್ಟು... ತನ್ಮನೆ ಮೃಷ್ಟಾನ್ನ ಬಿಟ್ಟಿಟ್ಟು... “ಈ
---------------------------------------------------------
ಊರಲ್ಲಿ ಜಾತ್ಗೆಟ್ಟ ರಂಗಣ್ಣನ್ಮನೇಲಿ ತಿಂದ್ಭ್ರಾಷ್ಟಾನ್ನ ನಿಮ್ಮೈಲರ್ಗ್ಗೀತೆ ?... ಮತ್ತೆ ಮುಂದ್ಸಂಭವ್ಸೋ
ಬಹಿಷ್ಕಾರಾನೂ ತಪ್ಪಿತೇ ನಿಮ್ಗೆ... ಇಲ್ಲ. ಆ ಮನೆ ಧೋತ್ರದ್ಮೇಲೇನಾದ್ರೂ ಚಪ್ಲ ಬಿದ್ಪಕ್ಷಕ್ಕೆ...
ನನ್ನಂಗ್ಡೀಲಿ ನಿಮಗೇಕಾದ್ದಸ್ತ್ರಗಳ್ನಾ ನೀವಾರ್ಸ್ಸಿಕೊಂಡದ್ರಿಂದ ನನಗೇನೂ ನಷ್ಟ್ವಿಲ್ಲ!!... ಇನ್ನಿದರ್ಮೇಲೆ...
ನೀವಲ್ಲೇ ಹೋಗೋದಾದ್ರೆ... ನಿಮ್ಮೂರ್ನೀವು ಮುಟ್ಟೋಕ್ಮುಂಚೆ ನಿಮ್ಮೀ ಪ್ರತಾಪ ನಿಮ್ಮೂರ್ತಲ್ಪೋ
ವಿಷ್ಯದಲ್ಲೇನೂ ಸಂದೇಹ ಇಟ್ಕೋಳ್ಬೇಡಿ” ಅಂದದ್ನೂ... ಮತ್ತಿವ್ರು ತಲೆ ಕೆರೀತ... ಜನಿವಾರಗಳ್ನೀವ್ತಾ,
ನ್ಯಾಯಾನ್ಯಾಯಗಳನ್ನಾಲೋಚ್ಸಿ “ನಿಮಂತ್ರಣಕ್ಕೇತ.. ಬ್ರಾಹ್ಮಣ್ರನ್ಹುಡುಕ್ತಾ... ಒಬ್ಗೃಹಸ್ಥ
ಕಾದಿರೋವಾಗ.., ಇನ್ನೊಂದ್ಕಡೆ ಭೋಜ್ನ ಮಾಡೋದು ಮಹತ್ಪಾಪಾ” ಅಂತ ತೀರ್ಮಾನಿಸ್ಕೊಂಡು
ಬಂದ್ದಿಟ್ಟದ್ನೂ, ಹೇಳ್ಕೊಂಡ್ರು! ... ಅಲ್ದೇ ನಾನ್ನಿರೀಕ್ಷಿಸ್ದ್ಹಾಗೇನೇ ಕೊನೆಗೆ ಶುಂಠೀನೂ ಸೋಕ್ಸಿದ್ರು !!...
ವೆಂಕಮ್ಮ: (ಹುಬ್ಬುಗಳನ್ನು ಎತ್ತುತ್ತಾ ಶುಂಠೀ !! ಅದೇನು ?
ರಂಗಣ್ಣ: (ಅತಿ ಉದಾಸೀನವಾಗಿ) ಏನೇನೂ?... ನನ್ಗ್ಹೆಡ್ಮುನ್ಷಿಗಿರೀಗೆ ಆದ ಪ್ರಮೋಷನ್ಹು
ಬಿತ್ತೂಂತ್ಕಾಣತ್ತೆ ಅವರ್ಕಿವೀಗೆ ... ಅವರಲ್ಲೊಬ್ಬ ಭಾವಮೈದನ್ನ... ಇಲ್ನಾನ್ನಾಫೀಸಿಗೆ ಸೇರಿಸ್ಕೊಂಡ್ರೆ
ಅವರುಟುಂಬಕ್ಕೆಲ್ಲಾ ಮಹದುಪ್ಕಾರ್ವಂತೆ. ಅಲ್ದೇ ನಾಳೇ ವಂದ್ವೇಳೆ ಬಹಿಷ್ಕಾರ... ಪ್ರಾಯಶ್ಚಿತ್ತ
ಮುಂತಾದವುಗ್ಳು ದುರದೃಷ್ಟವಶಾತ್... ಒದಗುವ ಸಂಭವಕ್ಕೆ ತಯಾರಾಗಿರೋ ಹಾಗೆ ಸಹಾಯ
ಮಾಡಬೇಕಾಗಿರೋ ಮಾತೆತ್ತಿದ್ರು!... ಒಪ್ಪಸ್ದೆ ಏಜಂಟ್ ಪಟ್ಟೀನಾ! ಸನ್ನಿಧಾನದ ರೇಟ್ ಪ್ರಕಾರ
ತಲಾ ನೂರುನೂರು ರೂಪಾಯ್ನೂ ಕೈಲ್ಕೊಟ್ಟು... ಸಂಪ್ರದಾಯದ್ಪ್ರಕಾರ... ಸಂಭಾವನೆ, ವಸನ
ಇತ್ಯಾದಿ ಮರ್ಯಾದೆ, ದಾನಗಳನ್ನೂ ಮಾಡೋಕೊಪ್ಕೊಂಡ್ರು!! ದೇವ್ಗೆರೆ ಕಟ್ಟೇಲಿ ಸ್ನಾನಕ್ಬಿಟ್ಟು !...
ಇಲ್ಬಂದೆ... ಇದಕ್ಕೆ ನಾನು ಸಂದೇಹಪಟ್ಟಿದ್ದು, ದುಡ್ನಾಸೆ ಪಟ್ಕೊಂದು ಇವತ್ತಿನ್ಕೃತ್ಯಕ್ಕೊಂಡೋರು,
ಬ್ರಾಹ್ಮಣ್ರೋ ಅಲ್ವೋ ಅಂತ!!...
ವೆಂಕಮ್ಮ: ಏನೋ! ದೇವ್ರಿಷ್ಟ್ರಮಟ್ಗೆ ದಯ್ವಿಟ್ಟು ಕಳ್ಸಿದ್ನಲ್ಲಾ!! ಅವರ್ನ!!...
ರಂಗಣ್ಣ: ಹಯ್ಯೋ! ವೆಂಕೂ... ದೇವ್ರೆಲ್ಲೀ?... ನಾವೆಲ್ಲೀ?.. ಬ್ರಾಹ್ಮಣ್ನಿಗ್ದ್ರಹ್ಮಹಣದಾದ್ಮೇಲೆ
ಇನ್ದೇವ್ರು ಬೇರೆ ಇದಾನೆಯೇನಿವರ್ಗೆ? ನಾವೀಗಿರೋ ಹಣೆಬರಕ್ಕೆ ದಯೆಬೇರೆಯೇ ಅವ್ನಿಂದ?...
ಈ ಹಾಳಿನ್ನೂರ್ರೂಪಾಯ್ನ ಮುಂದಿಟ್ಕಂಡು ಬಾ ಬಾ ಅನ್ನದಿದ್ರೆ ಬರ್ತಿದ್ರೆ ಈ ಬ್ರಾಹ್ಮಣ್ರು?
ಹಯ್ಯೋ! ವೆಂಕೂ, ಇನ್ಹೀಗೆ ಶ್ರಾದ್ಧಕ್ಮುನ್ನೂರ್ರೂಪಾಯಿ... ತಿಂಗ್ಳ್‌ತಿಂಗ್ಳ್ ಅಮಾವಾಸ್ಯೆ
ತರ್ಪಕ್ಹಕ್ಹದ್ನೈದ್ರೂಪಾಯಿ... ದುರ್ಲಂಚಾ ಕೊಡ್ತಾ ಎಷ್ಟ್ದಿನಾಂತಾನೇಂತ ಬ್ರಾಹ್ಮಣಿಕೇನಜರಗ್ಸೋದೋ !
ನಾನ್ಬೇರೇ ಕಾಣೆ (ವ್ಯಸನದಿಂದಲೂ, ಹಸಿವಿನಿಂದಲೂ ನಿರ್ವಿಣ್ಣನಾಗಿ ಬಗ್ಗಿ ದುಃಖದಿಂದ
ವೆಂಕಟಲಕ್ಷ್ಮಮ್ಮನ ಕೈಯನ್ನು ಹಿಡಿದುಕೊಂಡು) ಹಯ್ಯೋ ವೆಂಕೂ!... ... ಇದ್ರಲ್ಲೆಲ್ಲಾ... ನೀನೂ...
ಸಿಕ್ಕೊಂಡು... ಪಡೋಕಷ್ಟ ಬೇರೆ, ನನ್ಹೃದ್ಯಾನ ತಿನ್ತಿದೆ. ನನ್ ಹಾಳ್ಮೆನ ಹಿಡ್ದದ್ದಕ್ಕೆ ನಿನ್ಗೀ
ವಯಸ್ನಲ್ಲಿ ನಿನ್ಮೈಯಿ, ಮುಖ... ಹೀಗಾಗಿ, ಕೂದ್ಲೂ.. ಹೀಗ್ನರ್ತು... ಹಿಂಸೆ ಪದ್ಬೇಕೂಂತ ಬರ್ದಿತ್ತೇ
ನಿನ್ಹಣೇಲಿ ಈ ನರ್ಸು ಒಬ್ಳು ಇಲ್ದಿದ್ರೇ?... (ಈ ಸಮಯದಲ್ಲಿ ನರ್ಸುವು ಹಿಂಬಾಗಿಲಿನಿಂದ ಬಂದು,
ರಂಗಣ್ಣನ ಕೊನೆಯ ಮಾತನ್ನು ಹೇಳಿ ಮನನೊಂದು ಮುಖ ಕುಗ್ಗಿ ಮಾತನಾಡದೆ ಹಿಂತಿರುಗುವುದನ್ನು,
ವೆಂಕಮ್ಮನು ಮಾತ್ರ ಗಮನಿಸುವಳು)
ವೆಂಕಮ್ಮ: (ವ್ಯಥೆಗೊಂಡು ಮೆಲ್ಲನೆ ಗಂಡನ ಕೈಯನ್ನು ಒದರಿ)... ಇನ್ಮೇಲೆ... ದಯವಿಟ್ಟು...
------------------------------------
ನರಸೂ ಮಾತ್ನಾ...ಎತ್ಬೇಡಿ, ಈಗೇನ್.. ಅವಳ್ಮನೋವ್ಯವಸ್ಥೆ... ನಿಮ್ದಕ್ಕಿಂತ ಕಮ್ಮೀಂತ
ತಿಳ್ಕೊಂಡಿದೀರಾ?... ಅವಳ್ಬದ್ಕಿರೋದು (ಸ್ವಲ್ಪ ಸಿಟ್ಟಿನಿಂದ) ಆವಳ್ತಪ್ಪೇ? ಅವಳ್ಮದ್ವೇಗ್ಬೇಕಾದ್ಹಣವಿಲ್ಲದ್ದೂ
ಅವಳ್ತಪ್ಪೇ?... ನಿಮ್ತಾಯಿ ಹೋದ್ದಿನ್ದಿಂದ... “ಯಾಕೀ ಶನೀ ಹುಟ್ಟಿದ್ಲೂ ಯಾಕೀ ಶನಿ ಹುಟ್ಟಿದ್ಲೂ"
... ಅಂತ ರಾತ್ರಿ ಹಗ್ಲೂ ಕೇಳೀ ಕೇಳೀ ಮನಸ್ಸೂ ಮುರ್ಕೊಂಡು... ಹಗ್ಲೂ ರಾತ್ರಿ ಹುಟ್ಟಿದ್ಸಾಲಾನ
ಕೆಲ್ಸದಲ್ಲಾದ್ರೂ ತೀರ್ಸೋಣಾಂತ... ಮೈಮುರ್ಯೋ ಹಾಗೆ ಕೆಲ್ಲ ಮಾಡ್ತಿದೆ, ಆ ಮಗು!...
