ಶನಿವಾರ, ಡಿಸೆಂಬರ್ 28, 2019

ವೈದ್ಯನ ವ್ಯಾಧಿ - ಒಪ್ಪಮಾಡಿದ್ದು -ಕೈಲಾಸಂ


PDF @ https://archive.org/details/unset0000unse_s0h7
ವೈದ್ಯನ ವ್ಯಾಧಿ 
ಅಥ್ವಾ 
ನೆರೆಹೊರ್ಕೆ ನೆರೆಹೊರ್ಕೆನೇವೇಯೇ! 
ಪಾತ್ರಗಳು 

ಈತ ರಂಗಣ್ಣ   
ಈಕೆ ಸೀತಮ್ಮ 
ಈಕೆಯ ತಾಯಿ (ವಿತಂತು) ಸಾವಿತ್ರಮ್ಮ 
ನೆರೆಯಾತ ಸುಬ್ಬಣ್ಣ 
ನೆರಯಾಕೆ ಪಾರ್ವತಮ್ಮ 
ನೆರೆಯಕೆಯ ತಾಯಿ (ವಿತಂತು)        ಲಕ್ಷ್ಮೀದೇವಮ್ಮ 

ಸ್ಥಳ: ಬುಳ್ಳಾಪುರದ ಬೀದಿ (ಇವರ ಅಕ್ಕಪಕ್ಕದ ಮನೆಗಳ ಜಗಲಿಗಳು, 
ಮನೆಗಳ ಮುಂದೆ ಮುನ್ಸಿಪಲ್ ತೊಟ್ಟಿ) 

-------------------------------
ರಂಗ - ೧ 
[ಪರದೆಯು ಏಳುತ್ತಲೆ ಸುಬ್ಬಣ್ಣನು ಬಲಗಡೆಯ ಜಗಲಿಯ ಮೇಲೆ ನಿಂತು ಕೈ ತೊಳೆಯುತ್ತ, 
ಮುನಿಸಿಪಲ್ ತೊಟ್ಟಿಯಲ್ಲಿ ಪಾರ್ವತಮ್ಮನು ಎಂಜಲೆಲೆಯನ್ನು ಎಸೆಯುವ ಸಮಯಕ್ಕೆ ಸರಿಯಾಗಿ 
ರಂಗಣ್ಣನು ಪಕ್ಕದ ಮನೆಯ ಜಗಲಿಯಿಂದ ಆದೇ ತೊಟ್ಟಿಯಲ್ಲಿ ತನ್ನ ಎಂಜಲೆಲೆಯನ್ನು ಹಾಕುವನು. 
ನಂತರ ಸರ್ವರೂ ನಿಷ್ಟ್ರಮಣ ಆವರವರ ಮನೆಯೊಳಕ್ಕೆ ಒಂದು ನಿಮಿಷವಾಗುತ್ತಲೆ ರಂಗಣ್ಣನೂ 
ಸುಬ್ಬಣ್ಣನೂ ತಮ್ಮ ತಮ್ಮ ಮನೆಯಿಂದ ಹೊರಗೆ ಬಂದು, ಸುಬ್ಬಣ್ಣನು ಮನೆಯನ್ನು ಬಿಟ್ಟು ತಿಪ್ಪೆ 
ತೊಟ್ಟಿಯನ್ನು ಹಾಸಿ ರಂಗಣ್ಣನ ಮನೆಯನ್ನು ಸೇರುವನು.] 

ಸುಬ್ಬಣ್ಣ ಆಯ್ತೆ ಊಟ ? ... ಕೇಳೋದೇನೂ... ನಾನು ಕೈತೊಳ್ದು... ನಮ್ಮಾಕೆ... 
ನನ್ನೆಂಜ್ಲೆಲೇನ ತೊಟ್ಟಿ ಹಾಕೊವಾಗ್ಲೆ... ತಾವೂನೂ... ಕ್ಷಮ್ಸಿ... ತಮ್ಮೆಂಜ್ಲೆಲೇನ ತಾವೇ 
ತೊಟ್ಟೀಲಿ... ಇದೆಲ್ಲಾ ಯಾಕೇ.. ಒಟ್ನಲ್ಲಿ ನಮ್ಮಿಬ್ರಿಗೂ ಊಟಾ ಆಯ್ತು! (ಜಗಲಿಯ ಮೇಲೆ 
ಕೂರುತ್ತಾ) ಕೂತ್ಕೊಳ್ರೀ! ಆಯ್ತೆ ತಾಂಬೂಲ? 

ರಂಗಣ್ಣ: ನೋಡೀ! ಇವತ್ತೇನೋ... ಯಾವತ್ತೂ ಇಲ್ಲದ... ಹಲ್ನೋವೂ... 

ಸುಬ್ಬಣ್ಣ: ಗೊತ್ತು... ನಿಮಗೆ ಇಂಥಾ... ಹಲ್ನೋವು ಬಾರಿಬಾರಿಗೂ ಬರ್ಲೇ ಬರುತ್ತೇಂತ 
ನಿರ್ಧಸ್ಕೊಂಡೇ ಬಂದದ್ದು ನಾನು... ಔಷಧ ಸಮೇತ; (ಕೈಯಲ್ಲಿದ್ದ ಪೊಟ್ಣವನ್ನು ಬಿಚ್ಚುತ್ತಾ) 
ಹಾಕ್ಕೊಳ್ಳಿ ಚಿಗ್ರೆಲೆ! ಅಂಬಾಡಿ ಅಲ್ಲಾ... ಖಾಸಾ ಮೈಸೂರು; ಸುಣ್ಣ... ನಂಭಾವಮೈದ ದಫೇದಾರ... 
ಪೋಲೀಸು... ಮದ್ದೂರ್ಕಡೆ;... ಅಡ್ಕೆ ನಮ್ಮತ್ತೇಗ್ಬರೋ ಬಾಬ್ತು... ಮಲ್ಸೀಮೆ ಕಡೇಯಿಂದ... 
ಇನ್ಬಾಕಿ ಜಾಪತ್ರೆ, ಜಾಯಿಕಾಯಿ, ಜಾಪಾಳ, ಕೊಬ್ರಿ, ಹಾಡಲ್ಬರೋಹಾಗೆ “ಪುನಗು, ಜವ್ವಾಜಿ, 
ಕೇಸರಿ, ಕಸ್ತೂರಿ' ಈ ಗಲಾಟೆಗಳೆಲ್ಲಾ... ನಮ್ಮಾಕೇದು... ನಂಗೃಹ್ಣೀದು... ಹಾಕ್ಕೊಳ್ಳಿ... 
ಸಂಕೊಚ್ಚೇನು...; ಹೇಳ್ತೇನೆ, ನೆರೆಹೊರ್ಕೆ... ನೆರೆಹೊರ್ಕೆನೇ ಸ್ವಾಮಿ!... ಈ ಅನ್ಯೋನ್ಯ ಧರ್ಮಾನ 
ವ್ಯವಸ್ಥೆಗೆ ತರೋದು ನನ್ನ ಧರ್ಮಾಂತ ತಿಳ್ದೇ ಬಂದಿರೋದು ನಾನು ಈಗ ಇಲ್ಲಿಗೆ (ಮಾತನಾಡಲು 
ಉದ್ಯಮಿಸುವ ರಂಗಣ್ಣನಿಗೆ ಅಡ್ಡ ಮಾತಾಗಿ) ಹಯ್ಯೋ... ಗೊತ್ರಿ!... ಎಲ್ಲಾ ಗೊತ್ತು. ನಮ್ಮಿಬ್ಬ 
ಮನೇನೂ... ಒಂದೇ ಬಿಲ್ಡಿಂಗು; ಕಂಟ್ರಾಕ್ಟ್ ಕೆಲ್ಪ, ಗೋಡೆಗಳೆಲ್ಲಾ... ಬರೀ ಇಟ್ಟಿಗೆ ಪುಡಿ, 
ಮಣ್ಮೆತ್ತಿದ ಬಿದಿರು, ನಿಮ್ಮನೇಲಿ ನಿಂಪತ್ನಿ... ನಿಮ್ಮತ್ತೆ ಆವರ್ಗ್ಳ ಗಲಾಟೇಲೇ ನಿಮ್ಮ ಉಸುರು 
ಉಲ್ಲಾಸ ನಿಶ್ವಾಸಗಳೆಲ್ಲಾ... ನಾಯಕೆಮ್ಲ್ಹಾಗೆ ಕೇಳ್ಬರುತ್ತೆ... ನಮ್ಮನೇಲಿ... ಮನಸ್ಸಿಗೆ ತಂದ್ಯೋಬೇಡಿ 
ಹೇಳೇನಲ್ಲಾಂತ; .... ಈ ಎರಡು ಮನೇಲಿ ಇದ್ರೇ ಗಂಡಸ್ರು! ನಾಲ್ಕ್ಹೆಂಗಸ್ರು... ಆದ್ರೂನೂವೇ... 
ನನ್ಕೆಲ್ಸ, ನನ್ಸಂಬಳ ಮತ್ತು ನನ್ಚೈತನ್ಯದಿಂದ ನಾನು ನನ್ ಪತ್ನಿನ್ನೂ, ಆಕೆ ತಾಯಿನ್ನೂ 
ಕಾಪಾಡುತ್ತಿರೋ ಹಾಗ್ಯೆ ನಿಮ್ಮನೇಲಿ... ನೀವು ದಿನವೆಲ್ಲಾ.. ದನದ ಹಾಗೆ ದುಡ್ದು... ದಣ್ದು 
ಸಂಪಾದಿಸಿದ ಸಂಬಳ್ದಲ್ಲಿ... ಜೇವಿಸ್ತಿರೋ ತಂಪತ್ನೀನೂ ... ತಮ್ಮನ್ನಂಬಿ ಕೈಹಿಡ್ಡ ಪತ್ನಿನೂ ಆಕೆ 
ತಾಯಿನೂ ಬದುಕಿದ್ರೂನೂವೇ (ಮುನ್ಸಿಪಲ್ ತೊಟ್ಟಿನ ಸೂಚಿಸುತ್ತಾ ಗದ್ದದ ಸ್ವರದಿಂದ)... ಇದೇ 
ತೊಟ್ಟೇಲಿ ನನ್ನಂಜ್ಲೆಲೇನ, ನನ್ಹೆಂಡ್ತಿ ಈ ತೊಟ್ಟೇಲಿ ಎಸೀತಿರೋವಾಗ ತಮ್ಮಂಜ್ಲೆಲೇನ ತಾವು ತಾವೇ 
ಅದೇ ತೊಟ್ಟೆಗೆ... ತಮ್ಮನೇಲಿ ತಮ್ಮಿಂದ ಬದ್ಕಿರೋ ಇಬ್ಬರ್ಹೆಂಗ್ಸ್ರಿದ್ರೂನೂವೆ... ತಾವೇ 
ತಮ್ಮಂಜ್ಲೆಲೇನಾ... ಈ ತಿಪ್ಪೆ ತೊಟ್ಟೇಲಿ ಹಾಕಿದ್ದನ್ನ ನೋಡಿ ನನ್ಗೆ ಯಾಕೋ... ಕೋಪಿಸ್ಕೋ ಬೇಡಿ... 
ಮನೆ ಯಜಮಾನ್ಕೆ ಮನೆಯಾತನ್ದು ಅಂಬೋದ್ನ ಮರ್ತು 'ಜಡಭರತನೋ' 'ಇಲ್ಲಾ' 
------------------------------------
'ಶುಕಬ್ರಹ್ಮಋಷಿಯೋ'.. ಈ ಕಾಲ್ದಲ್ಲಿ... ಈ ಕಲಿಯುಗಲ್ಲಿ ಯಾವ ಪುರಾಕೃತ ಕರ್ಮಾನೋ... 
ಈ ಪುರಾಣದಲ್ಬರೋ ದೊಡ್ಡ ದೊಡ್ಡ ತಪಸ್ವಿಗಳೆಲ್ಲಾ ಒಂದು ದೊಡ್ಡ ಐಬು... ಇವರ 
ಬ್ರಹ್ಮಚರ್ಯದ ಗಲಾಟೇಲಿ... ಹೆಂಗಸಿನ ಸ್ವಭಾವ ತಿಳಿಯೋ ಬಾಬ್ತಿನಲ್ಲಿ ಇವ್ರೆಲ್ಲಾ ಸೊನ್ನೇಂಬೋದ್ನ 
ತಿಳ್ಕೊಂಡೇ... ತಮ್ಮ ಸಾತ್ವಿಕ ಸ್ವಭಾವಾನ ತಿಳಿದ್ರೂನೂವೇ ಒಟ್ನಲ್ಲಿ... ಕೊಪಿಸ್ಕೋಬೇಡಿ... 
ದೌಪದಿಯಿಂದ ಪಾಂಡವರು ಕೆಟ್ಟಿದ್ರೂ ಸೀತೆಯಿಂದ ರಾಮ ರಾಕ್ಷಸ್ರ ಪಾಲಾದ್ದೂ... ಹೇಳೊಕಲ್ಲಾ 
ಬಂದಿರೋದ್ನಾನು... ಮನುಷ್ಯ... ವ್ಯಕ್ತಿ... ಪುರುಷ.. ಹೇಳ್ತೇನೆ, ಗಂಡ್ಸು ತಾನು ದುಡ್ಡು ತಂದ್ಹಾಕಿದ 
ಧಾನ್ಯ ತರಕಾರಿ ಇತ್ಯಾದಿಗಳ್ನಾ ಪಚನಮಾಡಿ.... ಲೋಪಾಮುದ್ರೆ, ಆರುಂಧತಿಗ್ಳಂತೆ “ಅಗ್ನಿ ಎದುರ್ಗೆ 
ಪತಿ, ತನ್ಕತ್ತಿಗೆ ಕಟ್ಟಿದ ತಾಳೀ ಅಂಬೋ ಏಣಿಮೂಲ್ಕವಾಗಿ ಆತ್ನ ಶಿಶ್ರೂಷೆ, ಆತ್ನ ಸೇವೆ... 
ಸಂತೋಷ ಈ ಮೆಟ್ಳುಗ್ಳಿಂದದ್ಲೇನೇವೇಯೇ ಆ ಏಣೀ ತುದೀಲಿರೋ.., ಲಕ್ಷ್ಮಿ, ಸರಸ್ವತಿ, 
ಚಾಮುಂಡಿ ಈ ಬಾಬ್ತು ಹೆಂಗ್ಸು ದೇವತೆಗಳ ದರ್ಶನಾಂಬೋ ತತ್ತ್ವಾನ್ನಾ ಮರ್ತು.... ರೇಗ್ಬೇಡಿ 
ತಿಂಗಳಿಗೆ ಎಪ್ಪತ್ತೈದು ರೂಪಾಯಿ ನಿಂಸಂಬ್ಳ... ನಂದಾದ್ರೋ ಐವತ್ತೇ ರೂಪಾಯಿ... ಮಾವನ 
ಮನೆ ಕಡೆ ಬೆಂಬಲ್ವಿದೆ... ಆದ್ರೂನೂವೆ.... ನಮ್ಮನೆ ಹೆಂಗಸ್ರು ನನ್ಗೆ... ನನ್ಭಾಗಕ್ಕೆ...ನನ್ನ 
ಸಂತೋಷ ಸೌಕರ್ಯಗಳಿಗೆ ತಲೆಬಾಗಿ ನಡೀತಿರೋವಾಗ.. ರೀತಿ... ರಂಗ....ಗತಿ....ಗಮನ.... 
ಕೆಟ್ಟು..ನಿಮ್ಮಿಂದ್ಲೇ....ರೇಗ್ಬೇಡಿ......ನಿಮ್ಮಿಂದ್ಲೇ... ಬದುಕಿರೋ.. ಈ ಎರಡು ಹೆಂಗಸ್ರು.....  ಸ್ತ್ರೀ 
ಧರ್ಮ ರೀತೀನ ಮತ್ತು ನಿಮ್ಮಂಜ್ಲೆಲೇನಾ ನೀವೇ ಈ ಮುನಿಸಿಪಲ್ ತೊಟ್ಟಿಲಿ... ನನಗೇನೋ 
ಭೂದೇವಿ ಬಿರಿಬಾರ್ದೇ......ಆಕಾಶ ಒಡಿಬಾರ್ದೇ......ಸಿಡ್ಲು....ಕ್ಷಮ್ಸಿ ಇದೆಲ್ಲಾ...... ಇದೆಲ್ಲಾ ಅಂದ್ರೇನೂ, 
ಗೃಹಸ್ಥ ಗೃಹದ ಆಡಳಿತ, ಇಂದ್ರ ಸ್ವರ್ಗದ ಆಡಳಿತ, ಹೀಗೆ ಒಂದೊಂದ್ಲೋಕ್ದಲ್ಲೂ ರಾಣಿಗ್ಳು ಲಕ್ಷ್ಮೀ, 
ಸರಸ್ವತಿ, ಪಾರ್ವತಿ, ಇಂದ್ರಾಣಿ ಎಂಥೆಂಥಾ ಹೆಣ್ಣು ಪ್ರಭೃತಿಗಳು ಇದ್ರೂನೂವೇ ಆಯಾ 
ಲೋಕಕ್ಕಾಗಲೀ ರಾಜ್ಯಕ್ಕಾಗೀ, ಗೃಹಗಳಿಗಾಗೀ ಮುಖ್ಯಪ್ರಾಣಿ ಗಂಡ್ಸೇ ಹೊರ್ತು ಹೆಂಗ್ಸಲ್ಲ ಅಂಬೋದ್ನ 
ಮರ್ತು ಮಹರ್ಷಿಗಳ ಹಾಗೆ, ಮಹರ್ಷಿಗಳೇನೂ.., ಜಾತಾ. ಬಾಕಿ. ಜಮಾಖರ್ಚು ....  
ತಿಳೀದೇ, ಜಡಭರತನ ಹಾಗೆ.....ಕ್ಷಮಿಸಿ......  ರೇಗ್ಬೇಡಿ....

