ಮಂಗಳವಾರ, ಆಗಸ್ಟ್ 8, 2023

HOME RULEಉ by T P Kailasam-proof read

 . 

HOME RULEಉ 

ಅಥ್ವಾ 

ಹೊರಗಿನ ಹುಲಿ ಮನೇಲಿಲಿ 

ಮಂಕ್ಮುಚ್ಚೋ ಹೆಣ್ಣು ಮನೆತನಕ್ಮಣ್ಣು 

ಅಥ್ವಾ 

ಪಾರ್ಲಿಮೆಂಟ್ ಕೊಟ್ರೂ ಪತ್ನಿ ಕೊಡಳು 

ಮೈದಾನದ ಹೆಬ್ಬುಲಿ: ಮನೆಯ ಮೂಗಿಲಿ 

"ಸಾಭಾರ್ಯಾಯಾಗೃಹದಕ್ಷಾ” 


ಪಾತ್ರಗಳು 

ರಾಮಣ್ಣ : ರಾಮಪುರದ ಲಾಯ್ರು: ಮುನಿಸಿಪಲ್ ಕೌನ್ಸಿಲರ್: 

Social Reform ಸಂಘದ ಪ್ರೆಸಿಡೆಂಟ್ : ಸನಾತನ ಧರ್ಮ- 

ವರ್ಣಾಶ್ರಮ ಧರ್ಮ, ಪ್ರಜಾಪ್ರತಿನಿಧಿ ಸಭೆಗಳ 

ನಾಮಿನೇಟೆಡ್ ಮೆಂಬರು; ಕಾಂಗ್ರೆಸ್ ಮೆಂಬರು; ಸ್ಕೌಟ್ 

ಕಮೀಷನರು; ದೈತಾದ್ವೈತಿ. 

ವೆಂಕಮ್ಮ : ಈತನ ದ್ವಿತೀಯ ಪತ್ನಿ, 

ಸುಬ್ಬಮ್ಮ : ಈತನ ಮುದಿತಾಯಿ, ವಿತಂತು. 

ಬೋರ : ಜವಾನ. 

ನಾರಾಯಣ : ಅಡಿಗೆಯವನು. 

ಸಾವಿತ್ರಮ್ಮ : ಮತ್ತೊಬ್ಬ ನೆರೆಯ ಮುದಿ ವಿತಂತು. 

ಸ್ನೇಹಿತರುಗಳು 

ಸ್ಥಾನ : ರಾಮಪುರ. ಕಾಲ : ಆಧುನಿಕ. ಭಾಷೆ : ಆಧುನಿಕ ಸಾಮಾಜಿಕ,

------------------------------------------------


ದೃಶ್ಯ ೧ 

ಸ್ಥಾನ: ರಾಮಪುರದ ಒಂದು ಬೀದಿ, 

(ಸುಬ್ಬಮ್ಮನು ಬಲದಿಂದ ಎಡಕ್ಕೆ ಬರುತ್ತ ಎಡದಿಂದ ಬಲಕ್ಕೆ ಬರುವ ಮತ್ತೊಬ್ಬ ವೃದ್ಬಳನ್ನು 

ಸಂಧಿಸುವಳು.] 

ಸುಬ್ಬಮ್ಮ: ಹತ್ತಿರದಲ್ಲೆಲ್ಲಾದ್ರೂ ಆಳ್ವಾದ ಭಾವೀ ಇಧೆಯೇ? 


ಎದುರಾಕೆ: ಆಳ್ವಾದ ಭಾವೀ !.... ಹತ್ತರ ನೀರಿದ್ರಲ್ಲವೇ ಅನುಕೂಲ... ಸೇದೋಕೆ ನೀರ್ನ...? 


ಸುಬ್ಬಮ್ಮ: ಚೆನ್ನಾ... ಆ... ಯ್ತು! ಅಸುರಸಂಧಿ ಕೂಡೋ ವೇಳೇಲೀ ದಿಂಬು ಚೊಂಬು 

ಕೈಲಿಲ್ದೆ ನೀರ್ಸೇದೋಕ್ಹೊರ್ಟೆಂತಿಳ್ಕೊಂಡ್ರಾ? 


ಎದುರಾಕೆ: ಮತ್ತಿನ್ಯಾಕೆ ಹುಡುಕ್ತಿರೋದು ಭಾವೀ ?... ಅಲ್ದೆ... ಆಳ್ವಾದ ಭಾವೀ! 


ಸುಬ್ಬಮ್ಮ: ಒಳಗೆ ಬಿದ್ದೂ ಉ...ಪ್ರಾಣಗಳ್ಬಿಡೋಕೆ... ಪಂಚಪ್ರಾಣಗಳ್ನಾ... ಬಿಟ್ಟೇಬಿಡೋಕೆ. 

ನೀರು ಹತ್ತಿರಗಿತ್ತರಿದ್ರೆ ಮೂರುಸರ್ತಿ ಮುಳುಗಿ ಮುಳುಗಿ ಸಾಯೋಷ್ಟ್ರಲ್ಲೇ ಯಾವ ಪ್ರಾಣಿಯಾದ್ರೂ 

ಹೊರಗೆಳ್ದ್ಹಾಕ್ಯಾನೂಂಬೋ ಭಯಾ ಇರೋದಿಲ್ಲ... ಆಳ್ವಾದ ಭಾವೀಲಿ. 

 

ಎದುರಾಕೆ: ಇದೇನು ಹುಚ್ಚು, ಸುಬ್ಬಮ್ಮನೋರೇ ? ಅಯೋಧ್ಯೆ ಎಲ್ಲಾ ಶ್ರೀರಾಮನ್ನ 

ಹೊಗಳ್ದ್ಹಾಗೆ ರಾಮಪುರಕ್ಕೆಲ್ಲಾ ಅಣ್ಣ ರಾಮಣ್ಣನಾಗಿ ಹೊಗಳಿಸ್ಕೊಳ್ಳೋ ನಿಮ್ಮಗನ ಅಂತಸ್ತ್‌ನ್ನೂ 

ಐಶ್ವರ್ಯಾನೂ ನೋಡ್ತಾ ಆ ಪರಮಾತ್ಮ ನಿಮ್ಕಂಣ್ಣು ಮುಚ್ಚಿವರಿಗೂ ಆನಂದಪಡತಾ 

ಇರೋದ್ಬಿಟ್ಟಿಟ್ಟೂ ಭಾವೀಲ್ಬಿದ್ದು ಸಾಯ್ಬೇಕೂಂತೀರಲ್ಲಾ... ಇದೇನ್ಹುಚ್ಚೂ? 

 

ಸುಬ್ಬಮ್ಮ: ಒಳ್ಳೆ ಅಯೋಧ್ಯೆ! ಒಳ್ಳೆ ರಾಮಚಂದ್ರ !... ಇದೇನು ಸಾವಿತ್ರಮ್ಮನೋರೇ... 

ನಮ್ಮನೆ ಸಂಸಾರದ ಗಲಾಟೆಯ ಸರ್ವಾಂಶಾನೂ ತಿಳ್ದೂನೂ ಇನ್ನಾನೂ ಇಹಲೋಕದಲ್ಲಿ 

ಆನಂದಪಡೋ ಒಂದಂಶಾ ಬೇರೆ ಬಾಕಿ ಇದೆಯೇ ನಮ್ಮನೇಲಿ... ನನ್ನ ಎರಡನೆ ಸೊಸೆ 

ವಕ್ರಿಸ್ಕೊಂಡ್ಕೂತಿರೋವಾಗ? 


ಸಾವಿತ್ರಮ್ಮ : ಹೌದೂ... ಊ? ನಿಮಗೂ ನಿಮ್ಮ ಸೊಸೆಗೂ ಏನಾದರೂ ಅನನ್ಯೋನ್ಯಗಳು 

ಉಂಟಾದ್ರೆ... ಅವಳ್ಗಂಡ... ನಿಮ್ಮಗ... ರಾಮು ನಿಮ್ಮ್ಕಡೇನೇ ಅಲ್ವೇ....?... ತಾಯೇ ಕಡೆ... 

ಹೆತ್ತ ತಾಯಿ ಕಡೇ ? 


ಸುಬ್ಬಮ್ಮು: ದೇವ್ರೇ ಗತಿ! ನಮ್ಮ ರಾಮೂ... ನೀವ್ಹೇಳ್ದ ಈ ಅಭಿನವ ಶ್ರೀರಾಮ... 

ಹೆತ್ತಾಯೀನ್ಬಿಟ್ಟಿದಲ್ದೆ ಅವಳ ಕಡೇ ಸೇರ್ಕೊಂಡೂ ಅವನ್ತಾಯಿ ಮೆದೇಗೇ ಕವೆಗೋಲ್ಹಾಗೆ ಕುತ್ಗೇ 

ಬಿಗೀತಿಧಾನೆ...! 


ಸಾವಿತ್ರಮ್ಮ: ಇನ್ನೇನ್ಗತಿ...? 


ಸುಬ್ಬಮ್ಮ: ಗತಿಯೇನು... ಗೊತ್ತೇ ಇಧೆ. ನಮ್ರಾಮೂ ನನಗೆದುರು ನಿನ್‌ತ್ಮೇಲೆ... ಶ್ರೀರಾಮ 

ಕಪ್ಪೆ ಮೇಲೆಕೈಎತ್ತಿ ಆ ಪ್ರಾಣಿಗಾದ ಗತೀನೇ... ನನ್ಗೂವೆ.

---------------------------------------------


 

ಸಾವಿತ್ರಮ್ಮ: ಶ್ರೀರಾಮ! ಕಪ್ಪೆ ಮೇಲೆ ಕೈಯೆತ್ತಿದ್ನೆ? ಹ್ಯಾಗೆ? ಯಾವಾಗ? 


ಸುಬ್ಬಮ್ಮ: ಯಾವಾಗೇನೂ ಊ?...ತ್ರೇತಾಯುಗ... ದಾಶರಥೀ... ದಂಡಕಾರಣ್ಯ... ದಾಹ. 

ದೂರದಲ್ಲಿ ಕಂಡ ಸರಸ್ಸಿನ ಕಡೆ ಸರಸರಾಂತ ಕಾಲ್ಹಾಕ್ತಾಸೇರಿ, ಬಿಲ್ಲನ್ನ ಬಿಸಾಟು ಹೆಗಲಿಗ್ತಗ್ಲ್ಹಾಂಕ್ಕೊಡಿದ್ದ  ಬತ್ತಳಿಕೇನೂ ಇಳೀಬಿಟ್ಟು, ಕೈಯ್ಯಲಿದ್ಹೋಂದ್ಬಾಣಾನ ಕುಕ್ಕ್ಬಡದ ನೆಲಕ್ಕೆ... ಇನ್ನಿಳ್ದು ಪುಷ್ಕಳವಾಗಿ 

ಪಾನಾಮಾಡಿ ಮೇಲ್ಬಂದು ಸೇರಿ ನೋಡ್ತಾನೆ ಆ ಪತೀತ ಪಾವನಾ... ತನ್ಬಾಯಾರ್ಕೆ ಗಡಿಬಿಡಿಲೀ 

ಬಡದುಕುಕ್ಕ್ದಬಾಣಾ ಒಂದು ಕಪ್ಪೇನ್ನೂ ಭೂದೇವಿನ್ನೂ ಎರ್ಡ್ನೂ ಪೋಣಿಸ್ಕೊಂಡು ನೆಟ್ಕೊಂಡಿಧೆ! 