(ಕಣ್ಣುಗಳನ್ನು ಕೈಗಳಿಂದ ಮುಚ್ಚಿಕೊಂಡು ಅಳುವಳು.)
ರಂಗಣ್ಣ: (ಒಂದು ಹೆಜ್ಜೆ ಹಿಮ್ಮೆಟ್ಟಿ, ಮುಷ್ಟಿಗಳನ್ನು ಬಿಗಿದು ಉದ್ರೇಕದಿಂದ...) ನಿಜ!...
ವೆಂಕೂ... ನಿಜ, ನರ್ಸು ಬದ್ಕಿರೋದವಳ್ತಪ್ಪಲ್ಲ..ವೆಂಕೂ ! ನಮ್ಮನಸ್ಸು, ನಮ್ಬುದ್ಧಿ, ನಮ್ಮಾತ್ಮ...
ಎಷ್ಟೋ ದೊಡ್ದು ಅಂತ ನಾವು ಹೊಗಳ್ಕೊಂಡ್ರೂನೂವೆ (ಬಿಗಿದ ಮುಷ್ಟಿಯಿಂದ ಎದೆಯನ್ನು
ಗುದ್ದಿಕೊಳ್ಳುತ್ತಾ) ಇದು, ಇದು ಇದ್ಕೊಬ್ಬಿರೊವರ್ಗೂನೂ, ಆತ್ಮಕ್ಕೂ ಬುದ್ಧಿಗೂ, ಅವಕಾಶ್ವೆಲ್ಕೊಡತ್ತೀ
ಹಾಳ್ದೇಹ? ನನಗ್ನೀನ್ನೀನಾಗಿರೋ ಹೊತ್ತಿಗೆ... ನನ್ದಿಗ್ಭ್ರಮೇಲಿ, ನರ್ಸು ಹುಟ್ಟಿಬದ್ಕಿರೋದು
ತಪ್ಪೂಂತೋಚ್ತಲ್ಲಾ! ಮಕ್ಳೂ... ಹಕ್ಕಿಗ್ಳೂ... ಹೂವುಗ್ಳೂ... ಹುಟ್ಟೋದ್ರಲ್ತಪ್ಪೆಲ್ಲಿದೂ? ಪ್ರಪಂಚ
ಹುಟ್ಟಿದ್ದೇ ಅವುಗ್ಳಿಗಲ್ವೇ? ನರ್ಸು ಸುಟ್ಟಿದ್ತಪ್ಪೇ ಅಲ್ಲ, ಬದ್ಕಿರೋದ್ತಪ್ಪೇ ಅಲ್ಲ, ತಪ್ಪೇ ಅಲ್ಲ !!...
ಇನ್ನೀನ್ಹೆಳ್ದೆಯಲ್ಲಾ... ಆವಳ್ಮದ್ವೇಗ್ಬೇಕಾದ್ಹಣಾಂತ... ಮದ್ವೇಂದ್ರೇನು? ಕನ್ನಿಕಾದಾನವೇ ? ಕನಕಾದಾನವೋ?
ಮದ್ವೆಯೋ... ಮದುವಣಿಗರ ಮಾರಾಟವೋ? ದಾನವಾಗಿ ಕನ್ಯೆಯನ್ಕೋಡೋಕಿಷ್ಟಪಟ್ಟ ಬ್ರಾಹ್ಮಣನ್ಹತ್ರ
ಧನವಿಲ್ಲದ್ಮಾತ್ರಕ್ಕೆ ಅವನ್ಬ್ರಾಹ್ಮಣಿಕೇಗ್ಕೊರ್ತೆಯೇ?
ಬ್ರಾಹ್ಮಣ, ಪಾಪಿ!... ಬ್ರಹ್ಮಚಾರಿ !... ತನ್ನಾಚಾರ, ತನ್ನ ಧರ್ಮ, ತನ್ನ ವ್ರತಗಳ್ನ
ಜರುಗಿಸ್ಕೊಳ್ತಾ... ತನ್ನ ಪಿತೃಗಳಿಗೆ ತನ್ಕೈಯಿನ್ಪಿಂಡಗ್ಳು ಮುಟ್ಬೇಕಾದ್ದಕ್ಕೆ ಅನುಸರಿಸ್ಬೇಕಾದ ಧರ್ಮಗಳ್ನ
ನಡಸ್ತಾ ತನ್ನ ಬ್ರಾಹ್ಮಣ್ಕೇನುಳುಸ್ಕೊಳ್ಳೋಕ್ಕೆ ತನ್ನ ಪಕ್ದಲ್ಲಿ ನಿಲ್ಲಲೇ ಬೇಕಾದ ಸಹಧರ್ಮಿಣೀಗೆ ಇವನು
ಕಟ್ಟೋ ತಾಳೀಗೇ ಕೂಲಿ? ಈ ನೀಚನಿಗೆ... ಕೂಲಿ!! ದುಡ್ಡಿನ... ಕೂಲಿ!!... ನನಗ್ಬಹಿಷ್ಕಾರಾ
ನನಿಗೆ ?... ಗೃಹಸ್ಥನಿಗೆ ?... ಧನ ಸಂಚಯಿಸೋದು ನನ್ನ ವೃತ್ತಿ ಅಲ್ಲಾ ಅಂತ ನನ್ಜಾತಿವೃತ್ತೀನಾ!
ಅನುಸರಿಸ್ತಿರೋ ಬ್ರಾಹ್ಮಣನಿಗೆ ಬಹಿಷ್ಕಾರ!!! . (ಮನೋವ್ಯಥೆಯ ಉನ್ಮಾದದಿಂದ ನಗುತ್ತಾ)
ನಗುಬರುತ್ನನಿಗೆ! ಸತ್ಯವಾಗ್ಹೇಳ್ತೇನೆ ವೆಂಕೂ! ಇಲ್ಲಿ (ಎದೆಯನ್ನು ಗುದ್ದಿ! ತೊರುತ್ತಾ) ನನಿಗಿಲ್ಹೇಳುತ್ತೇ! ..
ಬ್ರಾಹ್ಮಣ ಯಾವಾಗ ಹೊನ್ನಿನ್ಬಣ್ಣಾ ನೋಡಿ ಬೆಚ್ಚಿದ್ದು, ಅದಕ್ಸುರ್ವಣಾಂತ ಹೆಸರಿಟ್ನೋ ಆ
ಕ್ಷಣದಿಂದ ಧನಪಿಶಾಚಿಗೆ ದಾಸ್ನಾದ. ಈ ಪಾಪಿ ಮುಟ್ದೊಂದ್ಪಿಂಡಾನೂ ಮೇಲ್ಲೋಕಕ್ಹೋಗ್ಗಿಲ್ಲಾ!!...
ಇವ್ನೆಲ್ಲಿ!... ಇವನ್ಬಾಯಲ್ಬೊಗ್ಳೋ ಋಷಿಗ್ಳೆಲ್ಲಿ!!?.... ಅತ್ರಿ, ಭೃಗು, ವಸಿಷ್ಠ... ಇವರ್ಹೆಸರುಗ್ಳು
ಹೇಳೋಕ್ಕೂಡ ನನಿಗ್ಹೆದ್ರಿಕೆಯಾಗುತ್ತೆ!... ಇನ್ನೀ ಪಿತೃಗ್ಳ ಗತಿಯೇನೂ ಅಂತಿಯೋ.... ಇಹದಲ್ಯೂ
ಇಲ್ದೆ, ಮೇಲ್ಕೂ ಮುಟ್ದೆ... ಸಾಲ್, ಸಾಲ್, ಸಾಲಾಗಿ, ಆಕಾಶಕ್ಕೂ ಭೂಮಿಗೂ ಅಡಿಕೆ ಸರಗಳ್ಹಾಗೆ
ನೇತಾಡ್ತಿರೋ ಹಾಗ್ಕಾಣಿಸ್ತಾರೆ ನನ್ಕಣ್ಗೆ... ಇನ್ನಿವ್ರಿಗೆ ಈ ತ್ರಿಶಂಕು ನರಕದಿಂದ ವಿಮೊಚ್ನೆ ಯಾವಾಗ
ಅಂತ್ಕೇಳ್ತೀಯೋ... ಇನ್ಮುಂದೆ ಯಾವ ಬ್ರಾಹ್ಮಣ ಹಣದ್ಮೇಲೆ ಹೇಸ್ಗೆ ಪಟ್ಕೊಂಡು ಹುಟ್ತಾನೋ,
ಪುಣ್ಯಾತ್ಮ, ಅವನ್ಕೈಯಿಂದ! ಅವನ್ಕೈ ತಿಲೋದ್ಕದ ಯೋಗ್ಯತೇನ, ಹೇಳೋದಕ್ನನಗ್ಯೋಗ್ತೆ ಇಲ್ಲಾ...
ಆದ್ರೂನೂವೇ ಈ ಧನಕ್ಕಡ್ಬೀಳೋ ಪಾಪಿಬಾಯ್ಗೆ ಹುಯ್ಬೇಕಾದ್ದುರ್ಲಂಚನ ಆ (ಲಕ್ಷ್ಮಿಯ
ಚಿತ್ರಪಟವನ್ನು ತೋರಿಸುತ್ತಾ) ಚಂಚ್ಲಕಟಾಕ್ಷಿ... ಎಷ್ಟವರಿಗೆ ವದಗಸ್ತಿರ್ತಾಳೋ ನಮ್ಕೈಗೆ ಅಷ್ಟ್ರವರಿಗಾದ್ರೂ
----------------------------------------------------------
ಈ ಮಾಮೂಲ್ ಏರ್ಪಾಡ್ಕೆ ಬ್ರಾಹ್ಮಣ್ಕೇನಾದ್ರೂ ಜರಗಸ್ತಿರೋಣ.. ನೆನಸೋಣಗ್ಸು... ಧೋತ್ರಾನಾ
ನೆನಸೊಣಗ್ಸು!!
(ಫರದೆಯು ಥಟ್ಟನೆ ಬೀಳುವುದು)
ಚತುರ್ಥ ರಂಗ
[ಕಾಲ: ಏಳು ವರ್ಷಗಳ ಅನಂತರ]
ಸ್ಥಾನ; ಯಥಾಪೂರ್ವಂ, ಕೊಣೆಯಲ್ಲಿನ ಸಾಮಾನುಗಳು, ರಂಗಣ್ಣನ ಸ್ಥಿತಿಯು
ಬಹುಧಾವರ್ಧಿಸಿರುವುದೆಂಬುದನ್ನು ಸೂಚಿಸುವುವು... ದೊಡ್ಡದೊಂದು ನಿಲುಗನ್ನಡಿ: ಮೇಜಿನಿಂದ
ಪ್ರತ್ಯೇಕವಾಗಿ ವಿಂಗಡಿಸಲ್ಪಟ್ಟಿರುವ ಕೋಣೆಯ ದಕ್ಷಿಣಾಂಶದಲ್ಲಿ ಮಂಚದ ಮೇಲೆ ನರಸು ಜ್ವರದಿಂದ
ನರಳುತ್ತಾ ಹೊರಳುತ್ತಿರುವಳು.