ರಂಗಣ್ಣ: (ಅಡ್ಡಮಾತಾಗಿ) ಬಯ್ಯಿರಿ.....ಅಯ್ಯೋ... ಬೇಕಾದಷ್ಟು ಬಯ್ರಿ... ನೀವೇಳೋದೆಲ್ಲಾ 
ಮಂದಟ್ಟಾಗುತ್ತೆ... ನನಗೆ ತಿಳಿಯದ್ದೇನೂ ನೀವ್ಹೇಳ್ಲಿಲ್ಲ...ಆದ್ರೇನ್ಮಾಡ್ಲಿ... ಲಾಗಾಯ್ತಿಂದ 
ಹ್ಯಾಗೋ ಕಾಣೆ ಹೀಗ್ಬಂತು...ಬಂದ್ಬಿಡ್ತು... ಬಂದ್ಬಿಟ್ಟಿಧೆ...ಬಂದ್ಬಿಟ್ಟದ್ನ ಕೊನೇವರೆಗೂ 
ಏಗೋದೆ....ಅಲ್ವೆ....ಗಂಡಸಿನ.....ಗುಣ....? 

ಸುಬ್ಬಣ್ಣ: ಏಗೋದು....? ಎಷ್ಟವರ್ಗೆ ಏಗೋದ್ರಿ...? ಎಷ್ಟವರ್ಗೆರೀ ಏಗೊದೂ! ಅಲ್ರೀ 
ಗಂಡ್ಸು ಸಂಪಾದ್ಸಿತಂದ್ಹಾಕ್ದ ಸ್ವತ್ನ ತಿಂದೂತಿಂದೂ ತೇಗಿ ಬೆಳೆದ ಮೇದಸ್ಲಿ ತನಗೆ ತಾಳಿ ಕಟ್ಟಿದ ಗಂಡ 
ತನ್ನಂಜ್ಲೆಲೇನೆ ತಾನೇನೇವೇ ಮುನಿಸಿಪಲ್ ತೊಟ್ಟೇಲಿ ಹಾಕೋ ಸ್ಥಿತೀಗೆ... ಹೆಂಡ್ತಿ ತನ್ನ 
ತರೋವರಿಗೂ ಏಗೋದೇನ್ರೀ....ತಮ್ಮನ್ನ ತಾವ್ಮರ್ತ್ರೂವೆ...ತಮ್ಮ ಮೇಲೆ...ಮಮತೆ...ಮರ್ಯಾದೆ 
ಇಟ್ಕೊಕೊಂಡಿರೋ ಈ ಪಾಪಿ, ನಾನು; ನಿಮ್ಮನ್ನ ಮರೀಲಿಲ್ಲ, ಆದ್ರೆ ಮಮತೆ, ವಿಶ್ವಾಸ, ಪ್ರೇಮ 
ಒಟ್ನಲ್ಲಿ ತಮ್ಮೇಲಿನ ಭಕ್ತಿ ಅಂಬೋ ಅಸ್ತಿಭಾರದ ಮೇಲೇವೇಯೇ ತಮ್ಮನ್ನು ರೇಗಿಸೋ, 
ಅಪಾಯಾನ್ಯೂ ಮರ್ತು, ದುಡ್ಕಿ.... ನಾನು ನನ್ನ ಅಲ್ಪ ಸ್ವಲ್ಪ ಸಂಸಾರಿಕ ಅನುಭವದಿಂದ ತಿಳ್ಕೊಂಡ 
ಗೃಹಸ್ಥ ಸೌಖ್ಯಾನ ಅನುಭವಿಸ್ತಿರೋ ಸೂಕ್ಷ್ಮ... ಸೂತ್ರ... ಒಟ್ನಲ್ಲಿ.... ಗುಟ್ನ ತಮ್ಗೆ ಸೋಕ್ಸಿ....  
--------------------------------------------------- 
ಮನೆ ಯಜಮಾನ.... ತನ್ನ ಯಜಮಾನ್ಕೆ ಸಾಗಿಸ್ಬೇಕಾದ್ರೆ..... ಮನೆ ಹೆಂಗಸ್ರನ್ನ... ಹತೊಟೀಲಿ, 
ಹದ್ನಲ್ಲಿ ಇಡಬೇಕೂ ಅಂಬೋ ಸೂಕ್ಷ್ಮಾನ್ನ ನನ್ಗೆ  ತಿಳ್ದಿರೋ ಹಾಗೆ ನಿಮ್ಗೂ ಉಪದೇಶ 
ಮಾಡೇಕೂಂತ ಎಂದ ನಾನು ನೆರೆಹೊರ್ಕೆ ಅಂಬೋ, ಗಂಡಸ್ರು ಗಂಡಸಿಗೆ ತೀರಸ್ಲೇಬೇಕಾದ 
ಋಣಾನ ತೀರ್ಸೋಕೇ ಬಂದಿರೋದು ನಾನು 

ರಂಗಣ: ಹೌದ್ರೀ.... ನೀವು ಹೇಳಿದೆಲ್ಲಾ ಸರ್ಯೆ.. ಆದ್ರೆ ದಾರಿ ತಪ್ಪೋನು ಅಲ್ಪ ಸ್ವಲ್ಪ 
ತಪ್ಪಿದ್ರೆ ಅಷ್ಟಿಷ್ಟ್ರಲ್ಲೇ ಸರ್ಪಡ್ಸಬಹುದು; ಆದ್ರೆ ಹಳೇಬೀಡ್ಗೇ ಅಂತ ಹೊರಟೋನು ಹಾರ್ನಹಳ್ಳಿಗೆ ಬಂದು 
ಸೇರಿರೋವಾಗ ಏನ್ದಾರಿ... ಏನ್ತಾನೇ ತೋರ್ಸೋದು? ಈಗ ನನ್ನ ಈ ಸ್ಥಿತೀಲಿ....? 