ಬಂತೂ ರಾಮನಿಗೆ ಜ್ಞಾನ!... ತಾನು ಯಾರು?... ತಾನು ಇಹಲೋಕಕ್ಕಿಳಿದದ್ಯಾಕೆ ? ಇಹಲೋಕ 

ತನ್ನ ಕರಿಸಿಕೊಂಡದ್ಯಾಕೆ ? ... ಆಪದ್ಭಾಂಧವಾಂತ್ಹೊಗಳಿಸ್ಕೊಳ್ಳೋ ತಾನು ತನ್ನ ದಾಹದವಸ್ಥೇಲಿ 

ಬಾಣಾನ ಕುಕ್ಕಿದ ತನ್ನ ಕೊಬ್ಬಿನ ಜೋರಿನಿಂದ ಜೀವಹಿಂಸೆ ಒಂದ್ ಸಾಧುಜಂತೂಗೆ ಸಂಭವಿಸಿ, 

ಜಗತ್ತಿನ ಹಾಸ್ಯಕ್ಕೆ ಗುರಿಯಾದ್ನೆಲ್ಲಾಂಬೋ ತನ್ಕೋಪ್ದಲ್ಲಿ ಆ ಕಪ್ಪೇನ್ನೋಡಿ “ಎಲಾ ಮಂಕೆ !... ನಾನು 

ಬಾಣಾನ ಕುಕ್ಕೋಕೆ ಕೈಯೆತ್ತಿದಾಗ ನನ್ನ ನೋಡೋಕೆ ಕಣ್ಣುಗಳ್ನೂ 'ನಾನಿಲ್ಲಿಧೇನೇ'೦ತ ಅರಚೋಕೆ 

ಬಾಯೂನೂ ನನ್ನ ಮಗ ಬ್ರಂಹ್ಮ ನಿನಗ್ಕೊಟಿರೋವಾಗ, ಹುಚ್ಚುಮುಂಡೇ ಹಾಗೆ ಅವನ್ನೆಲ್ಲಾ ಮರೆತು 

ನನ್ಕೈಯಿಂದ್ಕುಕ್ಕಿಸ್ಕೊಂಡು ನರಳ್ತಿಧೀಯಲ್ಲಾ...! ಈಗ 'ಅಹಿಂಸಾ ಪರಮೋಧರ್ಮಃ'ಂಬೊ 

ವೇದವಾಕ್ಯಾನ, ಕಪ್ಪೆ ರಕ್ತಾನ ಸುರಿಸಿದ್ನಾನೂ... ಹ್ಯಾಗೆ ಪ್ರಚುರ ಪಡಿಸೋದ್ಪ್ರಪಂಚಕ್ಕೇ'ಂದ. ಅವನ 

ಪ್ರಶ್ನೆ ಅದಕ್ಕಿಲ್ಲದ್ವಿವೀಗ್ಬಿದ್ದು... ಬಂತೂ ಒಂದ್ಕಡೇ ಕೋಪ; ಹುಚ್ಚುಮುಂಡೇ ಅಂದ್ನಲ್ಲಾಂತ! 

ಇನ್ನೊಂದ್ಕಡೆ ಬೆನ್ನಿಂದ್ಹೊಕ್ಕು ಎದೆಯಿಂದ್ಹೊರ್ಟಿರೋ ಬಾಣದಿಂದಾದ ತಾಪ! ತನಗಿಲ್ಲದ್ಹಂತಾವಳೀನ 

ಕಟಕಟ್ನೆ ಕಡೀತಾ ಆ ಇರಿದ ಬಾಣಾ ಬಿಟ್ಟ ಅಲ್ಪಸ್ವಲ್ಪ ಅವಕಾಶದಲ್ಲಿ ಕುತ್ಗೇನ್ತಿರುವ್ಕೊಂಡು 

ಕೋಪದಿಂದ್ಹೇಳತ್ತಾ ಕಪ್ಪೇ “ರಾಮಾ! ಮೊದಲ್ನಿನ್ನೀ ಹಾಳ್ಬಾಣಾನ್ಕೀಳೂಊ... ಆಮೇಲೆ ಹೊಂದಸ್ತೇನೆ 

ನೀನೇಳಿದ್ದ್ರನ್ಯಾಯಾ” ಅಂತ. ಇದೇನೋ ಏನೋ ಕಾಣೆ ಆ `ಕೋಪಮಂಡೂಕನ್ಯಾಯಾಂ' ತಾರಲ್ಲಾ 

ಅದು !... ಕುಗ್ತಾಕಿತ್ತ... ಬಾಣಾನ... ರಾಮ... ರಕ್ತ ಪ್ರವಾಹ... ಸುಸ್ತು... ಪ್ರಾಣೀ... “ಸ್ವಲ್ಪಿರು... 

ಸುಸ್ತಾಗಿಧೇನೆ; ಸುಧಾರಿಸ್ಕೊಂಡು, ಸಂಭಾಷಿಸ್ತೇನೆ ಆಮೇಲೆ"ಂತು ಪ್ರಾಣಿ, ಸುಧಾರಿಸ್ಕೋಂಡ್ಮೇಲೆ 

ಗದ್ದದ ಸ್ವರದಿಂದ ಮೊರೆಯಿಡತ್ತೆ ಆ ಮಂಡೂಕ... “ಅಯ್ಯೋ ರಾಮಾ! ನಾನು ಹುಟ್ಟಿದಾರಭ್ಯ 

ಹದ್ದುಗಳಾಗಲೀ ಹಾವುಗಳಾಗಲೀ... ಇಲ್ಲಾ... ಕಲ್ನೆತ್ಕೊಂಬರೋ ಹುಡುಗರಾಗಲೀ ಹತ್ತರ 

ಬಂದಾಗೆಲ್ಲಾ 'ಹರಿ ಹರೀ! ಹಾರಾಮ! ಪಾಹಿಪಾಹೀ'ಂತ್ಕಿರಲ್ತಿದ್ದ ನಾನೂ ,... ಶ್ರೀರಾಮನೇ ನನ್ನ 

ಮೇಲೆ ರಾಮಬಾಣಾನ ಎತ್ತಿ ಕುಕ್ಕೋಕುದ್ಯುಕ್ತನಾದಾಗ, ಏನೂಂತಕಿರ್ಲೋದೂ"ಂತ ಬಿಡ್ತು 

ಪಂಚಪ್ರಾಣಗಳ್ನ! ಹಾಗೇ ನನ್ನ ಮಗ, ರಾಮೂ, ಸೀತೆ ಹಾಗಿದ್ದ ಮೊದಲನೇ ಹೆಂಡ್ತಿ ಸತ್ತ ಮೇಲೆ 

ಈಗ ಬಂದಿರೋ ತಾಟಕಿ ಜೊತೇಲಿ ಕೈ ಜೋಡಿಸ್ಕೊಂಡು ಕುಣೀತಿರೋವಾಗ... ಗಂಡನ್ಕಳ್ಕೊಂಡಿವನ 

ತಾಯಿ... ಕೌಸಲ್ಯೆ... ನನ್ಗತೀಯೇನೂ...ಆಳ್ವಾದ್ಭಾವಿ ಇಧೆಯೇ ?... ಹತ್ರದಲ್ಲಿ?  


ಸಾವಿತ್ರಮ್ಮ: ಹಯ್ಯೋ ಸುಬ್ಬಮ್ಮನೋರೇ! ಕತ್ತಲೇನೂ ಕವಿತಾ ಬಂತೂ, ಇನ್ನಾಳ್ವಾದ 

ಭಾವೀ ಹುಡುಕೋದ್ರಲ್ಲಿ ಕಣ್ಣುಕಾಣದೇ ಎಡವಿಬಿದ್ದು ಕಾಲಿಗೆ ಪೆಟ್ಟಾದೀತೂಊ! ಈಗ ಸಧ್ಯ 

ಮನೇಗ್ಹಿಂತಿರ್ಗ್ಹೋಗಿ, ಮಗನಿಗೆ ಹೇಳೊದ್ನೆಲ್ಲಾ ಹೇಳಿ, ಇನ್ನೂ ಕೇಳ್ದೆ ಮೂರ್ಖನಾಗಿದ್ಪಕ್ಷಕ್ಕೆ 

ಮುಂದಿನ ಕ್ರಮಾನ ನಾಳೆ ಮಧ್ಯಾಹ್ನ ನಮ್ಮನೇಲಿ ತೀರ್ಮಾನಿಸೋಣಾ... ಬನ್ನಿ! ಬನ್ನಿ! 


(ಸುಬ್ಬಮ್ಮನನ್ನು ಕರೆದುಕೊಂಡು ಬಲಗಡೆ ನಿಷ್ಕ್ರಮಣ.]



----------------------------------------------------


ದೃಶ್ಯ ೨ 

ಸ್ಥಾನ: ರಾಮಪುರದ ಒಂದು ಬೀದಿ. 

(ಮೂವರು ವ್ಯಕ್ತಿಗಳು ನಡುಬೀದಿಯಲ್ಲಿ ನಿಂತು ಸಂಭಾಷಿಸುತ್ತಿರುವರು.) 


ರಾಯ: ಇದೇನೈಯ್ರೇ... ರಾಮಣ್ಣೋರು ಕೊಟ್ಟ lectureಊ ನಿಮಗೆ ಸರಿಬೀಳ್ದಿದ್ರೇ 

ಅಲ್ಲೇ ಪ್ರಶ್ನೆ ಹಾಕಿ ಸಂದೇಹ ನಿವೃತ್ತಿ ಮಾಡ್ಕೊಳ್ಳೋದ್ಬಿಟ್ಟೂ, ಇಲ್ಲೀಗ ನಡ್ರಸ್ತೇಲಿ ನಮ್ಹತ್ರ ಗೋಳಾಡೇನ್ಪ್ರಯೋಜ್ನ? 

 

Iyeru: ವುಂಗಹತ್ರ ನಾನೇನೂ ಕೋಳಾಡಂ ಪಣ್ಣಲಿಲ್ಲ... ರಾಮಣ್ಣಾವರ್... ತೊಟ್ಟವ್ರಾತ 

ಮೇಲೆ ಉಟಿಕೀರುಕು ಮತುವೆ ಪಣಲೇೕೕ ಪೇಕು...ಕೊರಪಟ್ಟವರ್ಕು... ಅಂತರೆ ಅಂಮ್ಡಯಾಂ... 

ಶತ್ತುಓಡವರ್ಕು... ತಿರಂಬಿ ಮತುವೆಮಾಟಲೇೕೕ ಪೇಕೂ ಅನೀ ಹೇಳಿದ್ರೇ ಅಲ್ಲತೇ.... ನಂಬ 

ಮನೆಕಳಲ್ಲಿ ಪೊಮ್ಮಂಡಾಟಿಗಳ permission ಸಿಕ್ಕುವ ತಾರಿ ತೋರಿಸಲಿಲ್ಲ Lecture Hall ಲ್ಲೇ 

ಕೇಳಿ ತರೋ, ಪೆರೀಯ ಹುಲಿಯಾಟ್ಮ ಒಡಂಬು ಮೇಲೆ ಪಿತ್ತು ಬಿಡುತ್ತಾರೆ. ಇಲ್ಲಿ, ಇಲ್ಲಿ 

ರೋಟಿನಲ್ಲಿ ಪರುವಾಗ ಮೂಲೇಲಿ ನಾವು ಮೂಣು ಜನಂಗ್ಳು ಮುತ್ತಿಕ್ಕೊಂಡು ಮಾತಾಡಬೇಕೂಅನ್ 

ಕಾತುಕೊಂಡಿತೇನೆ. 


ರಾಯ: ಅರ್ಥವಾಯ್ತು... ಹಾಗಾದ್ರೆ ನನ್ಗೂ ಸಂಸಾರದಲ್ಲಿ ಹೆಂಗ್ಸ್ರ ಹದ್ದು ಹೆಚ್ಚು... ಪ್ರೌಢ 

ವಿವಾಹ... ವಿತಂತು ಪುನರ್ವಿವಾಹ ಇವುಗಳ್ಗೆ ಮನೆಯವರ್ನ ಒಪ್ಸೋಬಗೆ ನನ್ಗೂ ಸ್ವಲ್ಪ ಹಾಗ್ಹಾಗೆ. 

... ನಿಮ್ಹಾಗೆ ನಾನೂವೆ ರಾಮಣ್ಣೋರು ಇಲ್ಹಾಸ್ಹೋಗೋವಾಗ... ನಿವೃತ್ತಿ ಮಾಡ್ಕೋತೇನೆ... 

ಹೌದೂ! ನಿಮಗನ್ನಡ ಗೊತ್ತಿಲ್ಲ...?... 


Iyeru: (ಅಡ್ಡಮಾತಾಗಿ) ನನಕ್ಕು ಕನ್ನಡಂ ಕೊತ್ತು! 


ರಾಯ: ಒಪ್ದೆ!... ಆದ್ರೂವೆ ರಾಮಣ್ಣೋರು ಕರ್ಣಾಟಕರೂ... ಕಮ್ಮೇಗ್ಳೂ... ಅವರ್ಗೆ 

ನಿಮ್ಕನ್ನಡ ಮಂದಟ್ಟಾಗೋದಿಲ್ಲ. 


Iyeru: ಅತುಪರ್ವಾ ಇಲ್ಲಾ, ನನಕು ಕನ್ನಡಂ ಕೊತ್ತಿಲ್ಲ... ಕೊತ್ತಿಲ್ಲಾನ್ನಾ ಮೈಸೂರು ಕನ್ನಡಂ... 

ಶುತ್ತ ಕನ್ನಡಂ ಕೊತ್ತಿಲ್ಲಾ... ಇಂದ ನಮ್ಮ Iyengar ಕೂ, ನನ್ನ ಇಂದ ಪಾಷೆಯೂ ಕೊತ್ತು... 