ವೆಂಕಮ್ಮ: (ಪ್ರವೇಶಿಸಿ) (ಮೇಜಿನ ಮೇಲೆ ಬಿದ್ದಿರುವ ಟಪ್ಪಾಲಿನಿಂದ ಬಂದ ಲಕೋಟೆಯನ್ನು
ಗಮನಿಸಿ) ಇದನ್ತೂಬಗೆರೆ? ಹಾಗಾದರೆ ಇಷ್ಟ್ಬೇಗ್ನೆ ಬರದ್ಬಿಟ್ಟಿದ್ದಾರೆ ಜವಾಬು ? !! ಏನೂಂತ
ಬರಿದಾರೋ ಕಾಣೆ..... ಜಾತ್ಕಾನೂ ಕಳ್ಸಿತ್ತಲ್ಲಾ!! (ಭ್ರಕುಟಿ ರಚನೆಯನ್ನು ಮಾಡುತ್ತಾ) ಏನೂಂತ
ತಾನೇ ಬರೀತಾರವ್ರು... ನಮ್ಮನೇ ಹಣೇಬರ ಹೀಗಿರೋವಾಗ... ನಮ್ನರ್ಸೂನ್ಮದ್ವೆ ಇಲ್ದೆ
ಮನೇಲಿಟ್ಕೊಂಡಿರೋವರೆಗೂ ಕನ್ಯಾದಾನ ಯಾರ್ತಾನೆ ಮಾಡ್ಯಾರ್ನಮ್ಕಿಟ್ಟೂಗೆ?.... ಇನ್ನಿದುವರ್ಗೂ...
ನಾವ್ಪಟ್ಟಿರೋ ಕಷ್ಟಗ್ಳಲ್ದೇ ಇನ್ಯಾವ್ಯಾವವಸ್ಥೆಗಳ್ಕಾದಿವ್ಯೋ ಕಾಣೆ...
ನರ್ಸು: ಹಯ್ಯೋ! ಹಯ್ಯೋ!!.. ಹಯ್ಯೋ!!!... ಅಮ್ಮಾ... ಅಮ್ಮಾ... ಎಲ್ಲಿದೀಯಮ್ಮಾ?
ವೆಂಕಮ್ಮ: (ಮಗಳ ಪಕ್ಕಕ್ಕೆ ಓಡಿಬಂದು) ಏನ್ಕಂದಾ? ಹ್ಯಾಗಿದೆ ಈಗ? ( ನರಸುವಿನ
ಮುಖವನ್ನು ಕೈಗಳಿಂದ ಹಿಡಿದು ಕೇಳುವಳು.)
ನರ್ಸು: (ಸನ್ನಿಸೂಚಕ ದೃಷ್ಟಿಯಿಂದ ತಾಯಿಯನ್ನು ಈಕ್ಷಿಸುತ್ತಾ, ನೊಂದ ಕಂಠಸ್ವರದಿಂದ
ಹಯ್ಯೋ ಅಮ್ಮಾ... ಹ್ಯಾಗಿದೇಂತ್ಹೇಳ್ಳಮ್ಮಾ... ನಾಲಿಗ್ಯೋ.., ಒಣಗ್ಬೆಂಡಾಗಿದೆ... ತಲ್ಯೋ ಸಾವಿರ
ಸೂಜಿಗ್ಳು ಚುಚ್ಚಿದ್ಹಾಗೆ ಎಲ್ನೋಡಿದ್ರೂ ಫೋಟುಗ್ಳು... ಇವಲ್ದೇ ಅಮ್ಮಾ-ಕನಸುಗ್ಳು... ಹಳ್ಕನಸುಗ್ಳು
ಅಮ್ಮಾ... ಸುತ್ಗೆ... ಸೀಸದ್ಸುತ್ಗೆಯಿಂದ್ಹೊಡ್ಡ್ಹಾಗೆ... ಜಜ್ತಿವೇಮ್ಮಾ ತಲೇನ್ಜಜ್ತಿವೇ... “ಕಿಟ್ಟೂನ್ಮದ್ವೇ? ....
....'ಕಿಟ್ಟೂಗ್ಮದ್ವೆ'... 'ಮದ್ವೇ ಎಲ್ಲಾದೀತ್ಕಿಟ್ಟೂಗೆ ?'... 'ಹೆಣ್ಯಾರ್ಕೊಟ್ಟಾರು?” ... 'ಈ ಹಾಳ್ನರ್ಸು...
ಬದ್ಕಿರೋವರ್ಗೂ" ... “ಈ ಶನಿಯಾಕ್ಹುಟ್ಟಿದ್ಲೀ ಮನೇಲಿ' ಅಂತಮ್ಮಾ! ಈಗ ... ಈಗ...
ನನ್ಕಿವೀಲೆ... ಯಾರೋ ಕಿರ್ಲಿದ್ಹಾಗಿತ್ತೂ... ಅಮ್ಮಾ... ಕನ್ಸು... ಹಯ್ಯೋ.... ಗಂಟ್ಲೊಣ್ಗ್ತಿದೇಮ್ಮಾ...
ನೀರು... ನೀರು...
ವೆಂಕಮ್ಮ: ನೀರ್ಬೇಡ ಕಂದಾ (ಪಕ್ಕದಲ್ಲಿಟ್ಟಿರುವ ಹಾಲನ್ನು ಲೋಟಾಕ್ಕೆ ಬಗ್ಗಿಸಿ ನರಸುವಿಗೆ
ಕುಡಿಸುತ್ತಾ ಸದ್ಯ ಈ ಹಾಲ್ಕುಡಿ! ಡಾಕ್ಟರಿಗ್ಹೋದ್ಕಿಟ್ಟೂ ಇನ್ನೇನ್ಬಂದ್ಬಿಡ್ತಾನೆ. (ನರಸು, ಅಲ್ಪ
ಶಾಮಿತಳಾಗಿ ತಲೆಯನ್ನು ದಿಂಬಿಗಿಳಿಸುವಳು... ಸಮೀಪಿಸುವ ಹೆಜ್ಜೆಗಳ ಸಪ್ಪಳವನ್ನು ಕೇಳಿ
ವೆಂಕಮ್ಮನು ಬೀದಿ ಬಾಗಿಲನ್ನು ತೆಗೆಯುವಳು.)
-----------------------------------------------------------------
(ರಂಗಣ್ಣ, ಡಾಕ್ಟರ್ ಲಕ್ಷ್ಮೀಪತಿ, ಮತ್ತು ಕಿಟ್ಟುವು ಡಾಕ್ಟ್ರ ಔಷಧಿಗಳ ಚೀಲವನ್ನು
ಹಿಡಿದುಕೊಂಡು, ಪ್ರವೇಶಿಸುವರು.)
ಲಕ್ಷ್ಮೀಪತಿ: Patierit ಹಾಗಿದ್ಲೂ ಕಿಟ್ಟೂ ? ನೀನ್ಮನೆ ಬಿಟ್ಟಾಗ?
ರಂಗಣ್ಣ (ಲಕ್ಷ್ಮೀಪತಿಯ ಕೈಹಿಡಿದುಕೊಂಡು ಪ್ರವೇಶಿಸಿ) Patientoo?... Patientsoo ಅನ್ನು.
ಲಕ್ಷ್ಮೀಪತೀ... ನೀನ್ನಮ್ಮೂರ್ಬಿಟ್ಹೋದೀ ಎಂಟ್ವರ್ಷದಲ್ಲಿ ಮನೇಲ್ಯಾರ್ತಾನೇ..ಯಾವಾಗ್ತಾನೇ ..,
ಮೈಕೈಲೂ ಮನಸ್ಸೂ... ಬುದ್ಧೀಲೂ ... ಅಸ್ವಸ್ಥವಾಗಿಲ್ಲ?
ಲಕ್ಷ್ಮೀಪತಿ: (ರಂಗಣ್ಣನ ಬೆನ್ನು ತಟ್ಟುತ್ತಾ ಸಾಂತ್ವನ ಸ್ವರದಿಂದ) understand dear boy...
I understand ... ಸದ್ಯ ಈಗ್ನರ್ಸು ಹ್ಯಾಗಿದ್ದಾಳೆ ?
ವೆಂಕಮ್ಮ: ಈಗ್ತಾನೆ... ಗಂಟ್ಲು ಒಣಗ್ತಿದೆ... ತಲೆ ಭಾರ.. ಅಂತ್ಹೇಳ್ಕೊಂಡ್ಳು... ಜ್ಞಾನ ಕೂಡ
ತಪ್ಪಿರೊ ಭಯವಾಗುತ್ತೆ... ಹಾಗಿದ್ದೀರಾ? ಮನೇಲೆಲ್ಲ ಸೌಖ್ವೆ?
ಲಕ್ಷ್ಮೀಪತಿ: ನಮ್ಸೌಖ್ಯ ಹಾಗಿರ್ಲಮ್ಮ... (ರಂಗಣ್ಯನಿಗೆ) ಜ್ಞಾನತಪ್ಪಿದೆಯೋ ಇಲ್ವೋ...
ನನ್ಗುರ್ತವ್ಳಿಗೆ ಸಿಗೊದ್ರಲ್ಲೇ ಗೊತ್ತಾಗುತ್ತೆ,
(ವೆಂಕಮ್ಮನು ರಂಗಣ್ಣ, ಲಕ್ಷ್ಮೀಪತಿ, ಔಷಧಿಯ ಚೀಲವನ್ನು ಹಿಡಿದಿರುವ ಕಿಟ್ಟಿ,
ಇವರುಗಳನ್ನು ಹಾಸಿಗೆ ಹತ್ತಿರಕ್ಕೆ ಕರೆದುಕೊಂಡು ಹೋಗುವಳು.)
ರಂಗಣ್ಯ: (ನರಸುವಿನ ಮುಖವನ್ನು ಸವರುತ್ತಾ ಬಾಷ್ಪಭರಿತನಾಗಿ ನರ್ಸೂ... ನರ್ಸೂ...
ಇದ್ಯಾರಮ್ಮಾ ಬಂದಿರೋದು?... ನೋಡು, ಇದ್ಯಾರು, ಹೇಳ್ನೋಡೋಣ,
(ನರಸುವು ನಿಶ್ಚಲ ದೃಷ್ಟಿಯಿಂದ ಲಕ್ಷ್ಮೀಪತಿಯನ್ನು ಗಮನಿಸುವಳು)
ಲಕ್ಷ್ಮೀಪತಿ: ನರ್ಸಮ್ಮಾ... ನರ್ಸು... ಇಲ್ನೋಡಮ್ಮಾ (ನಾಡಿಯನ್ನು ಪರೀಕ್ಷಿಸುತ್ತಾ) ಇದ್ಯಾರಮ್ಮಾ
ಇದು ಮಾತಾಡ್ತಿರೋದು... ನಾನ್ಯಾರ್ನರ್ಸೂ?