ಸುಬ್ಬಣ್ಣ: ಏನ್ದಾರ್ಯೇನ್ರೀ... ನನ್ದಾರಿ! “ನನ್ಮನೇ ಗಂಡ್ಸು ನಾನು; ಮನೆ ಬಾಡ್ಗೆ ಕೊಡೋನು 
ನಾನು... ಮನೆ ದಿನ್ಸು ಧಾನ್ಯ ತರ್ಕಾರಿ ತಂದ್ಹಾಕೋನು ನಾನು... ಅದ್ನ ನನ್ಹೊಟ್ಟೆಗೂ ತನ್ಹೊಟ್ಟೆಗೂ 
ಬೇಯ್ಸಿ ಬಡ್ಸೋಳು ನಾನ್ತಾಳಿ ಕಟ್ಟಿ ತಾನು ಅಗ್ನಿಸಾಕ್ಷಿಯಾಗಿ ನನ್ಕೈ ಹಿಡ್ಡ ನನ್ಹೆಂಡ್ತಿ... ಇನ್ಮನೇ ಸುತ್ಮುತ್ತ 
ಕೆಲ್ಸಕ್ಕೋ, ಗಂಡನ್ನೂ ಕಳ್ಕೊಂಡು ದಿಕ್ಕಿಲ್ದೆ ಪಾಡಿಲ್ದೆ ತನ್ನ್ಮಗಳು ನಂಬಿದ ಅಳಿಯನ್ನೇ ತಾನೂ 
ನಂಬ್ಕೊಂಡು ವಾರ್ಧಿಕ್ಯಾನ್ನ ಕಳೆಯೋಕೆ ಅಂತ ಮನೆಮೂಲೇಲಿ ಮುದರ್ಕೊಂಡ್ಬಿದ್ದಿರೋ ಮುದ್ಗೊಡ್ಡು 
ನಮ್ಮತ್ತೆ! ಸುತ್ಮುತ್ ಕೆಲಸಕ್ಕೆ ಸಗಣಿ ಬಾಚಿ, ಗೋಮಯ ಇಡೋಕೆ!”... ಇದು ಕಾಣ್ರೀ ನನ್ದಾರೀ! 
ಈದಾರೀನ್ಬಿಟ್ಟು ಹಳೇಬೀಡೇನು, ಹಾರ್ನಹಳ್ಳಿಗೆ ಏನು, ಹಂಪಾಪುರ್ವೇನು... ಬತೇರಾಂ ಪುರಿವರೆಗೂ 
ಕಾಲ್ತಪ್ಪಿ ಕಂಗೆಡ್ತಿದ್ರೂನೂವೇ ನೀವು ಒಂದು ಕ್ಷಣಮಾತ್ರ... ಪಂಚಾಕ್ಷರಿ... ಷಡಾಕ್ಷರಿ ಉಪದೇಶ್ದಲ್ಲೇ ... 
ಪ್ರಪಂಚಾನುರುಳ್ಸೋ ದಾರಿ, ದೊಡ್ಡ ದೊಡ್ಡ ಗುರುಗ್ಳೂ ಹಿಂದೆ ನಮ್ಹಿರಿಯರ್ಗೆ ಉಪದೇಶಿಸಿದ 
ಹಾಗೆ.... ನಾನು ನನ್ ಸಂಸಾರಾನ ಆಳೋಹಾಗೆ ನೀವೂನೂ ನಾಳೆ ರಾತ್ರಿ ಇಷ್ಟ್ಹೊತ್ತಿಗೆ 
ನಿಂಸಂಸಾರಾನ ಆಳಿ ಅನುಭವಿಸೋ ಸೂತ್ರ ಹೇಳ್ಕೊಡ್ತೇನೆ ಸ್ವಾಮಿ! ಆದ್ರೊಂದು ಮಾತು. ರಾತ್ರಿಕಾಲ 
ಶಬ್ದ ಬಲ್ದೂರ ಓಡುತ್ತೇ, ನಾನ್ಮಾತ್ಗಾನ ನಿಮ್ಮನೆ ಹೆಂಗಸ್ರ ಕಿವೀಗ್ತಾಕ್ತೋ ನೆಗದ್ದ್ಹಾಗೇನೇ ನನ್ತತ್ವಗಳು. 
ಚಂದ್ರಿಕೆ ಗುಡಿವರ್ಗೂ ನಡೆದ್ಬಿಟ್ಟು ಬರೋಣ, ಬನ್ನಿ... (ರಂಗಣ್ಣನು ಜಗುಲಿಯನ್ನು ಬಿಟ್ಟು ಆತನನ್ನು 
ಸೇರಿ ನಡೆದುಬರುವನು) ನೋಡಿ ಸ್ವಾಮಿ! ನಾಳೆ ನಿಂಸಂಬ್ಳ ಇಪ್ಪತ್ಮೂರು ರೂಪಾಯಿ ಕೈಗೆ ಬಿದ್ಬಿಡುತ್ತೆ. 
ನಿಮ್ಮಾಕೆ ತೌರುಮನೆ ಪಟ್ಣ ; ಹತ್ರ್ಹತ್ರ, ಎರಡು ರೂಪಾಯ್ಲಿ ಆಡ್ಹೋಗುತ್ತೆ ಇಬ್ರ್ಹೆಂಗ್ಸ್ರ 
ರೈಲುಛಾರ್ಜು.... ಇದರ್ಮೇಲೆ ಅವರೂರ್ಲಿ ಒಂತಿಂಗಳ್ಜೀವ್ನಕ್ಕೆ ಇಪ್ಪತ್ಮೂರು ರೂಪಾಯಿ ಕೊಟ್ಟು 
ಓಡ್ಸಿದ್ರೂನೂವೇ, ಜಾತಾ ಬಾಕಿ ಐವತ್ತು ರೂಪಾಯ್ಲಿ ಒಂತಿಂಗ್ಳು ಜೀವ್ನ ನಿಭಾಯಿಸ್ಕೊಂಡು 
ಬದ್ಕಿದ್ದ ಪಕ್ಷಕ್ಕೆ... (ಎನ್ನುತ್ತಾ ರಂಗಣ್ಣನನ್ನು ಕೈ ಹಿಡಿದುಕೊಂಡು ಇಬ್ಬರೂ ನಿಷ್ಟ್ರಮಿಸುವರು.) 

ಸಾವಿತ್ರಮ್ಮ: (ಸುಬ್ಬಣ್ಣನು ಇದುವರೆಗೂ ಮಾತನಾಡುತ್ತಿದ್ದುದನ್ನು ಹೊಂಚುಳುತ್ತಿದ 
ರಂಗಣ್ಣನ ಗೃಹಿಣಿಯೂ ಅತ್ತೆಯೂ, ಗಂಡಸರು ನಿಷ್ಕ್ರಮಿಸುತ್ತಲೂ.., ಒಬ್ಬಳ ಮುಖವನ್ನೊಬ್ಬಳು 
ನೋಡಿ)... ಇದೇನನ್ಯಾಯಾನೇ ಸೀತೂ!...  

ಸೀತಮ್ಮ: ಅನ್ಯಾಯ! ಅನಾಹುತಾಮ್ಮ! ಸರ್ವನಾಶ ! ಈಗ್ಲೇನೇ ಪಕ್ಕದ್ಮನೆಗ್ಹೋಗಿ 
ಆಕೇನೆಬ್ಸಿ....? (ಎಂದು ಚಿತ್ಕರಿಸಿ ಬೀದಿ ಬಾಗಿಲನ್ನು ಬಿರುಸಾಗಿ ತೆಗೆದು ತಾಯಿಯೂ ಮಗಳೂ 
ಹೊರಬರುವರು.) 

ಸಾವಿತ್ರಮ್ಮ: ಇದೇನ್ಹುಚ್ಚೇ...?  

-------------------------------------------

ಸೀತಮ್ಮ: ಹುಚ್ಚು! ಈಗ ಸುಮ್ನಿರೋದು ಹುಚ್ಚು! ನೀನ್ ಕಿವ್ಡೇಮ್ಮ? ಆ ಶನಿಗಂಡ್ಸು 
ಹೇಳಿದ್ದು ಕೇಳ್ಲಿಲ್ವೇ ನೀನು? ರೈಲುಛಾರ್ಜು ಕೊಟ್ಟು ಕೈಲಿಪ್ಪತ್ಮೂರು ರುಪಾಯಿ ಇಟ್ಟು 
ನಮ್ಮನ್ನೋಡ್ಸೋದಂತೆ, ಪಟ್ನಕ್ಕೆ...! ಅದ್ರ ಮಾತ್ನೇನಾದ್ರೂ ಈ ಗಂಡ್ಸು ಕೇಳ್ಕೊಂಡು ಒಂದ್ವೇಳೆ... 
ನಮ್ಗತಿ ಏನಮ್ಮಾ?  

ಸಾವಿತ್ರಮ್ಮ: ಗತಿ? (ತಟ್ಟನೆ ಜಗಲಿಯಮೇಲೆ ಕುಸಿದು ಕುಳ್ಳಿ)  ಗತಿ... ಗಗನ್ವೇಗತಿ!... ಇದಕ್ಕೆ 
ನಿನ್ನುಪಾಯ್ವೇನು?  

ಸೀತಮ್ಮ: ಈಗ್ಲೇ ಆ ಶನಿಯ ಹೆಂಡ್ತಿನೆಬ್ಸಿ ಮುದ್ಗೊಡ್ಡು ಅಂದ್ನಲ್ಲಾ ಆ ಮುದಿ ಪ್ರಾಣೀನ್ನೂ 
ಎಬ್ಸಿ ಅವರ್ಗ್ಹೇಳಿ... 'ನಿಮ್ಮನೇಯಾತನ್ಬೆದ್ರಿಕೇಗೆ ನೀವು ಬೆದರ್ಕೊಂಡು ಮುದರ್ಕೊಂಡು ಬಿದ್ದಿದ್ರೂವೇ... 
ಈ ಪ್ರಪಂಚದಲ್ಲಿರೊ ಹೆಂಗಸ್ರೆಲ್ಲಾ ನಿಮ್ಹಾಗಲ್ಲ ; ನಮ್ಮ ಗಂಡಸ್ಗೆ ದುರ್ಬೋದ್ನೆ ಮಾಡೋಕ್ಹೊರ್ಟಿರೋ 
ನಿಮ್ಹಾಳು ಗಂಡಸ್ನ ಕಟ್ಟಾಡ್ನಲ್ಲಿ ಇಟ್ಕೋಬೇಕು... ನೀವೇ' ಅಂತ ಆಕೆಗೆ... 

ಸಾವಿತ್ರಮ್ಮ: ಹಯ್ಯೋ ಮಂಕು ! ಆ ಘಾತ್ಕ! ಆ ಇಬ್ರ್ಹೆಂಗಸ್ರ ಬೆನ್ನೆಲ್ಬನ್ನ ಬಗ್ಸಿ 
ಅವನ್ಬಾಯ್ಬಿಟ್ಟ್ಹಾಗೆಲ್ಲಾ ಆಡ್ತಿರೋ ಹೆಂಗಸ್ರನ್ನ ಈಗ...  ಇಷ್ಟ್ಹೊತ್ನಲ್ಲಿ.. ನಿದ್ದೆಯಿಂದೆಬ್ಸಿ.. ನಾವಿಬ್ರೂ 
ಎಷ್ಟು ಬಡುಕೊಂಡ್ರೂನೂವೇ ಮಂದಟ್ಟಾಗುತ್ಯೇ ಆ ಮಂಕುಗಳಿಗೆ.. ? ಹೇಳ್ತೇನೆ ಕೇಳು; ಆ 
ಪಟಿಂಗ.. ಆ ಪುರುಷಪ್ರೇತ... ನಿನ್ಗಂಡನ್ಗೆ... ಮನೆ ಯಜಮಾನ್ಕೆ ಗಂಡ್ಸ್ದು ಅಂಬೋ ಸೂಕ್ಷ್ಮಾನ 
ಹಾಗೆ ಈಗ ಉಪದೇಶ ಮಾಡಿದಾನೋ... ಅದೇ ಪ್ರಕಾರ ನಾವಿಬ್ರೂನೂವೇ ನಾಳೆ ಈ ಇಬ್ರು 
ಗಂಡ್ಗಳೂ ಅವರವರ ಆಫೀಸ್ಗೆ ಹೋದ್ಮೇಲೆ... ಮನೆ ಆಡಳ್ತಾನ ಹೆಂಗಸ್ರೇ ಜರಗ್ಸೋ ಸೂಕ್ಷ್ಮಾನ 
ಅವರಿಬ್ಬರೂ ಉಪದೇಶ ಮಾಡಿ, ನಾವಿಬ್ರೂ ಬದುಕ್ಕೊಳ್ಳೋದು ಅಲ್ದೆ... ಮನೆ ಗಂಡಸ್ಗೆ 
ಬೆದರ್ಕೊಂಡು ಮುದರ್ಕೊಂಡು ಬಿದ್ದಿರೋ ಆ ಎರ್ಡು ಮತಿಗೆಟ್ಟ ಹೆಂಗಸ್ರೂ ಬದಿಕೊಳ್ಳೋಹಾಗೆ ಅವ್ರ 
ಕಿವೀಲಿ ನಮ್ಮ ಸೂಕ್ಷ್ಮಾನ ಸಾಂಗೋಪಾಂಗ್ವಾಗಿ ಉಪದೇಶಿಸೋದು ಜಾಣ್ತನ್ವೋ ಇಲ್ಲಾ ಹೀಗೆ 
ಹುಚ್ಚ್ಹುಚ್ಚಾಗಿ ಇಷ್ಟ್ಹೊತ್ನಲ್ಲಿ... ಗಲಾಟೆಮಾಡಿ...  

ಸೀತಮ್ಮ: ಹೌದಮ್ಮ, ಆ ಶನಿ ಮಾತು ಕೇಳ್ಕೊಂಡು ಬರ್ಲೀ... ಗಂಡ್ಸು! ... ನಾಳೆ 
ಆ ಶನಿ ಆಫೀಸ್ನಿಂದ ತಿರ್ಗಿ ಬರೋ ಹೊತ್ಗೆ... ನಮಗ್ತಿಳ್ದಿದ್ದೆಲ್ಲಾ ಆ ಹೆಂಗಸರಿಗೆ ಹೇಳಿ... 