ಉಂಗ ಕನ್ನಡಮುಂ ಕೊತ್ತು, ಎನ್ನ Iyengar ರ್ರೇ! ರೋಂಡೂಂ... ಪುರಿಯಿಮೋನ್ನೊ... 

ಉಂಗ್ಳುಕ್ಕೂ ? 


Iyengar: ತೆರಿಂಚಿಕ್ರುದು ತೆರಿಂಚಿಕ್ರುದು... ಉಂಗ್ಡೆ ವಾರ್ತೆನೂ ತರಿಂಚಿಕ್ರುದು... ಇವಾಳ್ಣ್ಡೆ 

ವಾರ್ತೆನೂ ತೆರಿಂಚಿಕ್ರುದು; ಎಂಗ್ಡೆ ವಾರ್ತೇಲೆ ಉಂಗ್ಡೆರೆಂಡ್ವಾರ್ತೆಯುಂ ಈವಾಳಂಡೆ ವಾರ್ತೆಯೂ 

ವರ್ದು... (ನೇಪಥ್ಯವನ್ನು ಗಮನಿಸಿ) ಅಕೊ ಪಾರ್ಙೋ ! ರಾಮಣ್ಣಾವಾಳ್... ಎಳ್ಳಿಕ್ರಾರು ಇನ್‌ದ್ಪಕ್ಮೆ. 

 

ರಾಮಣ್ಣ: (ಪ್ರವೇಶಿಸಿ... ರಸ್ತೆಯ ಜಲ್ಲಿ ಕಲ್ಲೊಂದನ್ನು ಎಡವಿ ಪೆಟ್ಟು ತಿಂದ ದಕ್ಷಿಣಪಾದವನ್ನು 

ಎತ್ತಿಕೊಂಡು, ವದನದಲ್ಲಿ ವಿಷಾದವನ್ನು ವ್ಯಕ್ತಿಸುತ್ತಲೂ ಪೆಟ್ಟು ತಪ್ಪಿಸಿಕೊಂಡ ವಾಮಪಾದದಲ್ಲಿ 

ತಾಂಡವಮೂರ್ತಿಯಂತೆ ಪೆಟ್ಟಿನವಸ್ಥೆಯಲ್ಲಿ ಕುಣಿಯುತ್ತಲೂ) ಹಾಳು ಕಂಟ್ರಾಕ್ಟ್ Workoo!... ರೋಡುದ್ದಕ್ಕೂ ಜಲ್ಲಿ! ನನ್ನ new rulesoo Municipaliteeಲಿ ಚಾಲ್ತೀಗೆ ಬರೋವರ್ಗೂ ... ಇನ್ಕೆಲ್ವುು 

-------------------------------------------------


ದಿವ್ಸದಲ್ಲಿ ನಮ್ರಾಂಪುರ.... ಸರ್ವಾಂಗರಹಿತ... ಜನಭರಿತ-ಪುರವಾಗೋದ್ರಲ್ಲೇನೂ ಸಂದೇಹವೇ 

ಇಲ್ಲ. 

(ಎಂದು ನಡುರಸ್ತೆಯಲ್ಲಿ ನಿಷಣ್ಣಿಸಿ, ಪೆಟ್ಟಿನ ಮೇಲೆ ಉರಿಸಿ ಊದಿ ಬಾಧೆಯನ್ನು ಶ್ರಮಿಸುತ್ತಿರುವನು) 


ರಾಯ: (ಸಮಿಪಿಸಿ] ಅದೇನು ಹೊಸ Rulesoo ರಾಮಣ್ಣೋರೆ?

ರಾಮಣ್ಣ: ಓಹೋ ನಿಮಗ್ತಿಳೀದೇನೋ? ಇಲ್ಕೇಳಿ!

[ಕಿಸೆಯಿಂದ ಕಾಗದವನ್ನು ಹೊರಪಡಿಸಿ ಓದುತ್ತಾ] 

Suggestions of conditions controlling the eligibility of intending candidates 

for councillorship at the ensuing municipal elections with further suggestions of 

conduct and procedure of the local Corporation after afore-said election: 


i. "Each candidate for Councillorship must already possess a street lamp before his house." 


ರಾಯ: ಇದ್ಯಾಕ್ಸ್ವಾಮಿ... point ಏನು ? 


ರಾಮಣ್ಣ: Pointಏ ?  ಕೇಳಿ!-- "This is to save the tax-payer from future Certain Expenses.

 

ii. If and when elected, no two Councillors may reside in the same street 

locally.” 


Iyeru: ಇತು್ ಎನ್ನತ್ ಕ್ಕೇ! 


ರಾಮಣ್ಣ [ಓದುತ್ತಾ]-'This is to guarantee to the tax-payer at least as many 

clean kept streets in our City as there are Councillors in our Corporation 


iii. Each Councillor must be presented with a Gold Medal for every occasion 

that a Great personage arrives in the City, that he is not present on the occasion- 

This is to ensure the bona fides of the purpose of the candidate in seeking election, 

ಹ್ಯಾಗಿದೆ ?... ಇನ್ನೂ ಕೇಳಿ ?... ಕೊನೇದು? 


iv. Free quarters must be provided for the President and irrespective of his 

owning a private palace or mansion it must be insisted that he resides in those 

quarters selected in the dirtiest parts of the City;... and as the surroundings of these 

quarters get clean and sanitary he will be shifted to other temporary quarters in 

the other dirty parts of the Cily .... ಆಯ್ತ! ಇನ್ನೊಂದೇ ಒಂದು.

---------------------------------------------------------



v. "The day after the election a la the Lord-Mayor's Show of London, a 

procession of the new President and Councillors must be arranged for with a view 

for them to realize the nature and the extent of the work before them: and hence 

the venue of the procession will be selected from the worst-kept roads and least 

sanitary quarters of the City. It is incumbent upon the municipal body-corporate 

that they should negotiate the procession without shoes on their feet and bags over 

their noses; the latter to allay a local rumour that blind people in our city do not 

find their failing in their way of their getting about the City if their noses 

are functioning efficiently!”... ಹ್ಯಾಗಿವೆ, rulesoo? ಇವುಗ್ಳುಗಾನಾಜಾರೀಂದ್ಬಿಟ್ರೇ... 

ನಮ್ಮರಾಮ್ದುರ್ದೆರ್ಗೆ ಕುಬೇರನ್ಪಟ್ಣ ಕೊಂಪೆ!... ಕೊಂಪೆ!... ಹೌದೂ ಊ? ಅರ್ಥವಾಗ್ಲಿಲ್ಲ... 

ನೀವೆಲ್ಲಾ ನಡ್ರಸ್ತೇಲಿ ಹೀಗ್ನಿಂತ್ನೆರ್ದಿರೋದು! 


ರಾಯ: ಏನೂ ಇಲ್ಲಾ; ತಮ್ಲೆಕ್ಚರು attend ಮಾಡ್ಬಿಟ್ಟು ಮನೇಗ್ಬರ್ತಾ ನಮ್ಮಮ್ಮಲ್ಲಿ ಹುಟ್ಟಿದ 

ಸಂದೇಹಾನಾ ತೀರ್ಸ್ಕೊಳ್ಳೋ ಸಂವಾದ್ದಲ್ಲಿ ತಾವೂನೂ ಬಂದ್ಬಿಟ್ರಿ.... 


ರಾಮಣ್ಣ ಅದೇನ್ಸಂದೇಹಾ?... ನಾನು ತಕ್ಕಟ್ಟಿಗೆ definite ಅನ್ತಾನೇ ಹೇಳ್ದೆ ನನ್ ideas 

ನಾ?... ಸಂದೇಹಕ್ಕೆಲ್ಲಿ ಅವಕಾಶ ? 


ರಾಯ: ನೋಡಿ ! ನೀವೇನೋ ಸಮಾಜ ಸುಧಾರಣೆಗೂ... ನಮ್ದೇಶ್ದೇಳ್ಗೇಗೂ... post 

puberty marriageಊ ... widow re-marriageಊ ಇವೆರ್ಡೂ ಆಗ್ಲೇ ಬೇಕೂಂತ ಅಂದ್ಬಿಟ್ರೆ  

ಹೊರ್ತು ... ನಮ್ಪುರಾಣೇತಿಹಾಸಗಳಲ್ಲಿ ಯಾವ ಭಾಗಗಳ್ನ ಮರ್‍ತರೂನೂವೆ , 

'ಸಾಭಾರ್ಯಾಯಾಗೃಹೇದಕ್ಷಾ' ಅಂತನ್ನೋ ಮಹಾಭಾರತೊಕ್ತೀನಾ ಮೇಲ್ಪಂಕ್ತಿ ಹಾಕ್ಕೊಂಡಿರೋನಮ್ಮನೆ 

ಆಕೆಗಳೂ ಮಿಕ್ಹೆಂಗ್ಸ್ರೂನೂ ಒಪ್ಪೋವರ್ಗೂನೂ, ಗಂಡ್ಗಂಡಸ್ರೂ ತಮ್ lectureಗಳಲ್ಲಿ ನಿಷ್ಕರ್ಷಿಸ್ಕೊಂಡ  ಠರಾವ್‌ಗಳ್ಗೆ ಮನೇ ಹೆಂಗಸ್ರೂ “ಹೂಂ” ಮುದ್ರೆ ಒತ್ತಿದ್ರೆ ತಾನೇ ಜಾರಿಗೆ ಬರೋದು... social 

reform resolutionನ್ನುಗಳೂ? 


ರಾಮಣ್ಣ: ಕ್ಷಮ್ಸಿ!... ನಮ್ಸಂಸಾರಾ ಜರಗ್ಸೋಬೀಗ್ಮುದ್ರೆ ನಿಮ್ಮನೇ ಹೆಂಗ್ಸ್ರ ಕೈಯ್ಲಿರೋದು, 

ನೀವು ಮೀಶೆಯಿಂದ್ಮಟ್ಗೆ masculine ಆಗಿರೋದು, ನಿಮ್ತಪ್ಪಲ್ದೆ lecture ಕೊಟ್ಟ ನನ್ತಪ್ಪಲ್ಲಾ... 

ಕೋಪಿಸ್ಕೋಬೇಡಿ. ನಿಮ್ daughterಗೆ ten ಆಗ್ತಾ ಬಂತು. ನೀವು ಮನುಷ್ಯರಾದ್ರೆ, ಗಂಡ್ಸ್ರಾದ್ರೆ... 

ಮೈನೆರೆಮ್ಮೇಲೇನೇ ಮದ್ವೆ ಮಗಳೇಂತ ಮುಷ್ಕರಾ ಹಿಡ್ಡು ಸಾಧ್ಸಿ ನಿಮ್ಹಟಾನಾ! ಆವಾಗ 

“ಸೋಭರ್ತುರ್ಯ್ಯೋಗೃಹೇದಕ್ಷಃ'ಂತ ಭಾರತ ಭಾರತಾನೆ ತಳ್ಕೆಳ್ಕ್ಮಾಡಿ... ಭರತ್ಮಾತೆ ಮಾನಾನ 

ಬಚಾಯಿಸ್ದ ಹಾಗಾಗುತ್ತೆ! 


ರಾಯ: ಒಪ್ದೇ ಸ್ವಾಮಿ!... ಒಪ್ದೆ!... ಮನೆ ಯಜ್ಮಾನ ಗಂಡ್ಸೂಂತಂದ್ರೂನೂವೆ, ತಂದೆ... 

ಇಲ್ಲ ತಾಯಿ. ಇವರ ಮಾತ್ನ ಎತ್ಹಾಕ್ಕೂಡ್ದೂಂತಿರೋವ್ರಗತಿ ಏನು!? ನೋಡೀ Post puberty  marriageನಲ್ಲಿ ನನಗ್ನಂಬ್ಕೆ ಇದ್ರೂನೂವೆ, ಎಪ್ಪತ್ವರ್ಷ ತುಂಬಿದ್ನಮ್ಮಜ್ಜಿ ಹತ್ತ್ವರ್ಷಕೂಡ ತುಂಬದ 

ನಮ್ ಪಾತೂ ಮದ್ವೇನ ಈ ವರ್ಷವೇ ನೋಡ್ದಿದ್ರೆ... ಭಾವೀಲ್ಧುಮ್ಕಿ ಸಾಯ್ತೇನೇಂತ ಕೂತಿದ್ದಾಳಲ್ಲಾ, ಇದಕ್ಕೇನ್ಮಾಡೋದ್ನಾನು...?