(ಡಾಕ್ಟರರ ಧ್ವನಿಯು ಕೇಳುತ್ತದೆ, ಕಣ್ಣುಗಳಲ್ಲಿ ಕ್ರಮೇಣ ಬೆಳಕೇರಿ ಥಟ್ಟನೆ ತಲೆಯನ್ನೆತ್ತಿ
ಕೈಯಿಂದ ಸೂಚಿಸುತ್ತಾ, ಚೀತ್ಕರಿಸುತ್ತಾ)
ನರ್ಸು: ಡಾಕ್ಟ್ರು!!!.., ಆಜ್ಜಿ ಸಾಯೋವಾಗ ಇದ್ಡಾಕ್ಟ್ರು (ಕಣ್ಣೀರನ್ನು ಕಾರುತ್ತಾ ಬಾಹುಗಳನ್ನು
ಒದರುತ್ತಾ) ಡಾಕ್ಟ್ರೇ? ಈಗೊತ್ತಾಯ್ತು ಡಾಕ್ಟ್ರೇ! ಅಜ್ಜಿ ಸಾಯೋವಾಗ 'ಯಾಕ್ಹುಟ್ಟಿದ್ಲೀ ಶನೀ' ಅಂತ...
ಅಜ್ಜೀನೂ ಅಪ್ನೂವೇ... ನನ್ನ ಬೈದದ್ದು... ಈಗರ್ಥ್ವಾಗ್ತಿದೆ. ಡಾಕ್ಟ್ರೇ! ಡಾಕ್ಟ್ರೇ! (ದಣ್ದು ಅಧೋಮುಖಳಾಗಿ
ಮಂಚದಂಚಿಗೆ ಬೀಳುವಳು)
ಲಕ್ಷ್ಮೀಪತಿ: Ranganna... She is bad... very bad (ನರಸುವನ್ನು ಮೆಲ್ಲಗೆ ಹಾಸಿಗೆಯಲ್ಲಿ
ಮlಗಿಸಿ, ವೆಂಕಮ್ಮನಿಗೆ) ಬಿಸ್ನೀರೂಮ್ಮ... ಬೇಗ.... (ಕಿಟ್ಟೂಗೆ) ಕಿಟ್ಟೂ... ಬೇಗ್ನೆ... bagನಲ್ಲಿ...
ಚಿಕ್ಸೀಸೆ.., while powder-label Veronal... (ಕಿಟ್ಟು ಚೀಲದಿಂದ ತೆಗೆದುಕೊಡುವ ಸೀಸೆಯನ್ನು
ತೆಗೆದುಕೊಳ್ಳುತ್ತಾ That's it!
(ವೆಂಕಮ್ಮನು ಒಳಕ್ಕೆ ಹೋಗಿ ನೀರನ್ನು ತರುವಳು.|
------------------------------------------------------------------
(ಲಕ್ಷ್ಮೀಪತಿಯು ಹಿಂದು ಗಾಜಿನ ಲೋಟಾದಲ್ಲಿ ೧ ೧/೨ ಗ್ರಾಮ್ ವೆರೋನಾಲನ್ನೂ ನೀರನ್ನೂ
ಮಿಶ್ರಮಾಡುತ್ತಿರುವನು)
ರಂಗಣ್ಣ: ಏನದ್ಕೊಡೋದೂ ?
ಲಕ್ಷ್ಮೀಪತಿ: ಬರಿ: sedativeoo! soporificoo! (ಔಷಧಿಯನ್ನು ನರಸುವಿಗೆ ಕುಡಿಸಿ,
ಲೋಟಾವನ್ನು ಕೆಳಗಿಡುವನು.)
ರಂಗಣ್ಣ: (ನರಸುವಿನ ಹತ್ತಿರ ಬಂದು ಅವಳ ಮುಖವನ್ನು ಸವರುತ್ತಾ) ಈಗ್ಹ್ಯಾಗಿದೆ ನರ್ಸೂ
ಸ್ವಲ್ಪ್ಮೇಲೇ?
ನರ್ಸು: (ಕೈಯಿಂದ ತಂದೆಯ ಮುಖವನ್ನು ಸವರುತ್ತಾ... ಮೃದು ಸ್ವರದಿಂದ) ಮೇಲೂಪ್ಪಾ...
ಮೇಲು... (ರಂಗಣ್ಣನ ಕೈಯನ್ನು ಮುತ್ತಿಟ್ಟು) ನನ್ವಿಷ್ಯವಾಗಿ ವಿಚಾರ್ಪಡ್ಬೇಡಪ್ಪಾ!... ಈಗ್ನಿನಿಗಿರೋ
ವಿಚಾರಾನೇ ಸಾಕು. ನನ್ಗೆ ಸ್ವಲ್ಪ ಮೇಲು,
ರಂಗಣ್ಣ: ವಿಚಾರ್ವೇನ್ಕಂದಾ (ನರಸುವನ್ನು ಮೆಲ್ಲಗೆ ಹಾಸಿಗೆಯ ಮೇಲೆ ಮಲಗಿಸಿ, ಅವಳ
ಹಣೆಯನ್ನು ಮುದ್ದಿಡುತ್ತಾ ಇನ್ನಿದ್ದೇ ಮಾಡ್ನನ್ಕಂದಾ? (ಲಕ್ಷ್ಮೀಪತಿಯ ಹತ್ತಿರಕ್ಕೆ ಬಂದು) Serious
ಏ Conditinoo?
ಲಕ್ಷ್ಮೀಪತಿ: Serious ಏನು?, Simple ವಿನೂ? But I am in good tire, ಇನ್ನೊಂದು
ಹದ್ನೈದ್ದಿವ್ಸದಲ್ಲಿ ಸರಿ ಹೋಗ್ತಾಳೆ. ನಾಳೆ ಬೆಳಿಗ್ಗೆ ಬಂದ್ನೋಡ್ತೇನೆ... ಕಿಟ್ಟೂ ಎತ್ಕೊಂಡ್ಬಾ ನಿನ್ನಂಗ್ಡೀ...
(ವೆಂಕಮ್ಮನು ನಿಷ್ಕ್ರಮಿಸುವಳು.) Ranganna ಈ cotನ ಮೇಲ್ಬಿದ್ಕೋ cornfortable ಆಗಿ...
(ಕಿಟ್ಟೂಗೆ) ಕಿಟ್ಟೂ, bagoo! (ಕಿಟ್ಟ ಚೀಲವನ್ನು ತರುವನು. ಲಕ್ಷ್ಮೀಪತಿಯು ಚೀಲದಿಂದ ಕೆಂಪು
ಕಾಗದ ಹಚ್ಚಿದ ಕರಿಯ ಔಷಧದ ಸೀಸೆಯೊಂದನ್ನು ತೆಗೆದಿಡುವನು; ಗಾಜಿನ ಚಿಕ್ಕ ತಟ್ಟೆಯೊಂದರಲ್ಲಿ
ಅಲ್ಪ ಔಷಧಿಯನ್ನು ಸುರಿದುಕೊಂಡು) ಒಂದ್ಹಂಚೀ ಕಡ್ಡಿ ... clean end of the broom Stick
(ಕಿಟ್ಟಿಯು ಹಂಚಿಕಡ್ಡಿಯನ್ನು ತಂದುಕೊಟ್ಟು ನಿಷ್ಕ್ರಮಿಸುವನು, ಚೀಲದಿಂದ ತೆಗೆದ ಹತ್ತಿಯಲ್ಲಿ
ಅಲ್ಪಾಂಶವನ್ನು ಕಿಟ್ಟಿಯು ತಂದ ಹಂಚಿ ಕಡ್ಡಿಗೆ ಸುತ್ತಿ, ಗಾಜಿನ ತಟ್ಟೆಯೊಳಗಿನ ಕರಿ ಔಷಧದಲ್ಲಿ
ಅದ್ದಿ ತೊಯ್ಸಿಕೊಂಡು) Now then my boy. we shall try your left knee... ನಿನಗೇನು?,
the root of all troubles is simply exposureoo... ನೀನು ಸ್ವಲ್ಪ avoid ಮಾಡ್ಬೇಕು...ಕಾಲಿಗೆ!
(ಮೊಣಕಾಲಿಗೆ ಸವರಲುಪಕ್ರಮಿಸುವನು.)
ರಂಗಣ್ಯ: ಹಯ್ಯೋ ! ಲಕ್ಷ್ಮೀಪತಿ... ನನ್ಕಾಲ್ನಲ್ಲಿದೇಂತ ಕಂಡ್ಹಿಡದ್ಬಿಟ್ಯೆಲ್ಲಾ... the root of
all my troublesoo. ಹಯ್ಯೋ! Silly boy! the root of all my troublesoo... ನಮ್ಮಮ್ಮ ಸತ್ತ
ಈ ಹನ್ನೊಂದ್ವರ್ಷಗ್ಳ troublesಸ್ನ, rootoo, ಲಕ್ಷ್ಮೀಪತೀ ಇಲ್ಲಿದೆ. (ನನ್ನ ತಲೆ ಮತ್ತು ಹೃದಯಗಳನ್ನು
ಮುಟ್ಟಿ ತೋರಿಸುವನು) ಇಲ್ಲಿದೆ... ತಲೆ ನರ್ಸು, ನನ್ಹೃದ್ಯಾ ಬಿದ್ದಿರೋದೇ rootoo!!
ಲಕ್ಷ್ಮೀಪತಿ: ಏನು ? ... ಏನದೂ ?
ರಂಗಣ್ಣ: ಏನೇ ?... ಸತ್ಗಿತ್ತೇನೂ ಅಂಬೋ ಹೆದ್ರಿಕೆ !! ಹಯ್ಯೋ... (ಲಕ್ಷ್ಮೀಪತಿಯು
ನಗುವನು) ನಗ್ಬೇಡ... ಸಾಯೋಕ್ಹೆದರ್ತೇನೇಂತ್ನಗ್ಬೇಡ... ಸಾಯೋಕಲ್ಲ ನನ್ಹೆದ್ರೋದು .... ಲಕ್ಷ್ಮೀಪತೀ!....
--------------------------------------------------------------
ಈಗ್ನೋಡು!... ನಾನೀಗೊಂದ್ವೇಳೆ ಸತ್ರೆ... ನಾನ್ಹಾಳ್ಹೆಣಾನ್ನನ್ಹೆಂಡ್ತಿ ಮಕ್ಳಿಟ್ಕೊಂಡೇನ್ಮಾಡ್ಯಾರು? ಹ್ಯಾಗ್ಸಾಗ್ಸ್ಯಾರು
ಸ್ಮಶಾನಕ್ಕೆ... ಹ್ಯಾಗ್ಸುಟ್ಬೂದಿ ಮಾಡ್ಯಾರು?
ನರ್ಸು: ಹಯ್ಯೋ ! ಇದೇನಿದು... ಅಪ್ಪನ್ಹೆಣ?... ಅಪ್ಪನ್ಗೇನ್ಬಂತೂ? ಆಪ್ಪನ್ಸ್ಮಶಾನಕ್ಸಾಗ್ಸೋದು
ಅಪ್ಪನ್ಸುಡೋದು.., ಅಪ್ಪನ್ಬೂದಿ. ಹಯ್ಯೋ .... ಅಪ್ಪಾ! ಅಪ್ಪಾ!!... (ಹೊರಳಾಡುತ್ತಾ)
ಇದೇನ್ಹಾಳ್ಕನ್ಸೂ??!
ರಂಗಣ್ಯ: ಇನ್ನಾನ್ಸತ್ಮೇಲೆ, ನನ್ಹೆಂಡ್ತಿ ಸತ್ರೆ, ಅವಳ್ಹೆಣದ್ಪಾಡೇನೂ!?
ನರ್ಸು: ಅಪ್ಪ ಮಾತಾಡಿದ್ಹಾಗಿತ್ತಲ್ಲಾ!... ಅಪ್ಪನ್ಹೆಂಡ್ತಿ! ನಮ್ಮಮ್ಮನ್ಹೆಣದ್ಪಾಡು?.. ಹಯ್ಯೋ!