ಸಾವಿತ್ರಮ್ಮ: ನಾ ಹೇಳಿದ್ನ ತಿರ್ಗಿ ನೀ ಹೇಳ್ಬೇಡ್ವೇ! ಆ ಗಂಡ್ಸು ಹೇಳ್ದ್ಹಾಗೆ 'ನೆರೆಹೊರ್ಕೆ 
ನೆರೆಹೊರ್ಕನೇವೇಯೆ; ಗಂಡ್ಸು ಗಂಡಸ್ಗೆ ಗಂಡಸ್ತನ್ದ ಸೂಕ್ಷ್ಮ ಹೇಳ್ಕೊಡೋಹಾಗೆ, ಹೆಂಗ್ಸೂನೂವೆ 
ಹೊಂಗಸ್ತನ್ದ ಸೂಕ್ಷ್ಮಾನ ಅವರಿಬ್ಬರ್ಗೂ ಹೇಳ್ಕೊಟ್ಟು... ನಮ್ಮ ನಮ್ಮ ನೆರೆಹೊರ್ಕೆ ಋಣಾನ 
ನಾವ್ತೀರಿಸ್ಕೊಳ್ಳೋದು... ಈ ಗಂಡುಗ್ಳು ಅಫೀಸ್ಗ್ಹೊರ್ರ್ಟೋದ್ಮೇಲೆ! ನಾಳೆ ! ಈಗಲ್ಲ... ಈ 
ನಡುರಾತ್ರೀಲಲ್ಲಾ! ಬಾ ಒಳ್ಗೆ! ಬಂದ್ಗಿಂದ್ಬಿಟ್ಟಾವು!  
[ ನಿಷ್ಕ್ರಮ ಣ ಒಳಗೆ] 
[ಪರದೆ ಬೀಳುವುದು] 
---------------------------------------------- 
ರಂಗ - ೨ 
ಮಾರನೇ ದಿನದ ಮಧ್ಯಾಹ್ನ 
[ ಸುಬ್ಬಣ್ಣನ ಜಗುಲಿ, ತಮ್ಮ-ಸಾವಿತ್ರಮ್ಮನೂ, ಪಾರ್ವತಿ-ಲಕ್ಷ್ಮೀದೇವಮ್ಮನೂ ಕುಳಿತಿರುವರು.] 

ಪಾರ್ವತಮ್ಮ: (ತಲೆಬಾಗಿ ನಮ್ರತೆಯಿಂದ ನೀವಿಬ್ರೂ ಹೇಳೋದೆಲ್ಲಾ ಸರೀಮ್ಮಾ, ಆದ್ರೆ 
ನಾವೇನ್ಮಾಡೋದು? ಎಷ್ಟಾದ್ರೂನೂವೇ ಹೆಂಗಸ್ರು ನಾವು; ಹೆಂಗ್ಸಾಗ್ಲೀ ಗಂಡ್ಸಾಗ್ಲೀ ...  
ಯಾರಾದ್ರೂನೂವೇ, ಅವರ್ನಡ್ತೆ... ಆಚರ್ಣೆ ಇವುಗ್ಳೆಲ್ಲಾ ಅವರವರ ಚಿಕ್ಕಂದ್ನಲ್ಲಿ ತಂದೆ, ತಾಯಿಗಳು, 
ಇತ್ಯಾದಿ ಹಿರಿಯರು ಕಲಿಸಿದ ಬುದ್ದಿ ಪ್ರಕಾರ... ಒಟ್ನಲ್ಲಿ ಹೇಳ್ತನೆ ಗಿಡ ನೆಟ್ಗೋ ಸೋಟ್ಗೋ 
ಬೆಳ್ಯೋದು ಎಲ್ಲಾ ಸಸಿಯಾಗಿರೋವಾಗ್ಲೇನೇವೇಯೇ ತೋಟಗಾರ ತೀರ್ಮಾನಿಸ್ದ್ಹಾಗೆ;... 
ನನ್ಚಿಕ್ಕಿಂದ್ನಿಂದ... 'ಹೆಂಗಸ್ಗೆ  ಗಂಡನಲ್ದೆ ಗುಡಿಯಿಲ್ಲಾ ಗೋಪ್ರವಿಲ್ಲಾ ! ತನ್ಕತ್ಗೆ ತಾಳಿ ಕಟ್ದೋನಲ್ದೆ ಬೇರೆ 
ದೇವ್ರಿಲ್ಲಾ ದಿಂಡ್ರಿಲ್ಲಾ'ಂತ ಕಲ್ಸಿ ಬೆಳೆಸಿದ್ಳು ನಾಮ್ತಾಯಿ ನನ್ನ; ಏನಮ್ಮಾ? ಸಂಸ್ಕೃತ ಗೊತ್ತು  
ನಂತಾಯಿಗೆ!  

ಲಕ್ಷ್ಮೀದೇವಮ್ಮ: ಹೂಂ ! ಪಾತು ದಿಟ; ಸಂಸ್ಕೃತ ನಿನ್ಗೆ ಗೊತ್ತಿಲ್ಲ! ನನ್ಸಂಸಾರದ ಗಲಾಟೇಲಿ 
ನಿನ್ಗೆ ಸಂಸ್ಕೃತಾ ಕಲ್ಸೋಕೆ ನನ್ಗೆ ಬಿಡ್ವಿರ್ಲಿಲ್ಲಾ ಆದ್ರೆ ನಮ್ಮಮ್ಮ... ಆವಳ್ಹೆಸ್ರೇ ನಿನ್ಗೂ ಇಟ್ಟಿದ್ದೂ... 
ಅವಳ್ಹೇಳಿದ್ದ್ಹಾಗೆ 'ದುರ್ಗುಣೋವಾ ದುರಾಚಾರೋ! ಸರ್ವದೋಷ ಸಮನ್ವಿತಃ || ಸ್ತ್ರೀಣಾಂ ಶುದ್ಧ 
ಸ್ವಭಾವಾನಾಂ! ಪತಿರೇವೀಶ್ವರ ಪ್ರಭುಃ|| ' ಅಂದ್ಹಾಗೆ... ಗಂಡ ಹ್ಯಾಗಿದ್ರೂನೂವೇ ಅವನ್ಪಾದ ಪೂಜೆ 
ಮಾಡಿ, ಅವನ್ನ ಸಂತೋಷ್ಪಡ್ಸಿ, ಅವನೆದುರ್ಗೇನೇವೇ, ಅವನ್ಕಟ್ಟಿದ್ತಾಳಿ ಅವನಿಟ್ಟ್ಕುಂಕ್ಮ ಅರ್ಶಿನದ 
ಜೊತೇಲೆ ಆತ್ಮಹತ್ಯ ಮಾಡ್ಕೊಂಡಾದ್ರೂ, ಅವನ್ಸಾಯೋಕ್ಮುಂಚೇನೇವೇಯೇ, ಕಣ್ಮುಚ್ಚೋದೇ 
ಹೆಂಗಸ್ಗೆ ಪರಗತಿ! ಇದು ನನ್ಗಿಲ್ದಿದ್ರೂನೂವೇ... ಸಾವಿತ್ರಮ್ನೋರೆ, ನಿಮ್ಗೂ ಇಲ್ದಿದ್ರೂನೂವೇಯೇ, 
ರೇಗ್ಬೇಡಿ!... ಸೀತಾದೇವಿ ಅಂತ ಹೆಸ್ರಿಟ್ಟ ನಿಮ್ಮ ಮಗಳು ಇಂಥಾ ದುರ್ಯೋಚ್ನೆಗಳ್ನ ಒಂದೂ 
ತಿಳಿಯದ್ನಂಪಾತೂಗೆ ಬೋಧಿಸ್ತಿರೋದ್ನ ನೀವೊಂದ್ಮಾತೂ ಆಡ್ದೇ ಕೇಳ್ತಿರೋದು ಉಚಿತ್ವೇ ? ...  
ಮಾತೃಧರ್ಮ್ವೇ ? ಸ್ತ್ರೀ ಧರ್ಮ್ವೇ ? ನನ್ಗಿಂತ ದೊಡ್ಡೋವ್ರ್‌ ನೀವು ! ಕೆಟ್ಕುಟುಂಬಾನ ಕುದುರ್ಸೋದು 
ಪುಣ್ಯ; ಧರ್ಮ; ಪಾತಿವ್ರತ್ಯ, ಪತಿಸೇವೆ, ಸ್ತ್ರೀಧರ್ಮನೀತಿ ಇತ್ಯಾದಿಗಳ ಮುಂದಿಟ್ಕೊಂಡ್ನಡೀತಿರೋ 
ನನ್ಸಾಧು ಮಗಳ್ಗೆ ಹೀಗೆಲ್ಲಾ ದುರ್ಬೋಧೆ ಮಾಡ್ತಿರೋ ನಿಮ್ಮ ಸೀತೂಗೂ ಇದ್ನೆಲ್ಲಾ ಕೇಳ್ತಾ 
ಕೂತಿರೋ ತಮ್ಗೂ ರೌರವಾದಿ ನರ್ಕ ಪ್ರಾಪ್ತವಾಗ್ಬಾರ್ದೂ; ಅಂಬೋದೊಂದೇ ನನ್ನ ಹಾರೈಕೆ! 
ದಯವಿಟ್ಟು ಹೋಗ್ಬನ್ನಿ! 
 
ಸಾವಿತ್ರಮ್ಮ: ಬಾ! ಸೀತೂ! ಬಾ! ಇಲ್ಲೇನೂ ಆಗೊಹಾಗಿಲ್ಲ. ನಾನ್ತಿಳ್ಕೊಂಡಿದ್ದೇ ಈ ಗಂಡ್ಸು 
ಬರೀ ಬಾಯಿ ಮಾತಿನಿಂದ ಇವರ್ಬೆನ್ನೆಲುಬುಗಳ್ನ ಬಗ್ಸಿಧಾನೆ ಅಂತಿಳ್ಕೊಂಡಿದ್ದೆ! ತಪ್ಪು! ಬಗ್ಸಿಲ್ಲಾ... 
ಸುತ್ರಾಮ್ ಮುರ್ದೇ ಹಾಕ್ಬಿಟ್ಟಿದ್ದಾನೆ ಸೊಂಟದ ಸಮೇತ ! ಇಂಥಾ ಬೆನ್ಮುರ್ದ ಗುಂಡ್ಗೆ ಇಲ್ದ ಬೆಪ್ತಕ್ಡಿಗ್ಳೂ 
ಗಂಡಸರು ಬರೆದ ಭಾರತ, ಭಾಗ್ವತಾನ, ಬೆಬ್ಬೆಬ್ಬೇಂತ ತೊದಲ್ತಿರೋವರ್ಗೂ ಗತಿ ಎಲ್ಲಿ ಹೆಂಗಸರ್ಗೆ ! 
ಮುಂದಿನ್ಗತೀ ಎಲ್ಲೀದೂ ಹೆಂಗ್ಸರ್ಗೆ ಪ್ರಪಂಚ್ದಲ್ಲಿ.... 

ಸೀತಮ್ಮ: ಪ್ರಪಂಚ್ದ್ಹೆಂಗಸ್ರು ಹಾಳಾಗ್ಹೋಗ್ಲೀಮ್ಮಾ! ನಮ್ಗತಿ ಹೇಳು ಈಗ ! ಈ ಮೊಂಡುಗಳೋ 
ಹೆಂಗಸ್ತನಾನ್ನೇ ಮರ್ತು ಕೋಣಗಳ್ಹಾಗೆ, ಹೊಟ್ಟೆಗೆ ಕೂಳು ಹುಯ್ಯೋನೇ ಪರಮಾತ್ಮ ಅಂತ 
----------------------------------------------

ಮಲ್ಗಿವೆ! ಇವರ್ನ “ನೀವೂ ನಮ್ಹಾಗೆ ಹೆಂಗಸ್ರು! ಕುರಿ ಮೇಕೆಗಳಲ್ಲಾ! ಚೇತರ್ಸ್ಕೊಳ್ಳಿ” ಅಂಬೋಕೆ 
ನಮ್ಗೆ ಬಿಡ್ವಿಲ್ಲಾಮ್ಮಾ, ಅವ್ರ ಹಣೇಲೂ ಬರೀಲಿಲ್ಲ! (ಮೆಲ್ಲಗೆ) ಅವರ್ಹೇಗಾದ್ರೂ ಹೋಗ್ಲೀ; ಸಧ್ಯ 
ಈ ಗಂಡ್ಸು ಇವರ್ಮನೆ ಭೇತಾಳ್ನ ದುರ್ಬೋದ್ನೇಗೆ ಬೆಚ್ಬಿದ್ದು... ಒಂದ್ವೇಳೆ ಹುಚ್ಚ್ಹಠ ಹಿಡ್ದು....  
ನಮ್ಮನ್ನ... ಪಟ್ಣಕ್ಕೆ...
 