--------------------------------------------------


ರಾಮಣ್ಣ: Ri-di-cu-lous! ಇದೇ ಹೆಂಗಸ್ಗೆ ಹೆದ್ರಿದ ಗಂಡ್ಸೆದಿರ್ಗೆ, ಹೆಂಡ್ತಿಗಳೂ ಅಮ್ಮಗ್ಳೂ 

ಅಜ್ಜಿಗ್ಳೂ ಆಡೋ ತುರುಫ್ಹಾಸು...''ಬಾಯ್ಬಿಟ್ರೆ ಭಾವೀಲ್ಬೀಳ್ತೇನೇಂತ... ತುರುಫಿನ್ಮೇಲ್ತುರ್ಫು ಮನೇ 

ಭಾವೀ ಮುಚ್ಚೀ, ನಲ್ಲಿ ಇಡೀ ನೀರಿಗೆ. 

 

Iyeru: ಆತು ಆಗೋದಿಲ್ಲಾ ಸ್ವಾಮೀ!... ತೊಟ್ಟವ್ರಮಾತು ಚಿನ್ನವರ್ ಕೇಳಪೇಕ್ೂ 

ಅಂಬೋದ್ೂ institution ಆಗಿಹೋಗಿತೆ, Indian ಮನೆಕಳಲ್ಲೀ!... 


ರಾಮಣ್ಣ: Such institutions must be broken... uprooted! 


Iyeru: ಅತು impracticableಸ್ವಾಮಿ!... ಈಕ ನೋಡಿ! ರಾಜಾಮರು ಚಿಕ್ಕದಾಕಿರೋವಾಕಾ 

ಮಕ್ಕಳು ಕೂಡ ಪಿಚ್ಚಿಹಾಕಬಹುತು... ತೊಟ್ಟತಾತ ಮೇಲೆ ಒಂದು institution ಆಗಿ ಓಗುತ್ತದೆ... 

ರಾಜಾಮರಂ. 


ರಾಮಣ್ಣ: 'ರಾಜಾಮರಂ'?! ಅದೇನ್ಮರಾ ? 


Iyeru: ಮ‌ರ್೦... ತೊಟ್ಟಮರ್೦... ಹೆಂಗಸರು ಶುತ್ತಿ ಶುತ್ತಿ ಬರುವಳು... ಪ್ರತಕ್ಷಣೌಂ 

ಮಾಡುವತು್... ನಮಸ್ಕಾರ ಮಾಡುವತು... ಮಕ್ಕಳು ಉಟ್ಟುವತು... ರಾಜಾಮರಂ! 


Iyengar; ಇದೇನದ್ಭುಥೋ! ಪಸಂಗ್ಲುಪರ್ಕೊರ್ಮರ್ಮಾ !... ಅದೆನ್ಮಾದ್ರಿಮರಂ ? 


Iyeru: ಎನ್ನಾ? ಪರ್ಕರಮರಮಾ? ಎನ್ದಭಾಷೇನ್ನೆನಚಿಂಡಿಕ್ರೇಳ್, ನೀಂಗೋ ? 


Iyengar; ತಮ್ಳೂನ್ನೂ ನೆನಸ್ಕೊಂಡಿಕ್ರೇನು... ನಾನು. 


Iyeru: ನೆನಚಂಡಿರ್ಕ್ರ ಭಾಷೆಯೇ Sunlight Soap ಲೇ ತೇಚಿ ಕಶಕ್ಕಿ ಒಣತ್೦ಗೋ...! 

[ ರಾಮಣ್ಣನಿಗೆ] ಇಲ್ಲಿನ್ನೋಟೀ!... ಎನಕೂ ಕನ್ನಡಂ ಕೊತ್ತಿಲ್ಲಾ... ನಿಮಕು tamil ಕೊತ್ತಿಲ್ಲಾ... ಇಂತ 

Iyengarಕೂ ರೋಂಡು ಪಾಷೆಯಲ್ಲಿ ಕೊತ್ತಿಲ್ಲಾ... ಅಲ್ಲಿ ಕೊತ್ತಿಲಾನ್ೂಂ ಕೊತ್ತಿಲ್ಲಾ... ನಿಮ್ಮ 

ಕನ್ನಡ ಪಾಷೆಕಿ ತೋಲಿಯುರಿಚ್ಚಬಾಳೆ ಅಣ್ಣ್ೂನು್ ನಿಮ್ಮ ಹೆಸರು! “ಎಂಗ ಪಾಷೇಕಿ ಮೋರ್... 

ಮಜ್ಜಿಕೆ ಉಳೀನ್ಸ್ ಎಂಗಪೇರು. ಇಂತ Iyengarಉ ಫಾಷೆ.... ಓಂಗ ಬಾಳೇ ಅಣ್ಣು ಎಂಗ 

ಮೊರು್ ಉಳೀಲೆ ಪಶಂಚ್ೂ ತಿನ್ನುವ ಪಾಷೆ!... ಈತ ನಾವು ಆಟುವ ಮಾತ್ರ post puberty 

marriage... widow re-marriage...ಮನೆ ಹೆಂಗಸರ ಮಾತಿನ ಮೇಲೆ puberty marriage.... 

widow re-marriage.. ಮನೆ ಹೆಂಗಸರ ಮಾತಿನ ಮೇಲೆ ಮರ್ಯಾತ ಇರು್ರ್ಕರ ನಮ್ಮಕಳ್‌ಕ್ಕೆ 

ನಿಮ್ಮ idealistic lecturoo... ಪ್ರಯೋಚನವೇ ಇಲ್ಲ. 


ರಾಮಣ್ಣ: [ಪಟಾಟೋಪದಿಂದ] ಪ್ರಯೋನ್ವಿಲ್ಲಾ! Of course ಪ್ರಯೊಜನ್ವಿಲ್ಲ ನಿಮಗೆ 

... ನಾನ್ಕೊಟ್ಟ lecturooನಿಮಗಲ್ಲಾ... ಹೆಂಗಸರಗ್ಹೆದರೊಂಡಿರೋ ಹೇಡಿಗಳಲ್ಲಾ!... ಹೋಂರೂಲು.... 

Home Rulao ಅಂತ ಹೇಳ್ತಾ Homeನಲ್ಲಿರೋ ಹೆಂಗಸರ್ಕೈಲಿ ಜುಟ್ಟೂ, ಮೀಸೇನೂ ಕೊಟ್ಬಿಟ್ಟು 

ಕಂಗೆಡೋ ಕ್ರಿಮಿಗಳ್ಗಲ್ಲಾ ಕೊಟ್ಟದ್ದು ನಾನು... ನನ್ lectureನಾ!... 


(ಕನಿಕರ ದೃಷ್ಟಿಯಿಂದ ಮೂವ್ವರನ್ನು ಈಕ್ಷಿಸಿ] ಹಯ್ಯೋ!... ಸಿಂಮ್ಳಾದಲ್ಹೋಗಿ ಸ್ವರಾಜ್ಯ 

ಸ್ವರಾಜ್ಯಾಂತ ಸೀತ್ಕಾರ ಮಾಡೋ ಸಿಂಹಗಳೂ... ಮತ್ತೂರ್ಗೆ ರೈಲ್ಲತ್ತತ್ಲೂನೂವೇ ತೋಳಗ್ಳೂ...

------------------------------------------------------


ತಮ್ಕೇರೀಗೆ ಕಾಲ್ಹಾಕೋವಾಗ ಕತ್ತೆಗ್ಳೂ... ಇನ್ತಮ್ಬೀದೀಗ್ಬರುತ್ಲೂನೂವೆ ಬೆಕ್ಕುಗ್ಳೂ ಆಗಿ, ಇನ್ತನ್ಮನೇ 

ಹೊಸಲ್ದಾಟತ್ಲೂನೂವೆ ಮನೆ ಆಕೆಗೆ ಬೆದರ್ಕೊಂಡು... ಮೂಲೇಲ್ಮುದರ್ಕೊಂಡು... ಮೂತಿ 

ಮುಚ್ಟೋಳ್ಳೋ ಮೂಗಿಲಿಗಳ್ರಾ!! ನಿಮಗಲ್ಲಾ... ನಾನ್ಕೊಟ್ಟ ನನ್ನ lectureoo!! ಗಂಡಸರ್ಗೆ!!... 

ಗೈರತ್ತಿರೋ... ಗಂಡಸರ್ಗೆ!! 


(ಹೋರಾಡಿ ಗೆದ್ದ ಹುಂಜದಂತೆ ಹೆಜ್ಜೆಯನ್ನು ಹಾಕುತ್ತಾ, ಹಿಗ್ಗುತ್ತಾ ರಾಮಣ್ಣನು ಹೊರಡುವನು.] 


ರಾಯ: [ಬೆಚ್ಚಿಬಿದ್ದು-ರಾಮಣ್ಣನು ಹೋದ ಹಾದಿಯನ್ನು ಸಭಕ್ತಿ ಭೀತಿಯಿಂದ ಅವಲೋಕಿಸುತ್ತಾ] 

ಕ್ಷಮ್ಮಿ ಸಾರ್ ! ಈ ಪ್ರಾಣಿ!... ಮಹಾಪ್ರಾಣಿ! ನಮ್ಮಂಥಾ ಗಂಡಸ್ರಗುಂಡ್ಗೇನೆ ಕುಗ್ಗಿಸಿ ಕರಗ್ಸೋವಾಗ... 

ಈ ಹೆಬ್ಬುಲಿ ಘರ್ಜನೇನಾ... ಈತನ್ಮನೇ ಹೆಂಗಸ್ರು ಹ್ಯಾಗ್ತಾನೇ ಸಹಿಸಿ ಬದುಕ್ತಾರೋ ಕಾಣೆ. ಬನ್ನಿ 

ಹೋಗೋಣಾ... ನಮ್ನಮ್ಹಣೇ ಬರ್ಹ್ವೋ... ಮನೇಲಿ, ಸಾಭಾರ್ಯಾಯಾಗೃಹೇದಕ್ಷಾ! 

[ನಿಷ್ಕ್ರಮಣ] 

ದೃಶ್ಯ ೩ 

ಸ್ಥಾನ: ರಾಮಣ್ಣನ ಮನೆಯ ಮುಂದಿನ ಕೋಣೆ 


ರಾಮಣ್ಣ (ಪ್ರವೇಶಿಸಿ, ಕೋಣೆಯ ಹೊರ ಹೊಸಲನ್ನು ದಾಟಿಲುದ್ಯುಕ್ತಳಾಗಿರುವ ತಾಯಿಯನ್ನು 

ಕುರಿತು] ಅದ್ಯಾಕಮ್ಮ ಹೀಗ್ನಿಂತಿಧೀಯಾ? 


ಸುಬ್ಬಮ್ಮ: ಅದೇ ನನಗೂ ಆಶ್ಚರ್ಯ ! ನಿಮ್ಮಪ್ಪನ್ನ ಸ್ಮಶಾನದಲ್ಲಿ ಸುಟ್ಟು ಬೂದಿ ಮಾಡಿದ್ಯಲ್ಲಾ, 

ಅವನ್ಸುಟ್ ಚಿತೇ ಮೇಲೆ ಎರಡು ಬೆಟ್ಟಗ್ಲವಾದರೂ ಸ್ಥಳ ಬಿಟ್ಟಿದ್ರೆ ಅದರ ಮೇಲೆ ಬಿದ್ದುಕೊಂಡು 

ಬೂದಿಯಾಗಬೇಕೂ ಅಂತಿದ್ದ ನನಗೆ, ಹಸುಮಗುವಾಗಿದ್ದ ನಿನ್ನ ಸಾಕೋಕೆ ಅಂತ ನಿಮ್ಮಪ್ಪ ಕಟ್ಟಿಟ್ಟು 

ನಿಮ್ಮಿಬ್ಬರೂ ಬಿಟ್ಬಿಟ್ಟು ಹೋದ ಈ ಮನೇಲಿ... ಆ ಮೊದಲನೇ ಮಾರಿ ಸತ್ತದಕ್ಕೆ ಸಾಯೋವರಿಗೂ 

ಸಂತೋಷಪಡ್ಕೊಂಡು ಸುಮ್ಮಿರದೇ, ಬೇಡ... ಬೇಡ... ಬೇಡ.... ಅಂತ ಬಡ್ಕೊಂಡ ನನ್ಮಾತನ್ನೆತ್ತ್ಹಾಕಿ 

ಈ ಎರಡನೇ ಕಿರಾತಕೀನಾ ಕೈ ಹಿಡಿದು ಮನೆಗೆಳಕೊಂಡ್ ಬಂದಾರಭ್ಯ ಮುಳ್‌ ಮುತ್ತುಗದ ಮರದ 

ಮೇಲ್ನ... ಭೇತಾಳ್‌ನ್ಹಾಗೆ ಸೂರಿಗೆ ಕಾಲು ನೆಲಕ್ಕೆ ತಲೆಯೂ ಆಗಿ ತೂಗಾಡೋದು ಬಿಟ್ಟು ಸರ್ವರ 

ಹಾಗೆ ಹೀಗೆ ನೆಟ್‌ಕೊಂಡು ನಿಂತಿರೋಕೆ ನನಗೆಲ್ಲಿ ಯೋಗ್ಯತೆ ಬಂತೂಂತ.... ನನಗೂ ಅದೇ 

ಆಶ್ಚರ್ಯ !! 