ತಲೆ ಬಿರಿಯತ್ತಲ್ಲಾ... ಹಯ್ಯೋ !... ಅಪ್ಪನ್ಹೆಣ, ಅಮ್ಮನ್ಹೆಣ... ಅಮ್ಮ... ನಮ್ಮಮ್ಮ!!
ರಂಗಣ್ಣ: ಇನ್ನ್ ಕಿಟ್ಟೂ ಹೆಣ..ಲಕ್ಷ್ಮೀಪತೀ ? (ಮೇಜಿನ ಮೇಲಿರುವ ಕಾಗದವನ್ನು
ಸೂಚಿಸುತ್ತಾ ನನ್ನ oldest friendoo... ನಮ್ಕಿಟ್ಟೂಗೆ ತನ್ನ daughterನ ಮಾಡ್ಕೊಳ್ಳೋದೋ
ಅಂತ... ನಾವಿ ಹತ್ವರ್ಷಕ್ಮುಂಚೇನೆ ಮಾರ್ಕೊಂಡ ಏರ್ಪಾಡ್ನ ಜ್ಞಾಪ್ಸಿದ್ದಕ್ಕೆ ಬರೀತಾನೆ ನನಗುತ್ರ
“ಕಿಟ್ಟೂನ್ಬಿಟ್ಟು ನನಗ್ಬೇಗೇರೆ ಅಳಿಯ ಬೇಡ್ವೇ ಬೇಡ, ಆದ್ರೆ ನರ್ಸು ಮನೇಲಿರೋ ವರ್ಗು ಮದ್ವೇನ
ಜರಗ್ಸೋ ಅನಾನ್ಕೂಲಾನ ವಿವರ್ಸೋಕೆ ನನಗ್ಮನಸ್ಬರ್ದು” ಅಂತ ಅಂದ್ಬಿಟ್ಟೂ “ಹತ್ಸಾವ್ರ ರೂಪಾಯಿವರ್ಗೂ
ಸಹಾಯಮಾಡೋಕೆ ತಯಾರಾಗಿದ್ದೇನೆ,” ಅಂತಾನೆ, ನರ್ಸೂನ್ಮನೇಯಿಂದ ಸಾಗ್ಸೋಕೆ...
ನರ್ಸು: ಹಯ್ಯೋ!..ನನ್ಸಾಗ್ಸೋದು!?... ಸಾಯೋಕ್ತಯಾರಾಗಿಲ್ವೇ? ಹಾಳು ಜ್ವರ...
ಹಾಳ್ಡಾಕ್ಟ್ರು ... ಈ ಹಾಳ್ಡಾಕ್ಟ್ರು ಯಾಕ್ಬಂದ್ರು?!
ರಂಗಣ್ಣ: ಇನ್ಕಿಟ್ಟೂ ಹೆಣಾನ... ನರ್ಸು, ಪುಟ್ಟಾ, ಏನ್ಮಾಡ್ಯಾರು? ಆ ಮಕ್ಳು?...
ನರ್ಸು: ಕಿಟ್ಟೂ ಹೆಣಾ?... ಹಯ್ಯೋ !...
ರಂಗಣ್ಣ: ಇನ್ನರ್ಸು ಸತ್ರೋ,.. ಅವಳ್ಹೆಣಾನ ಈ ವೂರಲ್ಮುಟ್ಟೋಲ್ಲ!! ಗಳೂವಿನಿಂದ ಕೂಡ!
ನರ್ಸು: ನನ್ಹೆಣಾ... ಈ ವಂಭತ್ವಷ್ವೂ ಇಲ್ಲದ್ಡಾಕ್ಟ್ರು, ಈಗಾಕೆ ಬರೇಕು?...
ರಂಗಣ್ಣ: ಇನ್ಪುಟ್ಟ ಬೇರೊಂದ್ಕೂತಿದೆ, ನನ್ತಲೇಲ್ಲಿ... ಅವಳ್ವಯಸ್ಸಾಗೋ
ಒಂದೊಂದಿವ್ಸಾನೂ...ನನ್ತಲೇಲಿ ಒಂದೊಂದ್ನರೆ ಕೂದ್ಲು, ಹೆಚ್ತಾ ಬರುತ್ತೆ!... ಲಕ್ಷ್ಮೀಪತಿ! ...
ಇನ್ನಾವೆಲ್ಲ ಸತ್ಮೇಲೇ ಆ ವಂದ್ಮಗು ಏನ್ಮಾಡೀತು?.. (ಭಯಗರ್ಭಿತವಾದ ಸ್ವರದಿಂದ)
ಏನೇನನಾಹುತಗ್ಳು... ಕಷ್ಟಗ್ಳು ನಮ್ಕುಂಬಕ್ಸಂಭವ್ಸಿದ್ರೂ ಲಕ್ಷ್ಮೀಪತೀ.. ಇನ್ನದೊಂದು... ಇದ್ವರಿಗೂ
ಆಗಿಲ್ಲ... ಇನ್ನೀ ಹುಲಿಗಳ್ಮಧ್ಯೆ ... ಇನ್ನವಳ್ಗತಿ ಏನು?...
ನರ್ಸು: ಹುಲೀಬಾಯ್ಲಿ!... ನಮ್ ಪುಟ್ಟಾ? ಹಯ್ಯೋ!
ರಂಗಣ್ಣ: ಇದಕ್ಕೇ ಲಕ್ಷ್ಮೀಪತಿ, ನಾನ್ಸಾಯ್ಬಾರ್ದು ಅಂದದ್ದು... ಇವ್ರೆಲ್ಲಾ ಒಬ್ಬೊಬ್ರಾಗ್ಸತ್ತು
ಸ್ಮಶಾನಕ್ಕವರನ್ಸಾಗ್ಸಿ, ಬೂದೀ ಮಾಡಿ... ನನ್ಹತ್ರಿರೋಹಣ ಐದ್ಸಾವರ್ರೂಪಾಯಿ Cash ಇದೆ,
ಲಕ್ಷ್ಮೀಪತೀ ನನ್ಹತ್ರೀಗಾ !.. ದೇವ್ರನ್ಮರ್ತು ಧನಪಿಶಾಚಿಯು ಕಾಲ್ಮೇಲೆ ಬಿದ್ಹೊರ್ಳಾಡೋ
ಗೋಬ್ರಾಹ್ಮಣ್ರಿಗೆರಚಿಬಿಟ್ಟು, ದೇವ್ರೇ ಇನ್ನನಿಗ್ಯಾವ ಜನ್ಮ ಬಂದ್ರೂ ಈ ಹಾಳು ಹಣಕ್ಕಡ್ಬೀಳೋ
ಹಾರ್ವರ ಜನ್ಮ ಬೇಡ... ಬೇಡಾ.. ಅಂತ್ಬಡ್ಕೊಳ್ತಾ ಬಿಡಬೇಕೂಂತಿದೇನೆ, ಈ ದೇಹಾನ...
------------------------------------------------------------------
ಇದಕ್ಕೆ ಲಕ್ಷ್ಮೀಪತಿ ನೀನು Cure ಮಾಡ್ಲೇಬೇಕೂ.. ಇದಕ್ಕೇನೇ ನನ್ಹೆಂಡ್ತಿ ಮಕ್ಳು ಸತ್ಬೂದಿ
ಯಾಗೋವರ್ಗೂ ನಾನ್ಸಾಯ್ಬಾರ್ದು ಅಂತ್ಹೆದರ್ತಿರೋದು ನಾನು... ಸಾವಿಗೆ !! ನಿನ್ಕೈಯಿಂದಾಗ್ಲಿಲ್ವೋ
ನಮ್ಕುಟುಂಬಕ್ಕೆಲ್ಲಾ ವಿಷಾನ್ಕೊಟ್ಟು, ನಾನೂ ಕುಡ್ಡು, ಸಾಯ್ಬೇಕು, ಕೊನೇಲಿ! ಯಾಕೆ, ಅಂತೀಯೋ?...
ನನ್ದುಡ್ನೆಲ್ಲಾ ಮನೆ ಹೊಸಲ್ಮೇಲ್ಸುರ್ದು ಒಂದು willನಲ್ಲಿ 'ನಮ್ಮಿ ಐದ್ಹೆಣಾನ ಯಥಾ ವಿಧಿ ಯಾರು
ಸಂಸ್ಕಾರ ಮಾಡ್ತಾರೋ ಅವರ್ದೀ ದುಡ್ಡು” ಅಂತ ಬರದಿಟ್ಬಿಟ್ಸತ್ತೇನೋ... ಈ ಹಣಾನ್ಬಾಚ್ಕೊಳೋಕ್ಬರೋ
ಬ್ರಾಹ್ಮಣ್ರ ಗಲಾಟೇಲಿ, ನಮ್ಮಲ್ಬಿದ್ದಿರೋ ಒಂದೊಂದ್ಹೆಣಕ್ಕೆ... ಹತ್ಹತ್ಬ್ರಾಹ್ಮಣ್ಹ್ರೆಣ... ಈ
ಗುದ್ದಾಟ್ದಲ್ಲಿ ಬಿದ್ಹೋಗತ್ತೇ ಅಂತ್ನನಿಗಿಲ್ಹೇಳುತ್ತೆ! : ಈಗರ್ಥ್ವಾಗತ್ಯೇ ಲಕ್ಷ್ಮೀಪತೀ ಒಬ್ತಾಯಿ...
ತನ್ಕಣ್ದೆದ್ರೂಗೆ. ತನ್ಮಕ್ಳು ಅನ್ವಿಲ್ದೆ ಸಾಯೋದ್ನ ನೋಡ್ತಿರ್ಲಾರ್ದೆ ಅವುಗ್ಳಿಗ್ವಿಷ್ಯಾ ಕೊಟ್ಸಾಯ್ಸಿದ್ಲೂ
ಅಂತ Paperನಲ್ಲಿ ಓದಿ... ತಾಯೀಗ್ಮಕ್ಳನ್ಸಾಯ್ಸೋ ಹೃದ್ಯಾ ಹ್ಯಾಗ್ಬಂತೂಂತ್ಕೇಳ್ತಿದ್ವಲ್ಲಾ...
ಈಗರ್ಥವಾಯ್ತೇ... ಲಕ್ಷ್ಮೀಪತಿ ?, ನಮ್ಮನ್ನೋಡಿ... ನಮ್ಹೆಣಗ್ಳನ್ನೋಡಿ.., ಹತ್ಕುಟುಂಬ
ಬದಿಕ್ಕೊಳ್ಳೋದಾದ್ರೆ ಒಂದ್ಕುಟುಂಬ “ಗುಂ” ಆಗ್ಲೇ ಬೇಕು. ಹತ್ ಜನದ್ಹಾನಿ ತಪ್ಸೋ ವಿಷ್ಯದಲ್ಲಿ
ಒಬ್ರು ಸಾಯೋಕ್ಹಿಂಜರೀಬಾರ್ದು.!... ಹಿಂಜರಿಲೇಬಾರ್ದು,
ನರ್ಸು: ಯಾರೀಗ ಹಿಂಜರೀತಾ ಇರೋದು ? ಈ ಶನಿ, ಡಾಕ್ಟ್ರೊಬ್ಬ ಬರ್ದೇ ಇದ್ರೆ ನಾನೂ
ಸಾಯ್ತಿದ್ದೆ... ಎಲ್ಲಾನೂ ಸರ್ಹೋಗೋದಲ್ವಾ... ಹಯ್ಯೋ! ಹಯ್ಯೋ! ಈಗ್ಹ್ಯಾಗ್ಸಾಯೋದು ?