ಸಾವಿತ್ರಮ್ಮ: (ಅಡ್ಡಮಾತಾಗಿ ಮೆಲ್ಲನೆ) ಉಷ್! ಅದೇ ನನ್ಗೂನೂವೇ ಯೋಚ್ನೆ, ಮಾತು... 
ಮನೇಲ್ತಿರ್ಮಾನಿಸ್ಕೊಳ್ಳೋಣ ಬಾ ! 

(ಇಬ್ಬರೂ ತಿಪ್ಪೆ ತೊಟ್ಟಿಯನ್ನು ಹಾಯ್ದು ಬಂದು ತಮ್ಮ ಮನೆಯನ್ನು ಸೇರಿ, ಪ್ರವೇಶಿಸಿ 
ಬಾಗಿಲನ್ನು ಹಾಕಿಕೊಳ್ಳುವರು.) 
(ಪರದೆಯು ಬೀಳುವುದು) 
ರಂಗ - ೩ 

ಆದೇ ರಾತ್ರಿ 
ಸ್ಥಾನ: ರಂಗಣ್ಣನ ಮನೆಯ ಮುಂದಿನ ಭಾಗ 
[ಮನೆಯ ಮುಂದೆ ರಂಗಣ್ಣ.. ಮನೆಯ ಬಾಗಿಲ ಹೊರಗೆ ಕೈಕೈ ಹಿಸುಕುತ್ತ ನಿಂತಿರುವ 
ಸೀತಮ್ಮನೂ ಸಾವಿತ್ರಮ್ಮನೂ ... ಒಬ್ಬರನ್ನೊಬ್ಬರೂ, ಜಗಲಿಯ ಮೇಲೆ ಇಟ್ಟಿರುವ ಟ್ರಂಕು, 
ಹಾಸಿಗೆ, ಕೃಷ್ಣಾಜಿನ ಪೆಟ್ಟಿಗೆ, ತಾಮ್ರದ ಚೊಂಬು, ಕೆಂಪು ಮಡಿ ಸೀರೆ ಇತ್ಯಾದಿಗಳನ್ನೂ 
ಗಮನಿಸುತ್ತ... ಕಣ್ಣು ಕಣ್ಣು ಬಿಡುತ್ತಿರುವರು. ನೇಪಥ್ಯದಲ್ಲಿ ಜಟಕಾ ಗಾಡಿಯನ್ನೂ ಕುದುರೆಯ 
ಪಶ್ಚಾರ್ಧವನ್ನೂ ಬಿಟ್ಟು ರಂಗಸ್ಥಳದಲ್ಲಿ ಅಶ್ವದ ಪರಾರ್ಧವನ್ನು ಕಾಣಿಸಿಕೊಂಡು ಜಟಕಾ ಸಾಬಿಯು 
ವಾಹನದ ಮುಂದೆ ನಿಂತಿರುವನು.] 

ಸಾವಿತ್ರಮ್ಮ: (ಗದ್ಗದ ಸ್ವರದಿಂದ) ಒಪ್ಪಿದ್ವಿ! ಆದ್ರೆ ನಮ್ಗೀಗಿರೋ ಯೋಚ್ನೆ... ಊರ್ಗ್ಹೋಗ್ತೇವಲ್ಲಾ 
ಅಂತಲ್ಲ! ನಾವ್ಹೋದ್ಮೇಲೆ... ನಾವಿಲ್ದೇನೇವೆ.. ನೀವೊಬ್ರೇ ಇದ್ಕೊಂಡು... ಮನೆ ನೋಡ್ಕೊಳ್ಳೋದೂ...  
ಚೊಕ್ಕಟವಾಗಿಟ್ಕೊಳ್ಳೋದೂ... ಅಲ್ದೆ ಉಟಪಾಟಗಳು ನೀವೇ ಮಾಡ್ಕೊಳ್ಳೋದೂ, ಇವೆಲ್ಲಾ ಅಲ್ದೆ 
ಆಫೀಸ್ ಗೀಫೀಸು: ಹೀಗೆ ಮನೆ ಬಿಟ್ಟ್ಹೋದಾಗ ಕಳ್ಳಾರ್ಕಾಟ.. ಇದೆಲ್ಲಾ ಅಲ್ದೆ... ರಾತ್ರಿ ಹೊತ್ತು... 
ಕಗ್ಗತ್ಲೇಲಿ ಒಬ್ರೆ... ಮನೇಲಿ ಹಿತ್ತಲ್‌ಕಡೆ.... ಮೈದಾನೆ... ಮುಸಲ್ಮಾನ್ರ ಗೋರಿಗ್ಳು... ದೆವ್ವ... ಪಿಶಾಚಿ 
... ಜನಗಳು ಹೇಳ್ಕೋತಾರೆ... ಕಂಡ್ಬಂದಿವೆ ಅಂತ... ಅದಕ್ಕೇ ಬಾಡ್ಗೆ ಕಮ್ಮಿ... ನನಗ್ನಂಬ್ಕೆಯಿಲ್ಲ.. 
ಆದ್ರೂ ಅಪಾಯಕ್ಕೆ ಆಸ್ಪದ... ಪ್ರಾಣಭೀತಿ... ನನ್ಮಗ್ಳ ತಾಳಿ ಗಟ್ಯಾಗಿರೋ ಯೋಚ್ನೆ ಮೇಲೆ... 
ಪೇಚಾಡ್ತಿದ್ದೇನೆ. ಒಟ್ನಲ್ಲಿ ಒಬ್ರೇ ಒಬ್ರು ನೀವು... ಒಂದೇಮನೆ... ನಾವಿಬ್ರು ಇಹದಲ್ಲಿ ಇದ್ರೂನೂವೆ... 
ನಮ್ಮನ್ನ ಸಾಗ್ಸಿ ನೀವು ಒಬ್ಬೊಂಟಿಗ್ರಾಗಿ ಹ್ಯಾಗೆ...? 

ರಂಗಣ್ಯ: (ಅಡ್ಡಮಾತಾಗಿ, ಬಿರುಸಾಗಿ) ಹ್ಯಾಗ್ಬದಕಿರ್ತೇನೆ ಅಂತೀರ ನೀವು? ಅದನ್ನ ಕ್ಲಿಪ್ತ 
ಪಡಿಸ್ಕೋಬೇಕೂಂಬೋದೇ... ನನ್ಹಟ, ತಿಂಗಳ್ಗೆ ಎಪ್ಪತ್ತೈದು ರೂಪಾಯಿ ಸಂಪಾದ್ಸೋ ಗಂಡ್ಸು 
ಹೆಂಡ್ತಿ ಅತ್ತೇವ್ರ ಜೀವ್ನಕ್ಕೆ ಇಪ್ಪತ್ತೈದು ರೂಪಾಯಿ ಜಾತ ಬಾಕಿ ಐವತ್ತು ರೂಪಾಯಿಲಿ ಬದುಕಿರೋಕೆ 
---------------------------------
ಆಗುತ್ತ್ಯೇ... ಇಲ್ವೆ?... ಅಲ್ದೆ ಇದುವರೆಗೂ ಕಾಣಿಸ್ಕೊಳ್ದೇನೂ ಕಾಡ್ದೇನೂ, ಇಬ್ಬರ ಹೆಂಗಸರ್ಗೆ 
ಹೆದರ್ಕಕೊಂಡು ತೆಪ್ಪ್ನಿದ್ದ ದೆವ್ವಗಳೆಲ್ಲ ಈಗ ಒಬ್ಬ ಗಂಡಸ್ನ ಏನ್ಮಾಡ್ಯಾವು ಅಂಬೋದ್ನ ನಿಷ್ಕರ್ಷಿಸೋದೇ 
ನನ್ಹಟ ! ಚರ್ಚೆಯಿಂದೇನೂ ಫಲವಿಲ್ಲ. ಜಟ್ಕ ಕಾದಿದೆ... ರೈಲ್ಗೆ ಅರ್ಧ ಘಂಟೆ, ಅಕ್ಪಕ್ದೋರು 
ಗಮನಿಸ್ತಿದಾರೆ. ಗಲಾಟೆಯಿಲ್ದೆ ಹೋಗ್ಬನ್ನಿ... ಬನ್ನಿ ಏನೂ? (ಎನ್ನುತ್ತಾ ಸಾಬಿಗೆ) ಅಜೀ, ಓ 
ಸಾಮಾನೊಂ ಜಟ್ಕಾಮೆ ರಖೋ, ಬುಡ್ಡಮ್ಮ ಉನ್ಯಾಸಾಮಾನೋಂ ಉನೋಚ್ ರಖ್ಲೇತಿಂ. 

[ಜಟ್ಟಾ ಸಾಬಿಯು ಟ್ರಂಕನ್ನೂ ಹಾಸಿಗೆಯನ್ನೂ ಎತ್ತಿಕೊಂಡು ಹೋಗುವನು.] 

ಸೀತಮ್ಮ: ವಿಪ್ರೀತಕ್ಬಂತಲ್ಲಮ್ಮಾ! ಕ್ರಿಮಿನಾಗೆ ಮುದರ್ಕೊಂಡ್ಬಿದ್ದಿದ್ದ ಈ ಪ್ರಾಣಿ ಈಗ 
ಕಾಳಿಂಗನ್ಹಾಗೆ, ಹೆಡೆ ಎತ್ಕೊಂಡು ನಮ್ಮನ್ನ ಹೊರಡಿಸ್ತಿರೋವಾಗ (ಹಲ್ಲುಗಳನ್ನು ಕಟಕಟನೆ 
ಕಡಿಯುತ್ತ ) ಈ ಫಜೀತಿನೆಲ್ಲಾ ತಂದಿಟ್ಟಿದ್ದು ಆ ಪಕ್ಕದ್ಮನೆ ಪಿಶಾಚಿ ಗಂಡ್ಸು... ಈಗೇನ್ಮಾಡೋದಮ್ಮಾ? 

ಸಾವಿತ್ರಮ್ಮ: ಮಾಡೋದೇನು.... ನಿನ್ಗಂಡನ್ನ ಬೆದರ್ಸಿ ಮುದರ್ಸಿದ್ಕಾಲ ಮುಗ್ದ್ಹೋಯ್ತು , ಸಧ್ಯ 
ನನಗ್ತೋಚೋದು ಒಂದೇದಾರಿ, ನಿನ್ಗಂಡನ್ಗೆ ದುರ್ಯೋಧನೆ ಮಾಡಿದ ಆ ಧಾಂಡಿಗನ್ನೇ ಹಿಡಿದು... 
ಕಾಲಿನ್ದ್ವೊದ್ದೋ... ಕಾಲಿಗ್ಬಿದ್ದೋ ... ಹೇಗಾದ್ರು , ಅದರ್ಬಾಯಿಂದ ಇದಕ್ಕೆ ಬೊಗಳ್ಸಿ... 
ಇದರ್ಕೋಪಾನ ಶಾಂತಿ ಮಾಡ್ಸಿ... 

ಸೀತಮ್ಮ: ಹೂಂಮ್ಮ! ನೀನೇ ಹೊಗು ಬೇಗ. 

ಸಾವಿತ್ರಮ್ಮ: ನೋಡಿ... ಹೋಗೋದೇನೊ ಹೋಗ್ತೇವೆ... ಹೋಗ್ಬರೋದು ಹತ್ತು 
ದಿನಾನೋ, ಹದಿನೈದು ದಿನಾನೋ ಆಂದೋಂಡ್ವಿ. ಆದ್ರೆ ತಿಂಗಳ್‌ ತಿಂಗಳಿಗೂ ದುಡ್ಡಿನ್ರವಾನೆ 
ಮಾತು ನೀವು ಮುಷ್ಕರವಾಗಿ ಹೇಳ್ಬಿಟ್ಟ್ಮೇಲೆ ನಾವಿಬ್ರೂ ತಿರುಗ್ಟರೋದು... ತಕ್ಕಷ್ಟೂ ತಡವಾಗತ್ತೇ 
ಆಂಬೋದ್ನ ತೀರ್ಮಾನಿಸ್ಕೊಂಡ್ವಿ... ಪಾರ್ವತಮ್ನೋರು ಲಕ್ಷ್ಮಿದೇವಮ್ನೋರು ಇಬ್ಬರ್ಗೂ ಹೇಳ್ಕೊಂಡು 
ಅವರ ಕುಟುಂಬ್ದಿಂದ ನಮಗೆ ಆಗ್ಬಂದ ಉಪಕಾರಾನ್ನೆಲ್ಲಾ ಒಪ್ಕೊಂಡು... ಹೋಗ್ಬರ್ತೇವೆ ಅಂತ 
ಹೇಳ್ಕೊಂಡು ಬರ್ತ್ತೇವೆ. ಹೇಗಿದ್ರೂವೆ ನೆರೆಹೊರೆ ನೆರೆಹೊರ್ಕೇನೇವೆಯ ! (ಸೀತಮ್ಮನಿಗೆ) ಬಾರೆ 
ಜೊತೆಲಿ! 