ರಾಮಣ್ಣ: ಅಮ್ಮಾ! ಅಪ್ಪ ದಿವಂಗತನಾದಾಗ, 


“ತಿಸ್ರ ಕೋಟ್ಯೋರ್ಧ ಕೋಟೀಚ ಯಾನಿರೋಮಾಣಿ ಮಾನವೇ| 

ತಾವತ್ಕಾಲಂ ವಸೇತ್ಸ್ವರ್ಗೇ ಭರ್ತಾರಂ ಯಾನುಗಚ್ಛತಿ” 

ಎಂಬ ಪುರಾಣೋಕ್ತಿಪ್ರಕಾರ ಅಪ್ಪನ್ ಜತೇಲಿ ಸ್ವರ್ಗಸುಖಗಳೆಲ್ಲಾ ಅನುಭವಿಸೋದ್ನ ಬಿಟ್ಟಿಟ್ಟು... 

“ಆತ್ಮಾವೈ ಪುತ್ರನಾಮಾಸೀ” ಅಂತ, ಅಪ್ಪನೇ ನಾನು ಅಂಬೋ ಭಾವದಿಂದ ಈ ನನ್ನ ಬೆಳಸಿದ  

ನೀನು ಈ ವಯಸ್ಸಿನಲ್ಲಿ ನನ್ನ ಕಣ್ಣೆದುರ್‌ಗೆ ಹೀಗೆ ಕಷ್ಟಪಡೋದು ನನ್ನ ಹೃದಯಾನ ಇರೀತಿಧೆ... 

-------------------------------------------------------------


ಇದೊಂದ್ ಕಡೆ, ಇನ್ನೊಂದ್ ಕಡೆ, ನೀನು ಬೇಡ ಬೇಡಾಂತೆಷ್ಟು ಹೇಳಿದರೂ ಹುಚ್ಹಟ 

ಹಿಡ್ದು ಈ ಎರಡನೇ ಮದುವೆ ನಾಮಾಡಿಕೊಂಡದ್ದು ಮನಸ್ಸಿಗೆ ಬಂದು, ಪಿತೃವಾಕ್ಯ ಪರಿಪಾಲಕನಾದ 

ಶ್ರೀರಾಮನ ಹೆಸರ ಮಾತೃವಾಕ್ಕೋಲ್ಲಂಘಕನಾದ ಈ ಘಾತುಕನಿಗೆ ಅದೇ ಹೆಸರಿಟ್ಟಿದ್ದು, ಹೃದಯಾನ 

ಕೊರೀತಿಧೇಮ್ಮಾ... ಕೊರ್ರೀತಿಧೆ. ಆದರೂ ಈ ಹಸುಳೆ ನಿನ್ನ ಮಗೂ ಅನ್ನೋದ್ಮರೀದೆ ಮನಸ್ಸಿಗೆ 

ಶಾಂತಿ ತಂದುಕೊಳ್ಳೋದು ನಿನ್ನ ಭಾರಾಮ್ಮಾ! (ಬಿರುಸಾಗಿ) ಆದರೆ ಈ ಪಿಶಾಚಿ ವಿಷಯದಲ್ಲಿ 

ಇನ್ನೇನೂ ಶಂಕೆ ಇಳ್ಕೊಬೇಡಮ್ಮಾ! 


“ಸ್ತ್ರೀಣಾಮ್ ಶುದ್ಧ ಸ್ವಭಾವಾನಾಂ ಪತಿರೇಮೀಶ್ವರ ಪ್ರಭುಃ” ಅನ್ನೋ ಭಾರತೋಕ್ತಿಗೂ 

“ಪತಿಮಾತಾ ಪರಾಗತಿಃ” ಅನ್ನೋ ಆಕಾಶೋಕ್ತಿಗೂ ಪ್ರತಿಕೂಲವಾಗಿ ಅಲ್ಪ ಸ್ವಲ್ಪ ಕದಲಿದ್ಳೋ... 

ಕೈಕಾಲು ಮುರಿದು ಒಲೇಲಿಟ್ಟು ನೀರಾಯಿಸಿ ಅದರಲ್ಲಿ ಬೇಯಿಸಿದ ತನುತಲೆಗಳ್ನ ತೌರ್ಮನೆಗೆ 

ರವಾನ್ಸೋ ವಿಷಯದಲ್ಲಿ ಶಂಕೆ ಪಡ್ಬೇಡಮ್ಮ! ನಾರಾಯಣಾ!... ದೊಡ್ಡೆಜಮಾನಮ್ಮನೋರಿಗೆ 

ಜಪಕ್ಕಿಡು! ನಾನು ಊಟಕ್ಕೆ ಏಳೋಷ್ಟೊತ್ತಿಗೆ ಫಲಾರಕ್ಕೆ ತಯಾರಾಗಿರ್ಬೇಕಮ್ಮ! 


ಸುಬ್ಬಮ್ಮ: (ನಿಷ್ಟ್ರಮಿಸುತ್ತಾ-ನಿಧಾನವಾಗಿ) ಆಗ್ಲಿ... ದಿನಾ ಹೀಗೆ ಹೊತ್ಬಿಟ್ಕೊಂಡು 

ಬರ್ತ್ತೀಯಲ್ಲಾ, ಮೈಗಾಗುತ್ತೆಯೇ ಮಗೂ ?! 


ರಾಮಣ್ಣ (ತನ್ನಲ್ಲಿ ತಾನೇ] Scylla... dodged! ಇನ್ನು... Charybdisim ಎಲ್ಲಿ loom  

ಮಾಡುತ್ತೋ ಕಾಣೆ! As the boy-scouts ಹೇಳೋಹಾಗೆ, I must be preparedಉ !! 


(ವೆಂಕಮ್ಮನು ಬೋರನ ತಲೆಯ ಮೇಲೆ ಟ್ರಂಕು ಹಾಸಿಗೆಯನ್ನು ಹೊರಿಸಿ ಅವನ 

ಹಿಂಬಾಲಿಸಿ, ಒಳಗಿನಿಂದ ಹಜಾರಕ್ಕೆ ಪ್ರವೇಶಿಸುವಳು.] 


ವೆಂಕಮ್ಮ: ನಡಿಯೋ ! 


ಬೋರ: ಸೀಮೊಗ್ಗೆಗೆ.... ಈಟೊತ್ಗೆಲ್ಲವ್ವಾ ರೈಲೂ....? 


ವೆಂಕಮ್ಮ: ಏಟೊತ್ತಿಗೆ ರೈಲೋ ಆಟೊತ್ತಿನವರಿಗೂ... ಅಲ್ಲಿ ಕುಕ್ಕರಿಸಿಕೊಂಡಿರೋದು 

ನಡಿಯೊ !... ಶನೀ ! 


ರಾಮಣ್ಣ: ಈಗೇನು ಮಾಡೋದು?... ಬೆದರಿಸಿದೆನೋ ಬೆದರೋದಿಲ್ಲ. ನಾನು ಬೆದರಿದೆನೋ 

double ಬೆದರಿಸ್ತಾಳೆ ! ಇಲ್ಲಾ... Beg ಮಾಡಿದ್ರೂ ಇನ್ನೂ ತಲೆಗೆ ಹತ್ತಿಬಿಡ್ತಾಳೆ. ಹೆದರ್ಸೋದೋ 

hopelessoo; Ergo, mild Surpriseಏ best methodoo... ಅಲ್ಲ... proceedureerಊ... 

(ಪ್ರಕಾಶ) ಓ ಹೊ... ಏನಿದೂ ?! 


ವೆಂಕಮ್ಮ: ಯಾವ್ದೇನೂ ?! 


ರಾಮಣ್ಣ: ...ಇ...ಇ...ದೂ? 


ವೆಂಕಮ್ಮ: ಇದೇ ?... ಮೇಲಿರೋದು ನನ್ನ ಟ್ರಂಕು ಹಾಸಿಗೆ... ನನ್ನ ತವರ್ಮನೆಯಿಂದ ತಂದದ್ದು, 

ಅದನ್ನು ಹೊತ್ತಿರೋ ಹೋತ ನಿಮ್ಮ ಜವಾನ. 


ರಾಮಣ್ಣ: ಅಲ್ಲಾ.... ಎಲ್ಲಿಗೆ ಹೊರಟದ್ದೂ....? 

---------------------------------------------------------------------


ವೆಂಕಮ್ಮ: ಎಲ್ಲಿಗೇನೂ?... ನಮ್ಮೂರಿಗೆ, ನಮ್ಮನೇಗೆ... 


ರಾಮಣ್ಣ: ಇಷ್ಟು ಹೊತ್ತಿನಲ್ಲೇ ?... ನಮ್ಮ ಮಾವನವರೂ... ಸೌಖ್ಯ ತಾನೆ? 


ವೆಂಕಮ್ಮ: ಸೌಖ್ಯವಿಲ್ಲದೆ ಏನು? ನಿಮ್ಮನೇಲಿ ನೀವೂ ನಿಮ್ಮ ತಾಯಿ ನಿಮ್ಮನೇಲೆಷ್ಟು 

ಸೌಖ್ಯವೋ ನಾನೂ ನಮ್ಮ ತಂದೇನೂ ಅಷ್ಟಕ್ಕಷ್ಟೂ ಸೌಖ್ಯವಾಗಿರ್ತ್ತೇವೆ... ನಾಳೆ, ನಮ್ಮೂರಿನಲ್ಲಿ 

(ಬೋರನಿಗೆ)... ನಡಿಯೋ! 


ರಾಮಣ್ಣ ಕ್ಷಮಿಸು dear!... ಒಂದು... three Wards ನಿನ್ನ ಕಿವೀಲಿ; (ಬೋರನಿಗೆ) 

ಒಳಗಿಡೋ !! 


(ಬೋರನ ನಿಷ್ಟಮಣ] 


ವೆಂಕಮ್ಮ: ಯಾಕದ್ನ ಕಳ್ಸಿದ್ನೀವು ತಿರ್‍ಗೀ...? 


ರಾಮುಣ್ಣ ಇಲ್ಲೋಡು dear!...ಹೂಂ!... good news ! motherಗೆ consumption ಅಂತೆ!  

Frorn Anty mother's side. ಅವರಮ್ಮನ್ಕಡೆಯಿಂದ! ಡಾಕ್ಟರ್ ಹೇಳಿದ್ರು! ಇಲ್ನೋಡು dear! 

ಅಮ್ಮನ್ಗೆ, rheumatism, melancholia... Sciatica, Lumgabo... ಹೀಗೆ  ಜಗತ್ತಿನಲ್ಲಿರೋ 

ಜಾಡ್ಯಾನೆಲ್ಲಾ ಜೋಮಾಲೆ ಹಾಕಕ್ಬಿಟ್ಟಿಧಾನೆ ಅಮ್ಮನ ಕುತ್ತಿಗೆಗೆ... ಡಾಕ್ಟರು, ಇನ್ನೆಷ್ಟು ದಿನಾಂತ 

ಬದ್ಕಿದ್ದಾಳೊ? ಇನ್ಮೂರು ತಿಂಗ್ನಲ್ಲಿ sensible ಆಗಿ ಸತ್ತಳೋ ? ಬದ್ಕಿದ್ಳೂ! ನಿಂತಳೂ ! ?, ಅದಕ್ 

ಬೇರೆ arrangement ಮಾಡಿಧೇನೆ... ನಾರಾಯಣಾ! 


ನಾರಾಯಣ: ಪ್ರವೇಶಿಸಿ] ಸ್ವಾಮಿ! 


ರಾಮಣ್ಣ ನಿಮ್ಮಮ್ಮ ಯಾವಾಗ ಕಾಶೀಗ್ಹೊರಡೋದು... (ವೆಂಕಮ್ಮನಿಗೆ) ಕೇಳು dear! 