ಈ ಶನಿ ಡಾಕ್ಟ್ರು ಬಂದ್ದಿಟ್ನಲ್ಲಾ!! (ನರಳುತ್ತಾ ಹೊರಳುವಳು.)
ವೆಂಕಮ್ಮ: (ಪ್ರವೇಶಿಸಿ ಮೃದುವಾಗಿ) ಡಾಕ್ಟ್ರೇ... ನೀರ್ಕಾಸಿಟ್ಟಿದೇನೆ ಕಿಟ್ಟಿ ಹೇಳ್ದ್ಹಾಗೆ... ಅದ್ನ...
ಹ್ಯಾಗೆ...?
ಲಕ್ಷ್ಮೀಪತಿ: ಏನೂ ಇಲ್ಲಮ್ಮಾ... ಒಂದ್ಪಾತ್ರೇಲ್ತಣ್ಣೀರು... ಒಂದ್ಪಾತ್ರೇಲ್ಬಿಸ್ನೀರು,
ಕುದೀತಿರ್ಬೇಕ್ಹೆಚ್ಚುಕಡ್ಮೆ, ಕಿಟ್ಟಿ ಒಂದು Turnbler ನೀವೊಂದು Tumbler... ಮೊಳಕಾಲ್ಮೇಲೆ
(ರಂಗನ ಮೊಳಕಾಲನ್ನು ತೋರಿಸುತ್ತಾ) ಬಿಸ್ನೀರ್ಮೇರ್ಲ್ತಣ್ಣೀರು, ತಣ್ಣೀರ್ಮೇಲ್ಬಿಸ್ನೀರು, ಕಾಲ್ಘಂಟೆ
ಹೊತ್ತಾದ್ರು ಹಾಕೋದು... ತಿರ್ಗಿ ಔಷಧಾ. ಕಿಟ್ಟಿ ಕೈಲ್ಹಚ್ಸೋದು ಅಷ್ಟೆ, ಇನ್ನೇಳ್ರಂಗಣ್ಣಾ...
ನೀರಾರೀತು.
[ವೆಂಕಮ್ಮನೂ ರಂಗಣ್ಣನೂ ನಿಷ್ಕ್ರಮಿಸುವರು]
ಲಕ್ಷ್ಮೀಪತಿ: (ಮೇಜಿನ ಮೇಲೆ ಒಂದು ಸೀಸೆಯನ್ನೂ ಆರಳೆಯನ್ನೂ ಇಟ್ಟು ಬಾಗಿಲಿಗೆ
ಒರಗಿಕೊಂಡು ನಿಂತಿರುವ ಕಿಟ್ಟೂಗೆ) ಕಿಟ್ಟೂ! ಇದಿಲ್ಲಿಟ್ಹೋಗ್ತೇನೆ, ನಾಳೆ apply ಮಾಡೋಕೆ;
(Cottonooವೇ ಪಕ್ದಲ್ಲೇ ಇದೆ. ಹಂಚೀ ಕಡ್ಡೀಲಿ brush ಮಾಡ್ಕೊಂಡು ನೀನೇ ಹೆಚ್ಚು... ಸೀಸಾಯಿ
ಮಟ್ಗೆ ಹುಷಾರೂಪ್ಪ! Terrible Poisonoo, linament of Belladonna ಒಂದ್ಬಾರಿ ನುಂಗ್ಬಿಟ್ರೆ
ಯಾವ್ಡಾಕ್ಟ್ರು ಬಂದ್ರೂ ಬದಕ್ಸೋದಸಾಧ್ಯ... ಮಗು ಇರೋ ಮನೆ ಹುಷಾರೂಪ್ಪ!... Good
Night
ಕಿಟ್ಟ: Good-Night ಡಾಕ್ಟ್ರೆ... ಬೆಳಿಗ್ಗೆ ಬಂದ್ಹೇಳ್ತೇನೆ, ನರ್ಸು ಸ್ಥಿತೀನ,
(ಲಕ್ಷ್ಮೀಪತಿಯು ಬೀದಿ ಬಾಗಿಲಿನಿಂದಲೂ ಕಿಟ್ಟಿಯ ಹಿಂದಿನ ಬಾಗಿಲಿನಿಂದಲೂ
ನಿಷ್ಕ್ರಮಿಸುವರು.)
-------------------------------------------------------------
ನರ್ಸು: (ಕಣ್ಣುಗಳಲ್ಲಿಯೂ ಮುಖದಲ್ಲಿಯೂ ಉನ್ಮಾದವು ತುಂಬಿ ತುಳುಕುತ್ತ) ಯಾವ್ಡಾಕ್ಟ್ರ
ಕೈಲೂ ಆಗೊಲ್ಲ... ಇದೊಂದ್ಬಾರಿ... ಈಗ್ಹೆದರ್ಬಾರ್ದು... ಅಪ್ಹೇಳ್ದ.... ಹತ್ಜನದ್ಹಾನಿ ತಪ್ಸೋಕೆ ಒಬ್ರು
ಸಾಯೋಕ್ಹಿಂಜರೀಬಾರ್ದು!... ಇನ್ನಾನ್ಸತ್ನೋ.... ಎಲ್ಲಾ ಸರ್ಹೋಗತ್ಮನೇಲಿ ಅಪ್ನೂ ಅಮ್ನೂವೇ
ಸಾಯ್ಬೇಕಾದ್ದಿಲ್ಲ... ಕಿಟ್ಟಿಗೂ ಹೆಂಡ್ತಿ ಬರ್ತಾಳೆ... ಪುಟ್ಪಾನ್ನುಂಗೋಕೆ ಯಾವ್ಹುಲೀನೂ ಬರೋದಿಲ್ಲ...
ಹಿಂಜರೀಬಾರ್ದು... (ಹಲ್ಲನ್ನು ಕಚ್ಚಿಕೊಂಡು ಉನ್ಮಾದಾವಸ್ಥೆಯಲ್ಲಿ ಮಂಚವನ್ನು ಇಳಿದು ಕೋಣೆಯ
ವಾಮಾಂಕವನ್ನು ಸೇರಿ ದ್ರಾವಕದ ಸೀಸೆಯನ್ನು ಮೇಜಿನಿಂದ ಕಸಿದು, ಸೀಸೆಯ ಬಿರಡೆಯನ್ನು
ಕಿತ್ತೆಸೆದು ಸೀಸೆ ಬಾಯನ್ನು ತನ್ನ ಬಾಯಿಗೆ ಎತ್ತುವ ಪ್ರಯತ್ನದಲ್ಲಿ ಹಿಂಜರಿಯುವ ಕೈಯನ್ನೂ
ಮತ್ತೊಂದು ಕೈಯಿಂದ ಜಗ್ಗಿಸಿ, ಬಾಯಿಗೆಳೆಯುತ್ತಾ) ಈಗ್ಹೆದರ್ಬಾರ್ದು!... ಹಿಂಜರೀಬಾರ್ದು!...
ಅಪ್ಪನ್ಸಾವು... ಅಮ್ಮನ್ಸಾವು... ಕಿಟ್ಟೀ ಸಾವು... ಪುಟ್ಟಾ ಹುಲಿ ಬಾಯ್ಗೆ ಬೀಳೋದು...
ಇದ್ನೆಲ್ಲಾ ತಪ್ಸೋಕೆ... ಒಂದೇ ದಾರಿ... ಇದ್ನಗಾನ ಹೆದರ್ದೆ ಸುರ್ಕೊಂಡ್ನೋ ಬಾಯ್ಗೆ... ಡಾಕ್ಟ್ರು
ಹೇಳಿದ್ದಾರೆ... ಯಾರ್ಬದಕ್ಸೋಕೂ ಅಸಾಧ್ಯಾಂತ... ಬೆದರ್ಬಾರ್ದೀಗ... ಹಿಂಜರೀಬಾರ್ದೀಗ...
(ಥಟ್ಟನೆ ದ್ರಾವಕವನ್ನು ಬಾಯಿಗೆ ಬಸಿದುಕೊಂಡು ವಾಂತಿಯಾಗಲು ಉದ್ಯೋಗಿಸುವ ಆವಸ್ಥೆಯನ್ನು
ಹಲ್ಲು ಕಚ್ಚಿಕೊಂಡು ಅಡಗಿಸಿ... ಒಂದು ತೊಟ್ಟಾದರೂ ಹೊರಬೀಳುವುದಕ್ಕೆ ಆಸ್ಪದ ಒದಗದಂತೆ
ಎರಡು ಕೈಗಳಿಂದಲೂ ಬಾಯನ್ನು ಬಿಗಿದು ಮುಚ್ಚಿ ನುಂಗಿದ ದ್ರಾವಕವು ಜಠರದಲ್ಲಿ ಕಿಸಿದ
ವ್ಯಥೆಯನ್ನು ತಡೆಯಲಾರದೆ ನೆಲಕ್ಕೆ ಕುಸಿದುಬಿದ್ದು ಹೊಟ್ಟೆಯನ್ನು ಕೈಯ್ಗಳಿಂದ ಕಿವಿಚಿಕೊಳ್ಳುತ್ತಾ
'ಹಯೊ ಹಯ್ಯೋ' ಎಂದು ಹೊರಳಾಡುವಳು.)
ಪುಟ್ಟ: (ಪ್ರವೇಶಿಸಿ) ಏನಕ್ಕಾ ಇದೂ (ಬೆದರಿ ಬೆಚ್ಚಿಬಿದ್ದು) ಅಮ್ಮನ್ಕರಿತೇನೆ.
ನರ್ಸು: ಬೇಡಾ, ಇಲ್ಬಾ... ನೀರೂ... ನೀರು ಕಿಟ್ಟೂನ್ಮಟ್ಟಿಗ್ಕರಿ.. ಅಮ್ಮನಿಗ್ಹೇಳ್ಬೇಡ...
ಅಪ್ಪನಿಗ್ಹೇಳ್ಬೇಡ... ನೀರೂ... (ನೆಲದ ಮೇಲೆ ಬಿದ್ದು ಹೊರಳಾಡುತ್ತಾ) ನೀರೂ... ಕಿಟ್ಟೂನ್ಕರಿ....
ಹಯ್ಯೋ ನೀರೂ!
ಪುಟ್ಟ: (ಬಾಗಿಲಿಗೆ ಓಡಿ) ಕಿಟ್ಟೂ... ಕಿಟ್ಟೂ... ಇಲ್ಬಾ... ಅಕ್ನಿಗೆ...
ನರ್ಸು: ಮೆಲ್ಲಗ್ಕೂಗು ಪುಟ್ಟಾ... ನೀರೂ... ನೀರೂ...!!
ಪುಟ್ಟ: ತರ್ತೀನಕ್ಕಾ!... (ಹೋಗಿ ಒಂದು ಲೋಟ ನೀರನ್ನು ತರುವಳು.)
ನರ್ಸು: (ನೀರನ್ನು ಹಿಂದೇ ಗುಟುಕಿಗೆ ಕಡಿದು) ಸಾಲ್ದೂ... ಸಾಲ್ದೂ... ಚೊಂಬ್ನಲ್ತಗೊಂಬಾ...
ಬಿಂದ್ಗೇಲ್ತಗೊಂಬಾ... ಹಂಡೇಲ್ತಂದ್ರೂ ಸಾಲ್ದೂ... ಹಯ್ಯೋ! ಹಯ್ಯೋ...