[ಇಬ್ಬರು ಹೆಂಗಸ್ರೂ ಸುಬ್ಬಣ್ಣನ ಮನೆ ಬಾಗಿಲಿಗೆ ಬಂದು ಸಾವಿತ್ರಮ್ಮನು ಬಾಗಿಲನ್ನು ತಟ್ಟಲು 
ಕೈಯ್ಯನ್ನೆತ್ತುವಳು] 

ಸುಬ್ಬಣ್ಣ: (ಇದುವರೂ ಪಕ್ಕದ ಮನೆಯಲ್ಲಿ ಜರುಗುತ್ತಿದ್ದುದನ್ನೆಲ್ಲಾ ಹೊಂಚು ಕೇಳಿ ನೋಡಿ... 
ಈಗ ಜಗಲಿಯ ಕತ್ತಲೆ ಕವಿದ ತಾನು ಅಡುಗಿಕೊಂಡಿದ್ದ ಮೂಲೆಯನ್ನು ಬಿಟ್ಟು ಮುಂದಕ್ಕೆ ಬಂದು) 
ಕ್ಷಮ್ಸ್ರೀಮ್ಮಾ ... ಯಾರ್ಬೇಕು ?... ಏನ್ಬೇಕು ?..... ಇಷ್ಟ್ಹೊತ್ನಲ್ಲಿ! 

ಸಾವಿತ್ರಮ್ಮ: (ಹಯ್ಯೋ ಇಲ್ಲೇ ಇಧೀರಾ! ಇಷ್ಟ್ಹೊತ್ತೂ ಇಲ್ಲೇ ಇದ್ರಾ... ನೀವು ನೆನ್ನೆ 
ರಾತ್ರಿ ನಮ್ಮಳಿಯಂದಿರಿಗೆ ಮಾಡಿದ ಉಪದೇಶದ ಫಲಾನಾ ಅನುಭವಿಸ್ತಿದ್ದ್ರಾ_....! ನೋಡಿ; 
ನಮ್ಮನೇವ್ರೋ ಸಾಧು ಪ್ರಾಣಿ, ನೀವೋ ಘಾಟಿ, ಆದ್ರೆ ಒಂದ್ಮರೀಬೇಡಿ. ನಿಮ್ಮಾಕೆ ನಿಮ್ಮತ್ತೆ ಇಬ್ರೂವೆ 
ಬೆಪ್ತಕ್ಡಿಗಳಾಗಿರೋ ಹೊತ್ಗೆ... ಅವರ ಬೆನ್ನುಲುಬುಗಳ ಮುರಿದು ನೀವು ಆಡಿಸ್ದ್ಹಾಗೆಲ್ಲಾ ಆಡೋ 
ಅವರಂಥ ಹೆಂಗಸ್ರಲ್ಲಾ ನಾವು;... ಒಂದೊಂದ್ಸಂಸಾರಕ್ಕೆ ಒಂದೊಂದು ದಾರಿ, ನೀವು ಹೇಳ್ದ್ಹಾಗೆಲ್ಲಾ  
-------------------------------------------------------------------

ನಿಮ್ಮನೆ ಹೆಂಗಸ್ಸು ಕೇಳ್ತಾರೋ... ಇಲ್ಲಿ ನಾವು ಹೇಳ್ದ್ಹಾಗೆ ನಮ್ಗಂಡಸ್ರು ಕೇಳ್ತಾರೊ... ಹೀಗೋ 
ಹಾಗೊ... ಹೇಗಾದ್ರೂವೆ ಒಟ್ನಲ್ಲಿ ಸಂಸಾರಗ್ಳು ಅವವುಗ್ಳ ಅಂತರಂಗ ರಹಸ್ಯ ರೀತಿ ಮೇಲೆ 
ಸಾಗೋದು ಮುಖ್ಯವೇ ಹೊರ್ತು... “ನಮ್ಮನೆ ದಾರಿ ನಿಮ್ಮನೆ ಹಿಡೀಬೇಕೂ!... ನಿಮ್ಮನೆ ದಾರಿ 
ಊರೆಲ್ಲಾ ಹಿಡಿಬೇಕೂ!” ಅಂತ ತಿಳ್‌ಕೊಂಡಿರೋದಾಗ್ಲಿ... ತಿಳಿಸೋದಾಗ್ಲಿ, ವಾದ್ಸಿ ಸಾಧಿಸೋದಾಗ್ಲಿ... 
ಹುಚ್ಚು ಅಂದ್ರೆ! ... ಶುದ್ಧ ಹುಚ್ಚು! ಹಾಗಿದ್ರೂವೆ, ಗೃಹಸ್ಥರು ನೀವು, ಸಂಸಾರ ಸಂಪತ್ತ್ನ 
ಅನುಭವಿಸೋವ್ರು. ಮನೆಗಳ ಕುದುರ್ಸೋದು ಕಷ್ಟ! ಕಷ್ಟವಾದ್ರೂ ಪುಣ್ಯ! ಧರ್ಮ! ನೋಡಿ, ನೀವೋ 
ಒಬ್ಬಂಟಿಗ್ರೇ ಆದ್ರೂ ಬದುಕ್ಕೊಳ್ಳೋಕೆ ಶಕ್ತಿಯಿಧೆ, ಚೈತನ್ಯವಿಧೆ! ಆದ್ರೆ ಆ ಪ್ರಾಣಿ ಹಾಗಲ್ಲ; ಶುದ್ಧ 
ಮಂಕೂ... ಅಲ್ಲ ಸಾಧು ಪ್ರಾಣಿ! ತಪ್ಪು ಅಂಬೋದು ಸರ್ವರಲ್ಲೂ ಇದೆ, ತಪ್ಪಿಲ್ಲದ್ಪ್ರಾಣಿ 
ಪರಮಾತ್ಮ ಒಬ್ನೆ. ನಮ್ಮಗ್ಳಲ್ಲಿ ತಪ್ಪು ಇರೋ ಹೊರ್ಗೇನೇನೇ ಭೂಮಿಲ್ಹುಟ್ಟಿದ್ನಾವು. 
ನಿಮ್ಮಲ್ಲೂ ತಪ್ಪಿದೆ, ಆತ್ನಲ್ಲೂ ತಪ್ಪಿದೆ... ತಪ್ತಿರೋದು ಆಶ್ಚರ್ಯವಲ್ಲ... ಆದ್ರೆ ಇರೋ ತಪ್ನ 
ಒಬ್ಬರಿಗೊಬ್ರು ಒಪ್ಪೋಂಡು... ಒಟ್ನಲ್ಲಿ ಒಬ್ಬರಿಗೊಬ್ರು ಅನ್ನೋನ್ಯವಾಗಿ ಸಂಸಾರ ಜರುಗ್ಸೋಕೆ 
ದಾರೀನ ನೀವು ಆತನಿಗೇ ಈ ಕ್ಷಣ ಹೇಳ್ಕೊಡೋದು ನಿಮ್ಜಾಣತನದ ಚಿನ್ಹೆ... ನಿಮ್ಮ 
ನೆರೆಹೊರ್ಕೆ ಧರ್ಮವೇ ಹೊರ್ತು ನೀವ್ಮಟ್ಗೂ ನಿಮ್ಮ ಕುಟುಂಬಾನ ಕೈಲ್ಹಾಕ್ಕೊಂಡು ಸುಖಪಡ್ತಾ... 
ನೆರೆ ಸಂಸಾರಾನ್ನ ಗಂಡ ಒಂದ್ಕಡೆ ಹೆಂಡ್ತಿ... ಒಂದ್ಕಡೆ... ಹೀಗ್ಮಾಡೋದು ನೆರೆಹೊರೆ ಧರ್ಮ್ವೆ ? 
ಬೇಗ ನಿಶ್ಚಯ್ಸಿ. 
 
ಸುಬ್ಬಣ್ಣ (ಮನೆ ಮೆಟ್ಲನ್ನಿಳಿದು... ಮುನಿಸಿಪಲ್ ತೊಟ್ಟಿಯನ್ನು ಹಾಸುತ್ತ) ಅರ್ಥವಾಯಿತು. 
ಹೀಗ್ಬನ್ನಿ ತಾಯೀ... ನೀವೂ ಬನ್ನೀಮ್ಮ,
 
ರಂಗಣ್ಣ: ಇದೇನ್ಬಂತ್ರೀ? ಈಗ? 

ಸುಬ್ಬಣ್ಣ: (ಮೆಲ್ಲಗೆ) ತೆಪ್ಪ್ನಿರ್ರೀ... ನಾನ್ಹೇಳಿದ್ದಾರೀಗೇ ಬರ್ತಿದಾರೆ ಇಬ್ರೂವೆ; ಸುಮ್ನಿರ್ರೀ 
ನೀವು... ಸರಿಮಾಡೇನೆ ಎಲ್ಲಾನು. (ಘಟ್ಟಿಯಾಗಿ) ಬನ್ನ್ರೀಮ್ಮ!... ಈಗ್ನೋಡಿ! ನಿಮ್ಸಂಸಾರ ನಿಮ್ಮ 
ನಿಮ್ಮದೆ ಆದ್ರೂನೂವೆ... ಪಕ್ಕದ್ಮನೇಲೇ ಇದ್ಕೊಂಡು ನಿಮ್ನಿಮ್ಮಲ್ಲಿ ಅನ್ಯೋನ್ಯತೆಗೆ ಒದಗಿದ 
ಅಡಚಣೆಗಳ್ನ ನೋಡಿ ನೋಡಿ ನಮ್ಮ ಮೇಲೆ ನಾನು ಅನುಭವ್ಸೋ ಸುಖಾನ್ನೂ... ನನ್ನ ನೆರೆಯಾತ 
ತನ್ಮನೇಲಿ ಅನುಭವ್ಸೋ ತಾಪಾನ್ನೂ ಹೋಲ್ಸಿ ... ದುಃಖ ತುಂಬೀ ತುಂಬೀ ತುಳುಕೀ ತುಳುಕೀ... 
ತಡಿಲಾರ್ದೆ... ಉಕ್ಕಿ ಒಂದು... ಈತನಿಗೆ ನೆನ್ನೆ ರಾತ್ರಿ ನಾನು ಹೇಳಿದ್ದೆಲ್ಲಾ ಉಪಕಾರನೊ ಇಲ್ಲ 
ಅಪಕಾರನೋ ಆಂಬೋದ್ನ... ಮೇಲುರೀತಿರೊ... ಈಗುರಿದಿದ್ರೂವೆ ನಾಳೆ ಬೆಳೆಕ್ಹರೀತ್ಲೂವೆ 
ಉರಿಯೋ... ಸೂರ್ಯನಾರಾಯಣನ್ಗೇ ಬೆಳಕು. ಆದ್ರೆ ತಾಯಿ, ತಾವೇ ಒಪ್ಕೊಂಡ್ರಿ ... ಇಹಲೋಕ್ದಲ್ಲಿ 
ಕರ್ಮ ಋಣಾನ ತೀರ್ಸೋಕೇ ಹುಟ್ಟಿರೋ ನಮ್ಮೆಲ್ಲರಲ್ಲಿಯೂ ತಪ್ಪಿದೆ ಅಂತ, ತಾವೇ ಹೇಳಿದ 
ಅಸ್ತಿಭಾರದ್ಮೇಲೇನೇವೆ ಈಗ ನಾನ್ಹೇಳ್ತೇನೆ:... ಮನೆಗೆ ಧನ ಧಾನ್ಯ ಶಾಕಾದಿಗಳು ತಂದ್ಹಾಕಿ ಮನೆ 
ಬಾಡ್ಗೇನೂ ಒದಗ್ಸೋಕೆ ಬೇಕಾದ ದ್ರವ್ಯಾನ ಸಂಪಾದ್ಸೋಕೆ... ದಿನವೆಲ್ಲಾ ದನದ ಹಾಗೆ ದುಡ್ದು 
ದಣ್ದು ಮನೆಗೆ ಬಂದ ಪತೀಗೆ ಊಟ ಉಪಚಾರ... ಉಪಚಾರವೇನು ಮಹಾ... ಬರುತ್ಲು ಕೈ 
ಕಾಲ್ತೊಳೆಯೋಕೆ ಒಂದ್ಕೊಡ ನೀರು... ಸಂಧ್ಯಾವಂದ್ನೇಗೆ ಪಂಚಪಾತ್ರೆ ಉದ್ದರಣೆ... ತರ್ಪಣಕ್ಕೆ ತಟ್ಟೆ; 
ಆಗುತ್ಲೂನೂವೆ ಎಲೆಹಾಕಿ ಬಿಸಿ ಬಿಸಿ ಅನ್ನ... ಸಾರು, ಮಜ್ಗೆ, ಚೈತನ್ಯದ ಪ್ರಕಾರ ಹುಳಿ, ಪಲ್ಯ, 
ಚಟ್ನಿ, ಇತ್ಯಾದಿ... ಒಟ್ನಲ್ಲಿ ಕ್ಷುದ್ಬಾಧೆ ಪತಿ ದೇವತೇಗೆ ತೀರ್ಸಿ ತಾಂಬೂಲ ಕೊಟ್ಟು... ನೆರೆಹೊರೆವ್ರು  
-------------------------------------------------------------------