ನಾರಾಯಣ: ಸ್ವಾಮಿ ಅವತ್ತೇ ಹೇಳಿದ್ರಲ್ಲಾ.... ಅನ್ಕೂಲಗಳು ಒದಗ್ಸಿ ಅನುಜ್ಞೇನೂ ಕೊಟ್ 

ತ-ತಕ್ಷಣವೇ! 


ರಾಮಣ್ಣ: ಸರಿ... ಹೋಗು (ನಾರಾಯಣ: ನಿಷ್ಕ್ರಮಣ)... ಕೇಳು dear! ಇನ್ಮೂರ್ತಿಂಗಳಲ್ಲಿ 

ಸತ್ತಳೋ?... ಬದ್ಕಿದ್ಳು !! ಇಲ್ವೋ? ವಾರಣಾಸಿ! return ticket ಇಲ್ಲಾ!... ಸಂಚಯನದವರೆಗೂ 

ನಾರಾಯಣಾ ಅಲ್ಲೇ ಠಿಕಾಣಿ.... ಇನ್ಮೂರೇ ತಿಂಗಳು dear... 


ವೆಂಕಮ್ಮ: (ನಿಧಾನವಾಗಿ ಒಳಗೆ ಹೋಗುತ್ತಾ ಅದೇನ್ಮೂರ್ತಿಂಗ್ಳೋ ಅದನ್ನೂ ನೋಡ್ಬಿಟ್ಟೇ 

ಹೋಗ್ತೇನೆ. 


[ನಿಷ್ಕ್ರಮಣ] 


ರಾಮಣ್ಣ Oh my God!!... ಅಲ್ಲಾ? ಇನ್ನೆಷ್ಟು ದಿನಾಂತ್ಹೀಗೆ playing aff one  against 

the otheroo ಫಲಿಸುತ್ತೋ ಕಾಣೆ! 

 

[ನಿಷ್ಕ್ರಮಣ]


----------------------------------------


ದೃಶ್ಯ ೪ 

ಸ್ಥಾನ: ಪೂರ್ವವತ್ 


(ವೆಂಕಮ್ಮನು ಕುಳಿತಿರುವಳು-ಬೋರನು ತರಕಾರಿಯ ಬುಟ್ಟಿಯನ್ನು ಹಿಡಿದು ಪ್ರವೇಶಿಸುವನು.) 


ವೆಂಕಮ್ಮ: ತರಕಾರಿ ಕೆಳಗಿಟ್ಟು... ವಿಂಗಡಿಸೋ! 


ಬೋರ: ಯಜಮಾನ್‌ರೇಳವ್ವಾ... ತರಕಾರೀನಾ ಮುಂದಿನ ಕೋಣೆಗಿಡಬಾರದೂಂತಾ.. 


ವೆಂಕಮ್ಮ: ಯಾಕೋ... ಕಾಣೆ? 


ಬೋರ: ದಾರಿನ್‌ರೂಮ್ (Drawing Rooms) ಅಂತೆ... ತರಕಾರಿ, ಅಡಿಗೆ ಬಾಬ್ತು... 

ಇಂದಿನ ಕೋಣೆಗೆ... ಇಟ್ಕೋಬೇಕೂಂದ್ರೂರ್ರವ್ವಾ... ಯ... ಯಜಮಾನ್ರೂ! 


ವೆಂಕಮ್ಮ: ಇಲ್ಲಿ ಬಾರೋ! ನಾನ್ಯಾರೋ ?... 


ಬೋರ: ಯಾಕ್ರಪ್ಪಾ?... ಅಮ್ಮಾವರೂರವ್ವಾ! 


ವೆಂಕಮ್ಮ: ಯಾರೋ... ಸಂಬಳ... ಕೊಡೋರು ? 


ಬೋರ: ಯಾಕ್ರಪ್ಪಾ?... ತಾವೇರ್ರವ್ವಾ! 


ವೆಂಕಮ್ಮ: ನಿನಗೇ ಸಂಬ್ಳದ್ ಗಿಂಬ್ಳದ್ ಮೇಲೆ ಕಣ್ಣಿರೋದಾದ್ರೆ, ಇದನ್‌ ಮಟ್ಟಿಗೆ 

ಮರಿಬೇಡ... (lnsistently) ಈ ಮನೆಗೆ ಯಜಮಾನ್ರು ಒಬ್ರೆ, ಅದ್ನಾನು! ಅರ್ಥವೇನೋ ? 


ಬೋರ: ಊರ್ರವ್ವಾ 


ವೆಂಕಮ್ಮ: ಹಾಗಾದ್ರಿಡು ಕೆಳ್ಗೆ! 


ಬೋರ: (ಬುಟ್ಟಿಯನ್ನಿಳಿಸಿ ತರ್‍ಕಾರಿಗಳನ್ನು ವಿಂಗಡಿಸುವನು.) 


ವೆಂಕಮ್ಮ: ಬಾಕಿ ಚೆಲ್ರೆಯೆಲ್ಲೋ? 


ಬೋರ: ಇಕ್ಕೋಳ್ಳಿರವ್ವಾ. 

 

[ಚಿಲ್ಲರೆಯನ್ನು ನೆಲದ ಮೇಲಿಡುವನು] 


ವೆಂಕಮ್ಮ: ಸರಿ... ಹೋಗು , (ಬೋರನು ನಿಷ್ಕ್ರಮಿಸುವನು) (with in far Away look 

around) ನನ್ನ ಕೈಪೆಟ್ಟಿಗೆ ಬೀಗದ ಕೈ ಎಲ್ಲೀ..? 


(ಹುಡುಕಲು ಎದ್ದು ಒಳಗೆ ಹೋಗುವಳು] 


ರಾಮಣ್ಣ (ಪ್ರವೇಶಿಸಿ, ಹಠಾತ್ತಾಗಿ] ಬೋರಾ!!! 


ಬೋರ: (ಓಡಿ ಬಂದು) ಬುದ್ಧೀ ! 


-------------------------------------------


ರಾಮಣ್ಣ; ಇದೇನೋ ಇದೂ? 


ಬೋರ: ಯಾಕ್ಬುದ್ಧೀ? ತರ್ಕಾರೀ ಬುದ್ಧೀ! 


ರಾಮಣ್ಣ: ಕಣ್ಕಾಣುತ್ತೇ?... ಹಾಗಾದ್ರೆ ಕಿವೀನು ಕೇಳಿಸ್‌ಬಹುದು!... ಆ ಹೊತ್ತೇನನ್ಹೇಳ್ದೆ 

ನಿನಗೆ....? 


ಬೋರ: ತಾರ್ಕಾರೀ: ಇಂದಿನ ಕೋಣೇ ಒಳ್ಗೆ ಇಡ್ಬೇಕೂ... ಅಂ... ತಾ... ಬುದ್ಧೀ. 


ರಾಮಣ್ಣ: ಮತ್ಯಾಕೋ ಇಲ್ಲಿದೇ ? 


ಬೋರ: ಯಜಮಾನ್ರು.... ಇಡ.... ಬೈಯಿದು... ಅಂ... ತಂದ್ರು ಬುದ್ದಿ! 


ರಾಮಣ್ಣ ಇಡಬಾರದು ಅಂತೇಳಿದ್ದೇನೆ ನಾನು! ಇಡಬೈದು ಅಂತ್ಯಾರೋ ಹೇಳಿದ್ರು? ಈ 

ಮನೇಗೆ ಎಷ್ಟು ಜನಾನೋ ಯಜಮಾನ್ರೂ? 

 

ಬೋರ: ಒಬ್ಬರೇ ಒಬ್ಬರು ಬುದ್ದಿ! ಅಮ್ಮಾವ್ರಳವರೆ... ಅದೂ ತಾವೇ... ಅಂತ. 


ರಾಮು: (with great relief; triumphantly) ಹಾಗಾದರೆ ಒಪ್ಪೋಂಡ್ರು... 

ನಾನ್ಮನೆಯಜಮಾನ್ನೂಂತ! 


ಬೋರ: ಅಲ್ಲ ಬುದ್ಧೀ !.... ತಾವೇ... ತ್ತಾವೇ... ಅಂತ. 


ರಾಮಣ್ಣ: I see! There is only one master in the house and that is the mistress!! 

ಇನ್ ನನ್ಮಾತ್ ಸುಳ್ಳಾಗ್ದಿರೋಕೇ ಆ ಮುಂದಿನ್ಗೇಟ್ಬಾಗಲ್‌ನಾ, ಹಿತ್ತಲ್‌ ಬಾಗಲ್‌ಗ್ಹಾಕಿಸ್‌ಬಿಡು... 

ತೊಲಗು! ನೀನ್ ನನ್ ಕಣ್ಣೆದುರ್ಗೆ ಇರಬೇಡ! 


[ಬೋರನ ನಿಷ್ಕಮಣ] 


(collapsing into a chair)... ಹೀಗೆ ಜವಾನ್ರೆದಿರ್‌ಗೆಲ್ಲಾ ಹೀಯಾಳ್ಸೋಕೆ ಷುರುವು 

ಮಾಡಿಬಿಟ್ಟಳಲ್ಲಾ!... What about my position? ಇಷ್ಟಕ್ಕೂ marriageನಲ್ಲಿ ಕಣ್ಬಿಡೋಕೆ 

ಅರಿಯದ ಕೂಸಾಗಿದ್ದು... awfully simple ಆಗಿದ್ದೋಳೂ ಈಗ... she has become simply 

awfulಉ ! ಈ ಬಾಬುತು್ ಗಾನಾ ಬೈಲಿಗೆ ಬಿತ್ತೋ ಬೋಳಿಸ್‌ದ್ಹಾಗೇ ನನ್ನ reputationoo. I 

know what it is! She has non-entetised me! ಈಗ್ಲೇ assert ಮಾಡಿಕೊಂಡ್‌ನೋ ನನ್ನ 

positionನ್ನಾ ?, ಬದಿಕ್ದೇ!... ಇಲ್‌ದಿದ್ರೋ ? I shudder to think what may  happen!!... oh! 

Eight o'clock!... still no coffee! Good... excuse!... ಲೇ!!!  


[Sail in ವೆಂಕಮ್ಮ] 


ರಾಮಣ್ಣ: (ಕಿರುಚುತ್ತಾ) ಘಂಟೆ ಎಷ್ಟೇ?...?... 


ವೆಂಕಮ್ಮ: (ಸ್ವಗತ) ಸರಿ!... ಬೆಳಕ್ಹರಿಯೊ ಹೊತ್ತಿಗೆ ಪ್ರಾರಂಭಿಸಿಬಿಟ್ಟರೆ ಹೀಗೆ... ಇನ್ನು ಸಂಜೆ 

ಹೊತ್ತಿಗೆ ಸೂರು ಮುರುದುಬಿಡುತ್ತೋ ಏನೋ ಕಾಣೆ.... ಇದನ್ನೀಗ್ಲೇ ಅಡಗಿಸಿ ಬಿಡಬೇಕು ! 

(ಪ್ರಕಾಶ)... ಏನದ್ ಕೇಳಿದ್ದೂ? 


ರಾಮಣ್ಣ ಅಲ್ಲ... ಘಂ...ಟೆ... ಎಷ್ಟೂಂತ ಕೇಳಿದ್ದು...

------------------------------------------


ವೆಂಕಮ್ಮ: ನನ್ಕೇಳೇನ್‌ಪ್ರಯೋಜನ? ನನಗ್ಗಡಿಯಾರ ಕೊಂಡ್ಕೊಡೋ ಯೋಗ್ಯತೆ ನಿಮಿಗೆ 

ಬಂದಾಗ ಕೇಳಿದರೆ ಸಾಲ್ದೇನೋ?... ಗಜದ ಹಾಗೆ ತಾವೆ ಗಡಿಯಾಕ್ಕೆ ತಕ್ಕ ಸರಪಣಿ ಹಾಕ್ಕೊಂಡು 

ಜೇಬಿನಲ್ಲಿಡ್ಕೊಂಡು ನನ್ನ ಕೇಳುತ್ತೆ ಗಂಡಸು, ಘಂಟೆ ಎಷ್ಟು ಅಂತ! 


ರಾಮಣ್ಣ: ಘಂಟೇ... ನನಗ್ಗೊತ್ತೂ....? 


ವೆಂಕಮ್ಮ: ಗೊತ್ತಿದ್ದೂ ಕೇಳಿದಿರಾ! ಇದೇನ್ ಅತಿ ಬುದ್ದಿಯೋ?... ಹುಚ್ಚೋ ? ಗಂಡಸಿಗೇನ್ 

ಎರಡೂ ಒಂದೇ...! 


ರಾಮಣ್ಣ: ಅಲ್ಲಾ... ಆ... ಕಾಫಿಗ್ಯಾಕಿಷ್ಟ್ಹೊತ್ತೂ....ಂತ..... 