ಕಿಟ್ಟೂ: (ಗಾಬರಿಯಿಂದ ಪ್ರವೇಶಿಸಿ) ಎನ್ನರ್ಸು ಇದೂ? (ಸುತ್ತಮುತ್ತಲ ವಾಸನೆಯನ್ನು
ನೋಡಿ, ಖಾಲೀ ಸೀಸೆಯನ್ನು ನೋಡಿ) ಹಯ್ಯೋ ದೇವ್ರೇ! ಇದ್ನ ಕುಡಿದ್ಬಿಟ್ಯಾ?... (ಬೀದಿ
ಬಾಗಲಕಡೆ ಹೆಜ್ಜೆ ಇಡುತ್ತಾ ಡಾಕ್ಟ್ರನ ಕರೀತೇನೆ!!
ನರ್ಸು: (ಹೊರಳಿ ಹೊರಳಿ ಕಿಟ್ಟಿಯನ್ನು ಸಮೀಪಿಸಿ ಅವನ ಕಾಲನ್ನು ಹಿಡಿದಪ್ಪಿಕೊಂಡು ಅವನ
ಪಾದದ ಮೇಲೆ ಮುಖವನ್ನು ಹೊರಳಿಸುತ್ತಾ) ದಮ್ಮಯ್ಯಾ... ಕಿಟ್ಟಿ... ಹೊಗ್ಬೇಡ... ಯಾವ್ಡಾಕ್ಟ್ರು
ಬಂದ್ರೂ ಅಸಾಧ್ಯ.... ಬದ್ಕೋದಸಾಧ್ಯ... ದಮ್ಮಯ್ಯಾ ... ಅಪ್ನಿಗೂ, ಅಮ್ನಿಗೂ ಹೇಳ್ಬೇಡಾ...
-------------------------------------------------------------
ನೀರೂ. (ಹಿಂದಕ್ಕೆ ಬಿದ್ದು ಹೊರಳಾಡುತ್ತಾ) ಹಾಪೀ ನೀರೋ. ನಿನ್ಧರ್ಮಕ್ನೀರೋ... (ಕಿಟ್ಟಿಯು
ಒಳಕ್ಕೆ ಹೋಗಿ ಚೊಂಬಿನ ತುಂಬ ನೀರನ್ನು ತರುವನು) (ನರಸುವು ಅದನ್ನು ಕಿತ್ತುಕೊಂಡು ಕುಡಿದು)
ಅಮ್ಮಾ... ಅಮ್ಮಾ (ಸ್ವಲ್ಪ ನಿಧಾನವಾಗಿ) ಹಯ್ಯೋ ಕಿಟ್ಟೀ... ನಾನ್ಹುಟ್ಟಿದಾರಭ್ಯ ಒಬ್ರಿಗೊಂದುಪ್ಕಾರ
ಮಾಡ್ಲಿಲ್ಲಾ... ಅಜ್ಜಿ ಸಾಯೋವಾಗ... ಅವ್ಳೂನೂ ಅಪ್ನೂನೂ ಬಯ್ದ್ಹಾಗೆ... ನನ್ಹುಟ್ಟಿದ್ದೇ
ನಮ್ಕುಟುಂಬಕ್ಕೆ ಅಪ್ಕಾರ... ಈಗ್ನನ್ಸಾವ್ನಿಂದ ಅಪ್ನಿಗೂ, ಅಮ್ನಿಗೂ, ನಿನಗೂ, ಪುಟ್ಟಾಗೂ, ಆಗೋ
ನನ್ನುಪ್ಕಾರಾನ.. ನಿನ್ಧರ್ಮಕ್ಕೆ ಕೆಡಸ್ಬೇಡ... ಕಿಟ್ಟೂ! ಆ ಸೀಸೇನ ಮೂಲೇಗ್ಬಿಸಾಕು, ನಾನ್ಹಿಗ್ಸತ್ತೆಂಬೋದು
ಹೊರಗ್ಬಿದ್ರೆ... ನಾಳೇ ನನ್ಹೆಣಾನ್ಸಾಗ್ಸೋದು... ಅಸಾಧ್ಯವಾಗುತ್ತೆ, ಅಪ್ನಿಗೆ... ನೀರೂ... ನೀರೂ...
ನೀರೂ... ನೀರೂ!!
ಕಿಟ್ಟು: (ಒಳಕ್ಕೆ ಹೊಗಿi ಚೊಂಬಿನ ತುಂಬ ನೀರನ್ನು ತರುವನು)
ನರ್ಸು: (ಕಿತ್ತುಕೊಂಡು ಕುಡಿದುಬಿಟ್ಟು) ನಿಲ್ಲಾರೇ.... ನಿಲ್ಲಾರೇ...
ಕಿಬ್ಬೊ: (ಮೆಲ್ಲಗೆ ನರಸುವನ್ನು ಎತ್ತಿ ಮಂಚದ ಮೇಲೆ ಮಲಗಿಸುವನು.)
ನರ್ಸು: ಪುಟ್ಟಾನ್ಬಿಡ್ಬೇಡ.... ಅಪ್ನಿಗ್ಹೇಳ್ಬಿಟ್ಟಾಳು!!
ಕಿಟ್ಟಿ.: ಇದ್ಪಾಪ್ವಲ್ವೇ ನರ್ಸೂ. ಹೀಗ್ಮಾಡ್ಬಹುದೇ ?... ದೇವ್ರು ಒಪ್ಪ್ಯಾನೇ ?
ನರ್ಸು: ಯಾವ್ದೇವ್ರು? ಕಿಟ್ಟೂ?... ಗಂಡಸ್ರಿಗಿಧಾನೆ ದೇವ್ರು... ಹೆಂಗಸ್ರಿಗೆ... ಗಂಡ್ನೇ ದೇವ್ರು
ಅಂತಾರಲ್ಲಾ ದೊಡ್ಡವ್ರು... ಗಂಡ್ನೇ ಇಲ್ಲದ್ನನಿಗೆ ದೇವ್ರೆಲ್ಲಿ?... ನನ್ಪಾಪಾನ ಒಪ್ಸೋಕಾಗ್ಲಿ.. ತಪ್ಪೂ
ಅನ್ನೋಕಾಗ್ಲಿ ಗಂಡ್ನಿಲ್ಲದ್ನನಿಗೆ ದೇವ್ರೆಲ್ಲಿಧಾನೆ ?... ಇನ್ನೀಪಾಪ್ದಿಂದ, ನಿನಗ್ಮುಂದಕ್ಬರೋ ಹೆಂಡ್ತೀಗೆ,
ದೇವ್ರನ್ನೂ... ನಾನ್ಸತ್ಮೇಲೆ ಪುಟ್ಪಾಗಾಗೊ ಮದ್ವೆಯಿಂದ, ಅವ್ಹ್ಳಿಗೊಬ್ಬ ದೇವರ್ನೂ... ನಾನ್ಮಾಡ್ಕೊಟ್ಹಾಗೆ
ಆಗುತ್ತೆ... ಕಿಟ್ಟು... ಇದ್ಪಾಪ್ವಲ್ಲ. ಪುಣ್ಯ... ಎನ್ದೊಡ್ಡೋಳಾದ್ದು ದೊಡ್ಡ ಪಾಪ... ಇದ್ವರ್ಗೂ
ಬದ್ಕಿದ್ದದ್ದೇ ಪಾಪ... ಇನ್ನಾನ್ಸಾಯೋದ್ಪುಣ್ಯ, ಕಿಟ್ಟಿ.., ಪುಣ್ಯ... ಕಿಟ್ಟೀ... ಹೊಗ್ತಿದೇನೆ...
ಅಮ್ಮನೊಂದ್ಸರ್ತಿ ನೋಡ್ಬೇಕೂಂತನ್ಸ್ತ್‌ತ್ತೆ ಅಪ್ನಿಗ್ತಿಳೀದ್ಹಾಗೆ... ಮೆಲ್ಲಗ್ಕರ್ಕೊಂಡ್ ಬರ್ತೀಯಾ...?
ಕಿಟ್ಟೂ: (ತನ್ನ ಆಳುವನ್ನು ತಡೆಯುತ್ತಾ) ಹೂಂ... ನರ್ಸು! (ನರ್ಸುವಿನ ಕೈಗಳನ್ನು
ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಅಳುವನು.)
ನರ್ಸು: ಅತ್ತೇನ್ಪ್ರಯೋಜ್ನ? ಕಿಟ್ಟಿ... ಅಜ್ಜಿ ಸತ್ತಾಗ್ನಿಂದ... ಅಳುವಿನಲ್ಲೇ: ಮುಳ್ಗಿರೋ
ನಮ್ಮನೇ... ಇವತ್ನಿಂದ ಆದ್ರೂ... ಅಳು ಅಡಗ್ಲಿ... ಕಿಟ್ಟೂ... (ಕಿಟ್ಟೂವಿನ ಮುಖವನ್ನು ತನ್ನ
ಮುಖದ ಹತ್ತಿರಕ್ಕೆಳೆದುಕೊಂಡು ಅವನ ಹಣೆಗೆ ಮುತ್ತಿಡುವಳು) ಕಿಟ್ಟೀ... ನಮ್ಕಿಟ್ಟಿ... ಅಮ್ಮನ್ಕರೀ...
ರಾಜ... ನೋಡ್ಬಿಟ್ಟ್ಹೋಗ್ತೇನೆ !!
(ಕಿಟ್ಟಿಯ ಅಳುತ್ತಾ ನಿಮ್ಮ ಮಿಸುವನು)
ಪುಟ್ಟ: ಅಕ್ಕಾ... ನೋವ್ನಿಂತಿದೆಯೇ?... ಎಲ್ಲಾ ಸರ್ಹೋಗುತ್ಯೆ?
ನರ್ಸು: (ಪುಟ್ಟಾವಿನ ಮುಖವನ್ನು ಸವರುತ್ತಾ) ಇನ್ಮೇಲೆಲ್ಲಾ ಸರ್ಹೋಗತ್ನನ್ರಾಣಿ... ಆದ್ರೆ
ನೋವು ಹಾಗೆ ಇದೆ. ಇನ್ನೂ ಹೆಚ್ತಿದೆ, ನೀರೂ... ನೀರೂ...!!
--------------------------------------------------------------
ಪುಟ್ಟ: ನೋವು ನಿಂತಿಲ್ವೇ ?... ಹೆಚ್ತಿದೆಯೇ. ಮತ್ತೆ ಹ್ಯಾಗ್ಸರ್ಹೋಗುತ್ತೆ ?
ನರ್ಸು: ಹ್ಯಾಗ್ಗೊತ್ತಿಲ್ವೇ ಪುಟ್ಟಾ?... ಎಲ್ಲಾ ಸರ್ಹೋಗೋಕ್ಮುಚನೇ ನೋವ್ಹೆಚ್ಚು.., ಬೆಳ್ಳಂ
ಬೆಳ್ಗಾಗೋಕ್ಮುಂಚೇನೇ ಕಕ್ಕಕ್ಕತ್ಲೆ ಹೆಚ್ಚು... ಹಕ್ಕಿಗ್ಳಿಗೆ... ರೆಕ್ಕೆ ಬಂದು ಹಾರೋಕ್ಮುಂಚೇನೇ
ಗೂಡಿನಿಕ್ಕಟ್ಬ್ಹೆಚ್ಚು! (ಪುಟ್ಟವನ್ನು ತಬ್ಬಿಕೊಂಡು) ನನ್ಕಂದ ಈಗ್ಯಾವ್ಹುಲ್ಲಿ ಬರುತ್ನೋಡೋಣ,
ನನ್ಕಂದನ್ನುಗೋಕೆ ... ಅಮ್ಮ ಬಂದ್ಲೇ ಪುಟ್ಟಾ....?