ತನ್ನಂಜ್ಲೆಲೇನ ತಿಪ್ಪೆ ತೊಟ್ಟೇಲಿ ಎಸ್ಯೋದ್ನ ನೋಡಿ ಹಂಗ್ಸೋ ಅಪಮಾನ ಒದಗ್ದ ಹಾಗೆ 
ನೋಡ್ಕೊಳ್ಳೋದೇ ನಾಳೆಯಿಂದ ನಿಮ್ಧರ್ಮ ಅಂತ... ಸೀತಮ್ನೋರೆ ತಾವೇ ಒಪ್ಪೋಂಡು 
ತಂಪತಿಗೂ ತಂಮಾತೇಗೂ ನಮಸ್ಕಾರಮಾಡಿ ಅವರಿಬ್ರ ಆಶೀರ್ವಾದಾನ್ನ ಪಡರೂ ಪಕ್ಷಕ್ಕೆ... 
ಸಾಮಾನುಗಳ್ನ ಜಟ್ಕಾದಿಂದತೆಗ್ಸಿ ಒಳಗ್ಹಾಕ್ಸಿ ಜಟ್ಕಾನ ಖಾಲಿ ಹೊರ್ಡ್ಸೋ ಜವಾಬ್ದಾರೀನ ನಾನ್ವಹಿಸಸ್ತೇನೆ... 
ಇನ್ನಿದಕ್ಕಿಂತ ನನ್ನ ನೆರೆಹೊರ್ಕೆ ಧರ್ಮಾನ ಹ್ಯಾಗೆ... ವರ್ತಿಸೋದು. (ರಂಗಣ್ಣನ ಬಾಹುವನ್ನು 
ಹಿಸುಕುತ್ತ, ಗುಸುಗುಟ್ಟಿ) ಈಗ್ನೋಡೀ... ಎಲ್ಲಾ ಸರಿಹೋಗುತ್ತೆ... (ರಂಗಣ್ಣನನ್ನು ಸೆಳೆದುಕೊಂಡು 
ಜಟ್ಕ ಕುದುರೆಯನ್ನು ಸಮೀಪಿಸುವನು.) 

ಸೀತಮ್ಮ: ಇದೇನಮ್ಮಾ ನಡ್ರಸ್ತೇಲಿ ನಮಸ್ಕಾರ ಮಾಡೂಂತ ಹುಕುಂ ಕೊಡುತ್ತೆ ಈ 
ಹಾಳ್ಪಿಶಾಚಿ...! 

ಸಾವಿತ್ರಮ್ಮ: ಹಾಗ್ಬಂದ್ಬಿಟ್ಟಿದಿಯೇ ಈಗ! ಹಾಗ್ಬಂದ್ಬಿಟ್ಟಿದ್ಯೇ! ಈಗ್ಗಾನ ಹೇಸ್ಗೆಪಟ್ಟು ಹಿಂಜರಿದ್ಯೋ... 
ಹಾನಿ ನಮಗೆ... ಸರ್ವನಾಶ! ಆ ಪಿಶಾಚಿ ಮೇಲೆ ನಾವು ನಮ್ಸೇಡು ತೀರ್ಸ್ಕೊಳೋಕೆ ..ಅವಕಾಶಾನ 
ಪರಮಾತ್ಮ ನಾಳೆನೋ ನಾಳಿದ್ದೋ... ಈ ಹೊತ್ತಿಲ್ದಿದ್ದ್ರೂನೂವೆ ಯಾವ್ಹೊತ್ತಾದ್ರೂ ಒದಗಿಸ್ಯೇ 
ಒದಗಿಸ್ತಾನೆ! ಸಧ್ಯ ನನಗೊಂದು ನಮಸ್ಕಾರ ಮಾಡಿ.... ನಾಚ್ಗೇನ್ನೀಗಿ ನಿನ್ನ ಗಂಡನಿಗೆ... “ಇನ್ಮೇಲೆ 
ಸರಿಯಾಗಿರ್ತೇವೆ” ಅಂತ ಬೊಗಳ್ಬಿಟ್ಟ್ಬಾ... ಬೇಗ. 
 
(ಸೀತಮ್ಮನು ಮಾತೆಗೆ ನಮಸ್ಕರಿಸಿ... ಪತಿಯನ್ನು ಸಮೀಪಿಸಿ “ಇನ್ನೆಲೆ ಸರಿಯಾಗಿರ್ತೇವೇ?” 
ಎಂದು ಹೇಳಿ ನಮಸ್ಕರಿಸಿ ಮಾತೆಯನ್ನು ತಿರುಗಿ ಬಂದು ಸೇರುವಳು.] 

ಸುಬ್ಬಣ್ಣ: ಇನ್ನೇನ್ಬೇಕ್ರೀ ನಿಮಗೆ... ಅಜೀ ಸಾಮಾನೊಂ ಫಿರ್ ಅಂದರ್ ರಖೊ. 
 
ಜಾಫರ್: ಕ್ಯಾ ಸಾಮಿ... ಸಾಮೀಕೆ ಬಾತ್ಮೆ ಆಜಾಕೆ... ದುಸ್ರ ಬಾಢಾಭಿ ಗವಾಲಿಯಾ ! 
(ಟ್ರಂಕು ಹಾಸಿಗೆಯನ್ನು ಜಗಲಿಯಮೇಲೆ ಕುಕ್ಕಿ) ಅಬ್ ಕ್ಯಾ ಖಾಲಿ ಗಾಡಿ, ಖಾಲಿ ಹಾತ್ ಹಮಾರ 
ದಳಾಲ್ಕೊ ದಿಖಾಯೇತೋ ಜೂತಿಕಾ ಮಾರ್ ಸಾಮಿ!... ಮೇರ ಹಾಲ್ ಕ್ಯಾ ಸಮಜ್ತೀಂ?... 
ಇನ್ಸಾಫ್ಸೆ ಸೋಚೋ ಸಾಮಿ! ಜನಿವಾರ್ ಕು ದೇಖ್ತೀಂ...? ಜಾನ್‌ವಾರ್‌ಕು ದೇಖೋ ಸಾಮೀ... 
ಮೂಗು ಜೀವ ಇದ್ದಾದೆ ಸಾಮೀ ...! ನಾಕ್ಕೆ ಚಾನ್ ವಾರ್...! 

ಸುಬ್ಬಣ್ಣ: ಎ ದೊ ಆನೆ ಲೇವ್ (ಜಗಲಿಯಲ್ಲಿರುವ ನೋಟುಗಳ ಮೇಲೆ ಇರುವ 
ಎರಡಾಣೆಯನ್ನು ಎತ್ತಿ ಜಾಫರಿಗೆ ಕೊಡುತ್ತಾ) ಬಸ್ ಜೀ!... ಲೇಕೊಜಾವ್ಜೀ... ನಸ್ದೀಕ್ ಹೈಜೆ... 
ಪೊಲೀಸ್ ಸ್ಟೇಷನ್... ತಂಟ ಕರೋನಕ್ಕೋ. 
 
[ಜಾಫರು ಕುದುರೆಯನ್ನು ಹಿಂದೆ ತಳ್ಳುತ್ತ “ಸಿರ್ ಪೆ ಪಹಾಡ್ ಫ್ಲಿಸರ್ ತೇಹೀ ಸಯ್ಯಾತೊ 
ಕ್ಯಾಕರೀಜ್ಞ! ಬೊಮ್ಮನೋಂಕೆ ಹಾಲ್ ಐಸೀ ರಹೇತೋ ಫ್ಹಿರ್ಯಾದ್‌ ಕಹಾಂಕರೀಜ್ಞಾ!!” ಎಂದು 
ಗಟ್ಟಿಯಾಗಿ ಗೊಣಗುಟ್ಟುತ್ತಾ... ನಿಷ್ಟ್ರಮಿಸುವನು.] 

ಸುಬ್ಬಣ್ಣ: ಒಳಕ್ಕ್ಹೋರ್ಡಿ ಸಾರ್. ಬನ್ನಿಮ್ಮ ಒಳಗೆ ! 
(ಟ್ರಂಕನ್ನೂ ಹಾಸಿಗೆಯನ್ನೂ ಎತ್ತಿಕೊಂಡು ಒಳಗೆ ಹೆಂಗಸರ ಹಿಂದೆ ಹೊರಡಲು 
ಉಪಕ್ರಮಿಸುವನು.)
----------------------------------


ಪಾರ್ವತಮ್ಮ : (ಥಟ್ಟನೆ ಪ್ರವೇಶಿಸಿ) ಇದೇನ್ಹುಚ್ಚು, ಬೆಳಗ್ಗಿನ ಮುಸುರೆ ಹಾಗೆಯೇ ಬಿದ್ದಿದೆ 
ಹಿತ್ತ್ಲಲ್ಲಿ ಅದ್ನೂ ತೊಳೀದೆ ನಿಮ್ಹೊಟ್ಟೆಪಾಡ್ನೂ ನೋಡ್ಕೊಳ್ದೆ... ಊರ್ಗೆಲ್ಲಾ ಕೂಲಿಕೆಲ್ಸ ಮಾಡೋದು.. 
ಇಷ್ಟ್ಹೊತ್ನಲ್ಲಿ... ಇದೇನ್ಹುಚ್ಚು ಅಂದ್ರೆ? 

ಸುಬ್ಬಣ್ಣ: (ಕಣ್ಣು ಕಣ್ಣು ಬಿಡುತ್ತಾ) ಅಲ್ಲ... ಉಪಕಾರ... ನೆರೆಹೊರ್ಕೆ.... 

ಪಾರ್ವತಮ್ಮ: ಒಳ್ಳೆ ಉಪ್ಕಾರ ಅಂದ್ರೆ! ನೆಗದ್ಬಿತ್ತು ನಿಮ್ಹಾಳು 'ನೆರೆಹೊರ್ಕೆ' ಈವತ್ತ್ರಾತ್ರಿ ನಿಮ್ಮ 
ಹಸಿವು ತೀರಬೇಕೂ ಅಂದ್ರೆ ನೀವು ಅಡಿಗೆ ಮಾಡ್ಕೊಂಡ್ರೇನೇವೇಯೇ, ಮುಸ್ರೆ ತೋಳದ್ಪಾತ್ರೇಲಿ. 
ಅಮ್ಮನ್ಫಲಾರಾನೇ ನನ್ಗೂ ಆಗ್ಹೋಯ್ತು. ಆ ಹಾಳು ಸಾಮಾನುಗಳ್ನ ಚರಂಡೀಲಿ ಎಸ್ದು... ಬಂದು 
ಸೇರ್ತೀರಾ... ಇಲ್ಲ.... ಬಾಕಲು ಹಾಕ್ಕೊಂಡು ಮಲಕ್ಕೋಳ್ಳೋದೋ ನಾವು... ನಿಮ್ಮನ್ನ ಜಗ್ಲೀ  
ಪಾಲ್ಮಾಡಿ ? 

ಲಕ್ಷ್ಮೀದೇವಮ್ಮ: (ಥಟ್ಟನೆ ಪಾರ್ವತಮ್ಮನ ಪಕ್ಕಕ್ಕೆ ಬಂದು) ಜಗಲೀಪಾಲು? ಚೆನ್ನಾಯ್ತು! 
ಅಲ್ಕಾಣೆ, ಮನೇಲಿ ಗೋಮ ಹಚ್ಚೋಕೆ ಒಂದು ಗುಲಗಂಜಿ ಆಷ್ಟು ಗೋಮಯ ಇಲ್ಲ.... (ಕೈಯಲ್ಲಿನ 
ಮಕ್ಕರಿಯನ್ನು ಮಗಳ ಕೈಗೆ ಕೊಟ್ಟು) ಈ ಮಕ್ರಿ ತುಂಬ ಸಗಣಿ ತಂದು ಮನೆಯಲ್ಲಾ 
ಸಾರ್ಸಿದ್ಮೇಲೇನೆಯೇ ಊಟಕ್ಕೆ ಒಲೆ ಹಚ್ಕೊಳ್ಳೋದು ನೀನು; ಇಲ್ದಿದ್ರೂ ಬಾಕ್ಲು ತೆಗೆಯುವ 
ಹಾಗಿಲ್ಲಾ"ಂತ ಹೇಳು ನಿನ್ಗಂಡನಿಗೆ. 
 