ವೆಂಕಮ್ಮ: ಕಾಫೀಗ್ಯಾಕಿಷ್ಟ್ಹೊತ್ತಾಯ್ತೂ ಅಂತ ಕೇಳೋಕೆ.. ಇಷ್ಟೊಂದು ಬಳಸ್‌ಕೊಂಡು 

ಬಳಸ್ ಕೊಂಡು ಪ್ರಶ್ನೆನೋ ?... ಲಾಯರಿ ಅಲ್ವೇ ಲಾಯರಿ... ಇಷ್ತ್ಹೊತ್ತೇನೂ?... ಹಾಲ್ನೋನು 

ಎಷ್ಟ್ಹೊತ್ತಿಗೆ ಬರ್ತಾನೊ ಅಷ್ಟ್ಹೊತ್ತಿಗೇ.... ಹಿಂದಿನಾರ್ತಿಂಗಳ ಲೆಖ್ಖಾನೂ ಬಾಕೀ ಇಟ್ಗೊಂಡು, 

ಬೆಳ್ಳಂಬೆಳಕು ಹರಿಯುತ್ತಲು ಸರಸರಾಂತ ಬಂದು ಸುರಿದ್ ಬಿಟ್ಟು ಹೋಗೋಂದ್ರೆ ಎಲ್ಲಾಗುತ್ತೆ....? 

ನಿಮ್ಮ ಚಾಟೂಕ್ತಿಗಳಿಗೆಲ್ಲಾ ಚಪ್ಪಾಳೆ ತಟ್ಕೊಂಡು ಕುಣೀತಿರೋಕೆ ನನಗೆ ಬಿಡುವಿಲ್ಲಾ! ಕೆಲಸಗಳ್ 

ಬೇಕಾದಷ್ಟು ಬಿದ್ದಿವೆ.... ತಕೊಳ್ಳಿ! 

[ಕಾಫಿ ಚೊಂಬು-ಲೋಟಗಳನ್ನು ಮೇಜಿನ ಮೇಲೆ ಕುಕ್ಕುವಳು.] 


ರಾಮಣ್ಣ (ಕಾಫಿಯನ್ನು ಲೋಟಕ್ಕೆ ಬಗ್ಗಿಸಿನೋಡಿ) ಏನೇ ಇದು...  ಆ.... ಏನೇ ಇದು ಈ 

ಕಾಫಿ ಬಣ್ಣಾ...? 


ವೆಂಕಮ್ಮ: ಬಣ್ಣವೇನು, ಕಾಫಿ ಬಣ್ಣ! ಬೆಳ್ಳಂಬೆಳ್ಳಗೂ ಇರಬೇಕೂ, ಕಾಫಿಂತಲೂ 

ಆಗಬೇಕುಊಂದ್ರೆಲ್ಲಾಗುತ್ತೆ.... ಏನು ಕಷಾಯಕ್ಕೆ ಹಾಲೋ ಹಾಲಿಗೆ ಕಷಾಯವೋ ?... ಈ 

ಹೊತ್ತೇನು ಬಣ್ಣಾಂತ ಪ್ರಾರಂಭಿಸ್‌ಬಿಟ್ಟ್ರೀ ? ಆ ಹೊತ್ತು ಬೆಂಡೋಲೆ ಮಾತೆತ್ತಿದಾಕ್ಷಣವೇ 

'ಮಿಕ್ಕೋರ್‌ ನೋಡಿ ಸಂತೋಷ್ಪಡೋಕೆ ನಮ್ಮ ಕೈಯಿಂದ್‌ ಕಾಸ್ತೆತ್ತು ಕೊಂಡ್‌ಕೊಂಡು  

ಯಾಕ್ತಗಲಿಸ್ಕೋಬೇಕ್ ಕಿವೀಗೇ ? ತನ್ ಕಿವೀಲಿರೋದು ತರಪಾಗಲೀ ಹರಳಾಗಲೀ ತನ್ನೋಡಿ 

ಸಂತೋಷ್ಟಡೋಕೆ ಕಿವೀಳೇನೂ ಕಣ್ಣಿಡಲಿಲ್ಲಾ ಭಗವಂತಾ'ಂತಂದ್ರಲ್ಲಾ!... ಈಗ, ಅದೇ ಭಗವಂತಾ 

ಕಾಫಿ ಬಣ್ಣಾ ನೋಡಿ ಆನಂದ್ಪಡೋಕೆ ಹೊಟ್ಟೆ ತುಂಬ ಕಣ್ಣುಗಳು ಹೂತಿಟ್ಟಿದಾನೇನೋ !.. ಕ್ಕುಡೀರಿ 

ಅಂದ್ರೆ... ಓಹೋ! 


ರಾಮಣ್ಣ: ... ಏನ್... Terribleಏ... ನಿನ್ನ tongueoo! 


(ರಾಮಣ್ಣನು, ವೆಂಕಮ್ಮನು ಕೊಟ್ಟ ಕಾಫಿಯನ್ನು ಒಂದು ಗುಟುಕು ಕುಡಿದು, ಅದರ 

ರುಚಿಯನ್ನು ವದನದಲ್ಲಿ ವ್ಯಕ್ತಿಸುವನು.) 


ವೆಂಕಮ್ಮ: ಇದೇನು?... ಏನಿದು ಮೊರೆ ವಿಕಾರ?... ಕುಡಿಯೋದೇನ್ ಕಾಫೀನೋ 

ಕೈಯೆಣ್ಣೇನೊ? 


ರಾಮಣ್ಣ: ಅಲ್ಕಾಣೇ ... ಕಹಿ! ಸಕ್ಕರೆ ! ಸಿಹಿ... ಉಂ... 


ವೆಂಕಮ್ಮ: ಎಷ್ಟ್ಹೊತ್ತೂಂತ ಎಗರಾಡಿದ್ದಾಯ್ತು. ಬಣ್ಣ ನೋಡಿ ಬಡುಕೊಂಡಿದ್ದಾಯ್ತು. ಈಗ 

“ಕಹಿ...ಸಿಹಿ... ಅಂತ್ಹೇಳೋಕೇ... ನರ ಇದೆಯೇನೊ... ಗಂಡಸ್ಗೆ... ನಾಲ್ಗೇಲಿ....??" 

--------------------------------------------


ರಾಮಣ್ಣ ಲೇಏ!!... ನಾನ್ನಾಲ್ಗೇಲಿ ನರವಿರೋದು ಹಾಗಿರ್ಲೇಏ! ... ನಿನ್ನ ಬಾಯಿಗೆ 

brake ಏನಾದರೂ ಇದೆಯೇನೇ!... What a metalic mouth ಏ ನಿಂದೂಊ...?  


ವೆಂಕಮ್ಮ: ಇದೊಂದು ಜಾಣತನ ಗಂಡರ್ಸದು! ಚರ್ಚೆಗೆ ಮಾತು ಹೊರಡದಿದ್ರೆ ಸರಿ... 

ಇಂಗ್ಲೀಷು!... 

[Exiting: to Bora]- ಬೊರಾ! ರಾಯರು ಕೋಣೇ ಬಿಟ್ಟ್ಹೋದಾಗ ಹೇಳೊ ನನಗೇ ! 

 

[ನಿಷ್ಕ್ರಮಣ] 


ರಾಮಣ್ಣ: Too lateು? Hಹಾಗಾದರೆ too lateoo? ಈ tigress tame ಮಾಡೋದು 

too lateoo!! 

 

[ರಾಮಣ್ಣನು ಅವಾಕ್ಕಾಗಿ ಅವಳು ಹೋದ ಕಡೆಯನ್ನೇ ಎವೆಯಿಕ್ಕದೆ ನೋಡಿ, ನಂತರ 

ಹತಾಶನಾಗಿ ತಲೆಯನ್ನು ನಿಧಾನವಾಗಿ ಮೇಜಿನಮೇಲೆ ತಗ್ಗಿಸುವನು.]



ದೃಶ್ಯ ೫ 

ಸ್ಥಾನ: ಅದೇ 


(ಮಾರ್ಕೆಟ್ಟಿನಿಂದ ತಂದ ತರಕಾರಿಯನ್ನು ಮುಂದಿಟ್ಟುಕೊಂಡು] 


ವೆಂಕಮ್ಮು: ನಾರಾಯಣಾ! ಈಳಿಗೆ ಮಣೆ ತಕ್ಕೊಂಡ್ಬಾರೋ... ಹಾಗೇನೇ ಒಂದಡಕ್‌ನೊಳಗೆ 

ನಿರೂನೂ... 


ನಾರಾಯಣ: ತರುವನು) 


ವೆಂಕಮ್ಮ: ನಿನ್ಕಾಫೀ ಅಂಗ್ಡೀಯೆಲ್ಲಾ ಯೆತ್ತಾಯ್ತನು ? 


ನಾರಾಯಣ: ಇಲ್ಲಮ್ಮ 


ವೆಂಕಮ್ಮ: ಯಾಕೆ ? ಎಂಟ್ಘಂಟ್ಯಾಗಿಲ್ವೇನು ಇನ್ನೂ? 


ರಾಮಣ್ಣ (ಒಳಗಿನಿಂದ) ನಾರಾಯಣಾ! 


ನಾರಾಯಣ: ಇದೋ ಬಂದೆ ಸ್ವಾಮಿ! 

[ನಿಷ್ಟಮಣ] 


ವೆಂಕಮ್ಮ: ಇದೇನ್ಗಲಾಟೆ ಆಫೀಸು ರೂಂನಲ್ಲಿ? 


ನಾರಾಯಣ: (ಪ್ರವೇಶಿಸಿ) ಆಮ್ಮಾ ನಾಲ್ಕ್ಜನಕ್ಕಾಫೀ ಆಗ್ಬೇಕಂತೆ 


ವೆಂಕಮ್ಮ: ಗೊತ್ತು! ವರುಷ್ವೆಲ್ಲಾ ಇಲ್ಲದ ಸ್ನೇಹೋಪಾಚಾರಗ್ಳೆಲ್ಲಾ ಈ ಎಲೆಕ್ಷನ್ ಕಾಲ 

ಬಂದ್ರೆ ಷುರು! ವೋಟುಗಳ ಬೇಟೆಯೇನೋ! ಹೀಗೆ ಕಾಫಿ ಕೊಟ್ಟು Carನಲ್ಲಿ ಕೂಡಿಸ್ಕೊಂಡೋಗಿ 


---------------------------------


ಕಸುಕೊಂಡ ವೋಟುಗಳಿಂದ ಬಂದ ಕೌನ್‌ಸಿಲ‌ರ್‌ ಕೆಲಸವಿಲ್ದಿದ್ರೇನ್ನಷ್ಟವೋ ಕಾಣೆ !... ಈಗಿನ್ನಿಷ್ಟ್ಜನಕ್ಕೆ 

ಪುಡಿ ತಂದೂ... 


ನಾರಾಯಣ: ಪುಡಿ ಇದೇಮ್ಮ ಡಬ್ಬದಲ್ಲಿ! 


ವೆಂಕಮ್ಮ : ಡಬ್ಬದಲ್ಲಿ ಪುಡಿ ಇದೆ ಗೊತ್ತು. ನಾಳೆ ಕಾಫೀಗೆ... ಮನೇಗೆ, ನಿನ್ಕಾಫೀ ಅಂಗ್ಡಿ 

ಎತ್ತದ್ದೊಳ್ಳೇ ಕೆಲಸವಾಯ್ತು. ಆ ಸೋದಿಸಿದ್ಬಟ್ಟೇ ಮೇಲೆ ಒಂದ್ದಾರಿ ಹಾಕಿದ ಪೌಡರ್ನ ಮರ್ಳೋ 

ನೀರ್ನ್ನಲ್ಯಾಕಿ ತಿರಗ್ಮರ್‍ಳಿರ್ಸಿ ಸೋದ್ಸಿ, ಒಂದಷ್ಟು ಹಾಲ್ಹಾಕಿ ಹೋಗ್ಸುರಿ! ಸಕ್ರೆ ಜಾಸ್ತಿ ಹಾಕು, ಏನೂ 

ಗೊತ್ತಾಗೋದಿಲ್ಲ. ಇನ್ನಾಳೆಯಿಂದ ಆವತ್ತಾವತ್ತ್ಹಾಕಿದ ಪುಡೀನ್ನೆಲ್ಲಾ ಮಧ್ಯಾಹ್ನ ಬಿಸಿಲ್ಮಾಡೀಲಿಟ್ಟು 

ಡಬ್ಬಲ್ದಾಕಿಡು. ಮಾರನೇ ದಿನದ ಎಲೆಕ್ಷನ್ ಕಾಫೀಗೆ-ಈ ವೋಟುಗಳ ಬೇಟೆ ನಿಲ್ಲೋವರೆಗೆ, 

(ನಾರಾಯಣನು ಹೊರಡುತ್ತಿರಲು) ಇಲ್ಲಾ... ಈ ವೋಟುಗ್ಳು ಸಂಪಾದಸೋ ವಿಜೃಂಭಣೇಲಿ 

ಮೈರ್ಮರ್ತೋಂದ್ವೇಳೆ ಊಟಕ್ಕೆ ನಿಲ್ಸಿದ್ರೂ ನಿಲ್ಸ್ಯಾರು;  ಒಂದ್ವೇಳೆ ಅವರಿರೋಪಕ್ಷಕ್ಕೆ ದಪ್ಪಕ್ಕಿಹಾಕು 

ಎಲ್ರಿಗೂ, ಬಂದ ಸ್ನೇಹಿತರ್ಗೆಲ್ಲಾ ಸಣ್ಣಕ್ಕೀಲ್ಸಮಾರಾಧ್ನೆ ಮಾಡಿದ್ರೆ ಮೂರ್ದಿನ್ಹಲ್ಲಿ ಮನೆ 

ಮಾರ್‍ಕೊಡ್ ಮೈದಾನದಲ್ಲಿ ನಿಲ್ಲಬೇಕಾಗುತ್ತೆ ಕೈಚಾಚ್ತಾ...! 