(ಕಿಟ್ಟ ಮತ್ತು ವೆಂಕಮ್ಮ ಇವರುಗಳು ಪ್ರವೇಶಿಸುವರು)
ಕಿಟ್ಟೂ: (ಬಾಗಿಲ ಬಳಿಯಲ್ಲಿ ಅಮ್ಮಾ ಎಲ್ಲಾ ಆಗ್ಹೋಯ್ತು ..ಹೋಗ್ತಿದಾಳೆ ಅಳದೆ...
ಮಾತಾಡ್ದೆ... ಸುಮ್ನೆ! (ಅಷ್ಟರಲ್ಲೇ ಬರುವ ದುಃಖವನ್ನು ತಡೆದುಕೊಂಡು, ಮಾತಾಡದೆ ಮಂಚದ
ಕಡೆಗೆ ತೋರಿಸುವನು.)
ವೆಂಕಮ್ಮ: (ನರಸುವನ್ನು ವೇಗವಾಗಿ ಸೇರಿ) ಹಯ್ಯೋ ನರಸು! ಹೀಗ್ಮಾಡ್ಬಹುದೇನೇ?
ನರ್ಸು: (ತಾಯಿಯನ್ನು ಪಕ್ಕದಲ್ಲಿರಿಸಿಕೊಂಡು ಅವಳ ಮುಖಕ್ಕೆ ತನ್ನ ಮುಖವನ್ನೊತ್ತುತ್ತ)
ಅಮ್ಮಾ!... ನಮ್ಮಮ್ಮಾ!... ಅಮ್ಮಾ ನೀನಕ್ಕೆಷ್ಪ್ದಿನಾ ಆಯ್ತಮ್ಮ... ನನ್ಗೆ ಮದ್ವೆ ಮಾಡ್ಬೇಕು ಅಂತ
ನಿಶ್ಚಯ್ಸಿದ್ದಿನ್ದಿಂದ ಈಗಿನ್ವರಿಗೂ ಒಂದ್ನಗೂ ನಲೀಲಿಲ್ಲಮ್ಮಾ.... ನಿನ್ಮುಖದ್ಮೇಲೆ..
ಆದ್ರಿನ್ಮೇಲ್ನಗ್ತೀಯಮ್ಮಾ...
ವೆಂಕಮ್ಮ: ಹಯ್ಯೋ! ನರ್ಸೂ... ನೀನ್ಹೋದ್ಮೇಲೆ ನಗೂ ಬೇರೇನೆ ನನ್ಗೇ ?
ನರ್ಸು; ಇಲ್ದೇ ಏನಮ್ಮಾ!... ಇನ್ಸ್ವಲ್ಪ್ದಿನ ದುಃಖ! ಅಷ್ಟೆ, ಕಿಟ್ಟೂಗ್ಮದ್ವೆ ಆಗಿ, ಮಕ್ಳ್ಹುಟ್ಟಿ,
ಮನೆ ತುಂಬ, ಆ ಮಕ್ಳು ಅಂಬೆಗಾಲಿಡ್ತಿರೋವಾಗ ನಗು ಬರುತ್ತಮ್ಮಾ, ತನ್ನಷ್ಟಗ್ತಾನೇ ಬರುತ್ತಮ್ಮಾ!
(ವೆಂಕಮ್ಮನ ತಲೆಯನ್ನು ಸವರುತ್ತಾ) ಅಮ್ಮಾ, ನಾನ್ದೊಡ್ಡೋಳಾಗೋಕ್ಮುಂಚೆ, ನಿನ್ತಲೇಲೊಂದ್ನರ್ತ
ಕೂದ್ಲಿರ್ಲಿಲ್ಲಮ್ಮಾ.. ಹೇಳ್ತಾರಲ್ಲಾ... ಕೊರ್ತೆ ಬಂತೂತಂದ್ರೆ ಕೂದ್ಲು ನರ್ತ್ಹೋಗತ್ತೇಂತ...
ತಿರ್ಗ್ಸಿಂತೋಷ ಬಂದ್ರಮ್ಮ, ನರ್ತಕೂದಲು ತಿರಗೂನೂವೇ ಕಪ್ಪಾಗ್ಬೇಕಲ್ವೆ?... ಕಿಟ್ಟೂಗ್ಹೆಂಡ್ತಿ
ಬಂದು ಪುಟ್ಟಾಗ್ಗಂಡ್ನೂ ಬಂದು, ಮನೆಯಲ್ಲಾ ಮಕ್ಳ ನಗು..ಬ್ರಾಹ್ಮಣ ವೇದಘೋಷ ಮನೇ
ತುಂಬ ತುಂಬ್ತಿರೋವಾಗ, ನಿನ್ಕೂದ್ಲೂ ಕಪ್ಪಾಗಿ ನಗ್ತೀಯಾಮ್ಮಾ ತಿರಗ್ನಗ್ತೀಯಾ... ಇದ್ನಾನ್ಮಾಡಿದ್ಪಾಪಾಂದ
ಕಿಟ್ಟು... ಹೆಂಗ್ಸಿಗೆ, ಗಂಡ್ಸೇ ದೇವ್ರೂಂತ ಅಂತಾರಲ್ಲಾ... ಕಿಟ್ಟೂ ಹೆಂಡ್ತಿಗೂ, ಪುಟ್ಟಾಗೂ ದೇವ್ರನ್ನೂ,
ನಿನ್ಮುಖಕ್ನಗೂನೂ ಅಪ್ನಿಗ್ಸಂತೋಷಾನೂ ತರೋ ಇದ್ನ, ನಾನ್ಮಾಡಿದ್ಪಾಪ್ವೇ ಅಮ್ಮಾ?... ಇನ್ನು
ಆಗ್ಲಾದ್ರೂನೂ ಯಾಕ್ಹುಟ್ಟಿದ್ಲೀ ಶನಿ, ಯಾಕ್ಹುಟ್ಟಿದ್ಲೀ ಶನೀ ಅ೦ತ ಅಜ್ಜಿ, (ತಟ್ಟನೆ ಎದ್ದು ಕುಳಿತು
ಎರಡು ಕೈಗಳನ್ನೂ ಮೆಲೆಕ್ಕೆತ್ತಿ, ಸೂರಿನಲ್ಲಿ ಯಾರನ್ನೋ ಕಂಡತೆ ದುರುಗುಟ್ಟಿ ದೃಷ್ಟಿಯನ್ನು
ನಿಶ್ಚಲವಾಗಿ ನಿಲ್ಲಿಸಿ ಚೀತ್ಕಾರ ಧ್ವನಿಯಿಂದ) ಅಜ್ಜೀ... ಬಯ್ಬೇಡ ಅಜ್ಜೀ.., ಶನೀಂತ್ಬಯ್ಬೇಡಾ...
ಇನ್ಮೆಲೆಲ್ಲಾ ಸರ್ಹೋಗುತ್ತೆ... ಅಜ್ಜೀ... ಬಯ್ಬೇಡ... ಅಜ್ಜೀ... ಬಯ್ಬೇಡಾ... ಹಾ? ... ಹಾಂ !...
(ಥಟ್ಟನೆ ಬೀಳುವಳು. ಗತಪ್ರಾಣಳಾದ ನರಸುವಿನ ತಲೆಯು ಮಂಚದ ಅಂಚನ್ನು ಅತಿಕ್ರಮಿಸಿ ಬಿದ್ದು
ತೂಗುವುದು, ಕೇಶರಾಶಿಯು ನೆಲಕ್ಕೆ ಬಿದ್ದು ಶವದ ಮುಖದಲ್ಲಿ ಮುಗುಳಿನ ಮುದ್ರೆಯು
ಕಂಡುಬರುವುದು)...
-------------------------------------------
ವೆಂಕಮ್ಮ: ಹಯ್ಯೋ! ನರ್ಸು! ಹೋದ್ಯಾ! (ಶವದ ಭುಜಪಾರ್ಶ್ವದಲ್ಲಿ ಮುಖವನ್ನು ಹೂತು
ಬಿಕ್ಕಿ ಬಿಕ್ಕಿ ಅಳುವಳು. ಕಿಟ್ಟಿಯ ತಲೆಯ ಭಾಗದಲ್ಲಿಯೂ ಪುಟ್ಟ ಪಾದದ ಕಡೆಯೂ ಮುಖಗಳನ್ನೂ
ಹೊರಳಿಸುತ್ತಾ ನರಸೂ, ನರಸೂ, ಅಕ್ಕಾ, ನಮ್ಮಕ್ಕಾ” ಎಂದು ಬಿಕ್ಕಿ ಬಿಕ್ಕಿ ಗೋಳಾಡುತ್ತಿರುವರು.)
ರಂಗ: (ನೆನೆದ ವಸನದೊಂದಿಗೆ ಪ್ರವೇಶಿಸಿ ಈ ದೃಶ್ಯವನ್ನು ನೋಡಿ) ಹಯ್ಯೋ ದೇವ್ರೇ!..
ಇದೇನನಾಹುತಾ? (ಮೇಜಿನ ಮೇಲಿನ ಖಾಲಿ ಸೀಸೆಯನ್ನೂ ಗಮನಿಸಿ, ಹಣೆಯನ್ನು ಬಡಿದುಕೊಳ್ಳುತ್ತ
ಶವವನ್ನೂ ಸಮಿಪಿಸಿ, ಅದರ ಮೇಲೆ ಮುಖವನ್ನು ಹೊರಳಿಸುತ್ತಾ... ಹೃದಯವನ್ನು ಭೇದಿಸುವ
ಆರ್ತಧ್ವನಿಯಿಂದ) ಹಯ್ಯೋ ! ನನ್ಕಂದಾ! ನನ್ಬಡ್ತನದ ಪಾಪಕ್ಕೆ, ಈ ಹಾಳ್ಸಮಾಜದ ಬಾಯ್ಗೆ
ಬಲಿಯಾಗೋಕ್ಕೊಟ್ನಿನ್ಬ್ರಾಹ್ಮಣ್ಕೆನ ನಿನ್ಪಾಪಿ ತಂದೇಗೆ ತಿರಗ ಉಳಿಸ್ಕೋಡೋಕೆ ನಿನ್ಬಲೀ ಆದ್ಯಾ!?...
ಹಯ್ಯೋ! ಈ ತಪ್ಯಾರದೂ !!! ಈ ತಪ್ಪ್ಯಾರ್ದೂ ?
[ಪರದೆಯು ನಿಧಾನವಾಗಿ ಬೀಳುವುದು]
ಭೂತ ದಯವುಳ್ಳವರು ಜಗದೊಳು |
ಭೂತನಾಥನ ಪ್ರೇಮಪಾತ್ರರು |
ಭೂತ ದಯವನ್ನು ತೆರೆದ ಪಾಪಿಗಳಂಥ ಬ್ರಾಹ್ಮಣರೋ? ||
ಭೂತದಯವೆಂಬುದನು ದುಡ್ಡಿಗೆ |
ಸೋತಹಾರ್ವನು ತಿಳಿಯನೇನೈ?
ನೀತಿ ಧರ್ಮದ ಮಾತು ರುಚಿಸುವುದೆಂತು ಘಾತುಕಗೇ? ||
-ಸಾ.ರಾ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