ಸುಬ್ಬಣ್ಣ (ಟ್ರಂಕು ಹಾಸಿಗೆಯನ್ನು ಜಗಲಿಯ ಮೇಲೆ ಜೋಪಾನವಾಗಿ ಇಳಿಸಿ, ಗದಗಸ್ವರದಿಂದ) 
ಅಲ್ಕಾಣೆ...

ಪಾರ್ವತಮ್ಮ: ಅಲ್ಕಾಣೋದಿರ್ಲಿ... ಇಲ್ಕೊಳ್ಳಿ! (ಮಕ್ಕರಿಯನ್ನು ಪತಿಯ ಕೈಯಲ್ಲಿಟ್ಟು) 
ಅಮ್ಮ್ಹೇಳಿದ್ಹಾಗೆ ಬುಟ್ಟೀನ್ಭರ್ತಿ ಮಾಡ್ಕೊಂಡ್ಬನ್ನೀ! ಇನ್ಮುಂದಿನ್ ಚರ್ಚೆ... ಇಲ್ಲಲ್ಲಾ!... ಮನೇಲಿ! 

ಸುಬ್ಬಣ್ಣ: ಅಲ್ಕಾಣೆ ಇಷ್ಟ್ಹೊತ್ನಲ್ಲಿ ಈ ಕುಕ್ಕೆ ತುಂಬ ... ಸಗಣಿನ ಎಲ್ಲಿಂದ್ಲೆ ತರೋದು ನಾನು? 

ಲಕ್ಷ್ಮೀದೇವಮ್ಮ: ಏನೋ! ದೇವರದಯ ! ಗುಡಿಯಿಂದ ದರರ್ಶ್ನ ಮಾಡ್ಕೊಂಡು ಬರೋವಾಗ ...  
ಬಳ್ಳಪ್ಪನ ಛತ್ರದ ಮುಂದೆ... ಒಂದಲ್ಲ ಎರಡಲ್ಲ, ಎಂಟು ಎತ್ತಿನ ಗಾಡಿಗಳು ಬಂದಿಳಿದ್ದಿದ್ವು. 
ಕೃಷ್ಣ ಪಕ್ಷ, ಕತ್ಲೆ, ಯಾರೂ ಕಾಣೋ ಹಾಗಿಲ್ಲಾ... ಬಾರೆ ! ಒಳಗೋಗೋಣ... 

[ಪಾರ್ವತಮ್ಮನೂ ಲಕ್ಷ್ಮಿದೇವಮ್ಮನೂ ನಿಷ್ಟ್ರಮಣ]

 [ಈ ಕಲಹವನ್ನು ನೋಡಿ ಕೇಳಿ ಉಕ್ಕಿಬರುವ ನಗುವನ್ನು ತಡೆಯಲಾರದೆ ಸೀತಮ್ಮನೂ 
 ಸಾವಿತ್ರಮ್ಮನ ಸೆರಗಿನಿಂದ ಮುರುಕಿನಿಂದ ಮುಖವನ್ನು ಮುಚ್ಚಿಕೊಂಡು ಮನೆಯೊಳಕ್ಕೆ 
 ನುಗ್ಗುವರು.] 
 
ರಂಗಣ್ಣ (ಸುಬ್ಬಣ್ಣನನ್ನು ಸಮೀಪಿಸಿ ಮೃದುವಚನಗಳಿಂದ) ಕತ್ಲೆ... ಲಾಂದ್ರ ಕೊಡ್ಲೆ? 

ಸುಬ್ಬಣ್ಣ (ರೇಗಿ) ಕತ್ಲೆ ಭಯ ಏನ್ಬಂತ್ರೀ ! ಬೆಳೆದ ಗಂಡಸ್ಗೆ? 
------------------------------------------------------
 
ರಂಗಣ್ಣ: ಆ ಕುಕ್ಕೆ ಇಲ್ಕೊಡಿ (ಎಂದು ಕುಕ್ಕೆಯನ್ನು ಕಸಿದುಕೊಂಡು ಕೆಳಗೆ ಹಾಕಿ ಕಾಲಿನಿಂದ 
ಜಜ್ಜಿ ಎರಡು ಕೈಗಳಿಂದಲೂ ಕಿತ್ತ ಚೂರುಗಳನ್ನು ಮುನಿಸಿಪಲ್ ತೊಟ್ಟಿಯಲ್ಲಿ ಎಸೆದು) ಯೋಚ್ನೆ 
ಯಾಕ್ರಿ? ನನ್ನ ವ್ಯಾಧಿಗೆ ಔಷಧಿಯಾಗಿ ಈ ಹೊತ್ತು ಒದಗಿದ ಇಪ್ಪತ್ತೈದು ರೂಪಾಯಿ 
ಓಡಿಹೋಗೋದಿಲ್ಲ. ನಾಳೆ ರಾತ್ರಿ ನಿಮ್ಮ ಜಗಲೀಲಿಟ್ಟು ಅದೇ ಜಟ್ಕಾನ್ನ ತರ್ಸಿ... ಅದೇ ನಮಸ್ಕಾರ... 
ಇರ್ಲಿ ಬನ್ನಿ (ಸುಬ್ಬಣ್ಣನನ್ನು ಎಳೆದು ತನ್ನ ಮನೆಯ ಜಗಲಿಯನ್ನು ಹತ್ತಿಸಿ)... ಲೇ !!! 

ಸೀತಮ್ಮ ಸಾವಿತ್ರಮ್ಮ: (ಇಬ್ಬರೂ ಓಡಿ ಬಂದು ಏಕಗ್ರೀವದಿಂದ) ಏನು ? ? !! 

ರಂಗಣ್ಣ : (ಗರ್ಜಿಸುತ್ತ ಒಂದ್ಕೊಡದಲ್ಲಿ ನೀರು, ಚೊಂಬು ! ! [ಹೇಳಿ ಮುಗಿಸುವಷ್ಟರಲ್ಲಿ 
ಸೀತಮ್ಮನು ನೀರು ತುಂಬಿದ ಕೊಡವನ್ನೂ ಸಾವಿತ್ರಮ್ಮನು ಖಾಲಿ ಚೊಂಬನ್ನೂ ಜಗಲಿಯ ಮೇಲೆ 
ತಂದಿಡುವರು.] 

ರಂಗಣ್ಯ: ಮನೇಲಿ ರವೇನೊ, ನುಚ್ಚೋ... ಉಪ್ಪಿಟ್ಟು... ಒಂದು ಚಟ್ನಿ, ಬಳ್ಳಪ್ಪನ ಛತ್ರದಲ್ಲಿ 
ನೆರೆಯಾಕೆ ಹೇಳಿದ್ಹಾಗೆ ಎತ್ತಿನ್ಬಂಡಿಗ್ಳು ಬಂದಿಳಿದಿರೋ ಪಕ್ಷಕ್ಕೆ ಎದುರಂಗ್ಡಿ... ಮುನಿಯಮ್ಮನ ಅಂಗ್ಡಿ 
ಮುಚ್ಚಿರೋದಿಲ್ಲ. ಒಂದ್ಕೌಳಿ  ಎಲೆ, ಅಡಿಕೆ, ಸುಣ್ಣ... ಚಿಲ್ರೆ ಇದೆ ತಾನೆ ನಿಮ್ಮಮ್ನಹತ್ರ? 

ಸಾವಿತ್ರಮ್ಮ : (ವಿನಯದಿಂದ) ಹೂಂ (ರಭಸದಿಂದ ಮೆಟ್ಲಿಳಿದು ನಿಷ್ಕ್ರಮಣ, ಸೀತಮ್ಮನೂ 
ಒಳಕ್ಕೆ ನಿಷ್ಕ್ರಮಣ) 

ರಂಗಣ್ಣ: ನೋಡಿ ಸುಬ್ಬಣ್ಣೋರೆ! ಇಷ್ಟು ಹೊತ್ನಲ್ಲಿ ಸಿಕ್ಕೊ ಎಲೆ ಮೈಸೂರು ಚಿಗರೋ 
ಅಂಬಾಡಿನೊ... ಸುಣ್ಣ.... ಮದ್ದೂರ್ಕಡೆ ನೆಂಟ್ರಿಲ್ಲ... ಇನ್ನು ಆಡಿಕೆ. ನಮ್ಮತ್ತೇಗೆ ತೋಟ ಇಲ್ಲ 
ಮಲ್ನಾಡ್ಕಡೆ!... 

ಸುಬ್ಬಣ್ಣ: (ಪಂಚೆಯನ್ನು ಮೊಣಕಾಲಿನ ಮೇಲೆ ಏರಿಸಿ ಕಟ್ಟಿಕೊಂಡು ಕೊಡದ ನೀರನ್ನು 
ಚೊಂಬಿಗೆ ವರ್ಗಾಯಿಸುತ್ತಾ) 

ಸ್ವಾಮಿ, ಶರಣಾಗತನ್ನ ಕಾಡಿಸ್ಬಾರ್ದು! ಸಿಕ್ಕಿದ್ದ ಪ್ರಾಣೀನ ಸತಾಯ್ಸೋದು ಸಮನಲ್ಲ! 

ರಂಗಣ್ಣ: ಇರ್ಲಿ ಸುಬ್ಬಣ್ಣೋರೆ... ನೆನ್ನೆ ತಕ್ಕಮಟ್ಗೆ ಬಂದೊಬಸ್ತ್‌ನಲ್ಲಿ ಇದ್ದ ನಿಮ್ಸಂಸಾರ ಈ 
ಹೊತ್ತು ಯಾಕೆ ಹೀಗೆ ಪಲ್ಟಿ  ಹಾಕ್ತು? 

ಸುಬಣ್ಣ: (ಸಿಡುಕು ಮುಖದಿಂದ ಏನು ಪಲ್ಟೀರಿ? 

ರಂಗಣ್ಣ: ಪಲ್ಟಿ ಅಲ್ದೆ ಯೇನ್ರಿ! ನೆನ್ನೆ ಇಷ್ಟ್ಹೊತ್ಗೆ ನೀವು ಊಟ ಮಾಡಿದ ನಿಮ್ಮ 
ಎಂಜಲೇಲೇನ ಸಭಕ್ತಿಯಿಂದ ಎತ್ತಿ ತಂದು ಇದೇ ತೊಟ್ಟೀಲಿ ಹಾಕಿದ ನಿ೦ಪತ್ನಿ... ಈ ಹೊತ್ತು ಏಕೆ 
ಹೀಗೆ ತಿರುಗಿ ಕೊಂಡದ್ದು? 

ಸುಬ್ಬಣ್ಣ ಒಳ್ಳೆ ಚಿತ್ರಹಿಂಸೇರಿ ನಿಮ್ದು! ನೆನ್ನೆ ಏನು! ಈ ಹೊತ್ತು ಏನು! ಲಾಗಾಯ್ತಿಂದ 
ಒಂದೇ ಹಣೆ ಬರಹರೀ ನಂದು! ಅವಳು ಹಾಕಿದ ಎಂಜ್ಲೆಲೆ, ಅವಳು ಊಟ ಮಾಡಿದ್ದು ! ನಾನೂಟ 
ಮಾಡಿದ್ದಲ್ಲ! 
-----------------------------------------
 
ರಂಗಣ್ಣ: ಮತ್ತೆ ನೀವು ಊಟಮಾಡಿ... ಕೈ ತೊಳೀತಿದ್ದದ್ದು? 

ಸುಬ್ಬಣ್ಣ: ಕೈತೊಳಿತಿದ್ದದ್ದು ದಿಟ ಕಾಣ್ರಿ! ಆದ್ರೆ ಊಟ ಮಾಡಿ ಅಲ್ಲ ..., ಆ ಹಾಳು ಹೆಂಗ್ಸು 
ಊಟಮಾಡಿದ ಸ್ಥಳಾನ ಗೋಮ ಹಚ್ಚೀ... ಕೈ ತೊಳೀತಿದ್ದದ್ದು ನಾನು! ದಮ್ಮಯ್ಯ ಸಾಕು 
ನಿಂಪ್ರಶ್ನೆಗ್ಳು! ಭೂತದಯೇಂತ ಕೇಳಿದ್ದೀರಾ...? 

ರಂಗಣ್ಯ: ಕ್ಷಮ್ಸಿ!... ಕೈಕಾಲು ತೊಳ್ಕೊಂಡು ಒಳಕ್ಬನ್ನಿ.., ನೀವೇನು ಹೇಳೆದ್ರೂ... ನೆರೆಹೊರ್ಕೆ 
ನೆರೆಹೊರ್ಕೇನೇವೇಯೇ ! 

[ಪರದೆಯು ಮೆಲ್ಲನೆ ಬೀಳುವುದು] 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