ನಾರಾಯಣ: ದಪ್ಪಕ್ಕಿ ರಾಯರ ಮೈಗಾಗೊದಿಲ್ವಮ್ಮಾ? 


ವೆಂಕನ್ನು: ಗೊತ್ತು. ಅವರಿಗ್ಮಟ್ಟಿಗೊಧೀ ಅಕ್ಕಿ ಹಾಕ್ಬಿಡು-ಅನ್ನಾನ್ನೋಡಿ ಡಯಾಬಿಟಿಸ್ಸೂಂತ 

Diabetes) ಹೇಳ್ಕೊಳ್ಳೋ ಜಾಣ್ತನವಿದೆ  ಅವರಿಗೆ. 

 

ನಾರಾಯಣ: (Hesitatingly) ತುಪ್ಪಾಮ್ಮಾ? 


ವೆಂಕಮ್ಮ: ಏನ್ತುಪ್ಪಾಮ್ಮಾ? 


ನಾರಾಯಣ: ಗೊತ್ತಿಲ್ದೆ ಹ್ಯಾಗ್ಬಡಿಸೋದಮ್ಮ? 


ವೆಂಕಪ್ಪು: ದೊಡ್ಮಿಳ್ಳೇಲಿಕಾಸಿತ್ತುಪ್ಪ ತುಂಬ್ಕೊಂಡು ಅಂಗ್ಡೀತುಪ್ದಡಕ್ನಲ್ಲಿ ಭದ್ರವಾಗಿ ಹಿಡ್ಕೊಂಡು , 

ಮಿಳ್ಳೇದ್ರಾಯರಿಗೆ ಬಡ್ಸಿ, ಮಿಕ್ಕೇರ್ಗಡಕ್ನಲ್ಲಿರೋದ್ಬಡಿಸು. ಯಾರಿಗೂ ಗೊತ್ತಾಗೋದಿಲ್ಲ. ಇದು 

ರಾಯರು ಮೊದಲ್ಕೂತಿದ್ರೆ; ಮಂಕನ್ಹಾಗೆ ಮಧ್ಯದಲ್ಕೂತ್ರೇ ಅನ್ನದಲ್ಲೇ ಕಲ್ಸ್ಹಾಕ್ಬಿಡು. 


ನಾರಾಯಣ: ತರ್ಕಾರಿ ಕೊಂಚ್ವಾಗಿದೆಯಲ್ಲಮ್ಮ?... ಇಷ್ಟ್ಜನಕ್ಕೂ ಪಲ್ಯಕ್ಕೆ ?... 


ವೆಂಕಮ್ಮ: ಹಯ್ಯಯ್ಯೋ! ನಿನ್ಗೆ ತಲೆಯೆಲ್ಲಾ ಬುದ್ಧೀನ್ನೋದು ತುಂಬಿ ತುಂಬಿ ತುಳುಕಿ ತುಳುಕಿ 

ಸುರೀತಿದೆ ಮುಖದಲ್ಲಿ! ಯೋಚ್ನೆ ಏನೋ ? ಒಂದಿಷ್ಟ್ಪಲ್ಯ ಬೇರೆ ತೆಗೆದಿಟ್ಟೂ ಒಂದ್ಹಿಡಿ ಉಪ್ಪು 

ಜಾಸ್ತಿ ಹಾಕಿ ಬಂದೋರಿಗ್ಬಡ್ಸು !... ತಿರಿಗಿ ಕೇಳ್ತಾರೇನೊ ನೋಡೋಣ! ಇಷ್ಟ್ಮಟ್ಗೆ ತಿಳೀದಿದ್ದ 

ನಿನ್ಜಾಣ್ತನಕ್ಕೆ ಬೆಂಕಿ ಹಾಕ್ಬೇಕು, ಇನ್ಹೋಗು !... ತಿರಿಗಿ ಕಾಫೀ ಅಂತ್ಬಡಕೊಂಡಾರು. 


ನಾರಾಯಣಃ (ಸಂಗತ) ಆಬ್ಬಬ್ಬಾ! ನಮ್ಮ ಅಮಾವ್ರಲ್ವೇ ಮಾಡ್ಬೇಕ್ ಲಾಯ್ರಿ ಕೆಲ್ಲ! 

ಪಾವಕ್ಕೀಗೆಷ್ಟು ಅಗ್ಳೂಂತ ಲೆಖ್ಖಾ ಗೊತ್ತಿರೋ ಈ ಯಮ್ಮ ಗಂಡ್ಸಾಗ್ಹುಟ್ಟಿದ್ರೆ ಕಾಡ್ಪಾಲೇ ಅಲ್ವೇ 

ಕಕ್ಷಿಗಾರ್ರು!! 

 

[ನಿಷ್ಕ್ರಮಣ]

------------------------------------------------------------------


ವೆಂಕಮ್ಮ: ಅಯ್ಯೋ ದೇವ್ರೇ ? ಏನ್ಹಣೇಬರ ನನ್ದು! ಹಿಗ್ನಾನ್ ಕಾಸಿಕ್ಕಾಸ್ಕೂಡ್ಹಾಕಿ ಈ 

ಹಾಳ್ಸಂಸಾರಾನುದ್ದಾರ ಮಾಡಿ ಏನ್ಬಂದ್ಹಾಗಾಯ್ತು ನನಗೆ? ಈ ಕಾಲದ್ಹೆಂಗಸ್ರ ಗತಿಯಲ್ಲಾ ಹೀಗೇ ! 

ತಕ್ವಯಸ್ಸಿನ್ಗಂಡ, ಮಕ್ಳೂ, ಬೇಕೂಂದ್ರೆ ಮಾವಳ್ಳೀಲ್ಮನೆ, ಒಪ್ಪತ್ತೂಟ, ಕಡ್ಡೀ ಅಗಲಂಚಿನ ಸೀರೆ 

ದೀಪಾವಳೀಗೆ-ಕತ್ತೀಕ್ಕರೀಮಣಿ!... ಇಲ್ಲಾ?... ಅನ್ನ-ಅಂತಸ್ತು-ಸೀರೆ-ಒಡ್ವೆ-ಈ ಹೆಂಗಸ್ರ ಚಪ್ಲ 

ತೀರ್ಸ್ಕೋಬೇಕೂಂದ್ರೆ ಮೀಸೆನೆರ್ದವನ್ಗೆ ಮದವಣ್ಗಿತ್ತಿ ಆಗ್ಬೇಕು!! ಆದ್ರೆ ಹೆಂಗ್ಸಿಗೇನು-ಮನೆ ಮಾವಳ್ಳೀಲ್ತಾನೇ 

ಆಗ್ಲಿ... ಮಲ್ಲೇಶ್ವರದಲ್ತಾನೇ ಆಗ್ಲಿ ಮನೆ ತುಂಬಾ ಮಕ್ಕನ್ಸಾಕ್ಕೊಂಡ್ಸಂತೋಷಡೋದಲ್ವೆ ಅವಳ್ಹುಟ್ಟಿದ್ದಕ್ಸಾರ್ಥ್ಕ ! 

ನಾನ್ಹೆಂಗ್ಸಾಗಿ ಹುಟ್ಟಿದ್ದಕ್ಕೆ ಮುದ್ದಿಟ್ಸಾಕೋಕೊಂದ್ಮಗೂ ಇಲ್ಲದ್ಮೇಲೆ ಈ ಶನೀಗೆ ಏನಿದ್ರೆ ತಾನೇ ಏನು ? 

(Snivelling)... ಈಗ್ನಂಪುಟ್ಟಾನ್ನಾದ್ರೂ ನಮ್ಮಕ್ಕನ್ಮಗನಿಗೆ ತಂದ್ಕಕೊಂಡು ಮನೇಲೇ  ಇಟ್ಕೊಂಡಿರೋಣಾಂದ್ರೆ 

ಆ ಯೋಚ್ನೇಗೂ ಕಲ್ಬೀಳೊ ಹಾಗಿದೆ-ಈ ಮನೆಮುದ್ಕಿ, ಕೆಂಚೂ ವಿಷಯದಲ್ಲಿ ಹಿಡಿದಿರೋ 

ಹಟಾನ್ನೋಡಿದ್ರೆ! ಕಿಟ್ಟೂಗ್ ಮೂವತ್ತೈದ್ವಯಸ್ಸಾಗ್ತಾ ಬಂತು. ಅವನಿಗೂ ಇಷ್ಟ್ವಿಲ್ಲ-ಇವನ್ನ 

ನಿರ್ಬಂಧಪಡ್ಸಿ ಚಿಕ್ವಯಸ್ಸಿನ್ಹುಡ್ಗೀನ್ಯಾಕ್ಬಲಿಕೊಡ್ಬೇಕೀ ಮುದಿಗೂಬೆಗಳ್ಹುಚ್ಚಾಟ ತೀರ್ಸೋಕೆ ? ಬೇರೆ 

ಯೇನು ನಾಗಮ್ಮನಾಸ್ತೀ ಎಲ್ಲಾ ಈ ಮನೆಗೆಳ್ಯೋಕೆ!! 

[ಪ್ರವೇಶ ಸುಬ್ಬಮ್ಮ] 


ಸುಬ್ಬಮ್ಮ: ಲೇ! ಏನ್ಮಾಡ್ತಿದ್ದೀಯಾ? 


ವೆಂಕಮ್ಮ: (half sneeringly)... ಕೂತ್ಕೊಂಡು ಬರೀಕೈ ಬೀಸ್ತಿದೇನೆ. 


ಸುಬ್ಬಮ್ಮ: ಅಲ್ಲಾ! ಸುಮ್ನೆ ಕೇಳಿದ್ದಕ್ಕಿಷ್ಟು ಪ್ರಸಂಗವೇ ? 


ವೆಂಕಮ್ಮ: ಕಣ್ಬಿಟ್ನೋಡೀ ತಿಳ್ಕೊಬೇಕಾದ್ವಿಷ್ಯಾನಾ ಬಾಯ್ಬಿಟ್ ಕೇಳಿದ್ರೆ ಪ್ರಾರಂಭ್ವೇ 

ಆಗುತ್ತೆ... ಪ್ರಸಂಗ! 


ಸುಬ್ಬಮ್ಮ: (ಸ್ವಗತ) ಸರಿ... ಈ ಪಿಶಾಚಿ ಬಾಯ್ಕೆದ್ರಿ ಬದುಕೋರ್ಯಾರು! (ಪ್ರಕಾಶ) ಆ 

ವಡ್ವೆಗಳ್ಟಿಷ್ಯಾನೇನ್ಮಾಡಿಟ್ಟಿಧೀಯಾ? 


ವೆಂಕಮ್ಮ: (ತಿಳಿಯದ ಹಾಗೆ ನಟಿಸಿ) ಯಾವ್ವೊಡ್ವೆಗಳ್ಟಿಷ್ಯಾ? 


ಸುಬ್ಬಮ್ಮ: ಬೀಗ ಹಾಕಿಟ್ಟಿದ್ದೀಯಾ? ಚನ್ನಾಯ್ತು! ಮದುವೇಗೆ ಇನ್ನೆರ್ಡು ತಿಂಗುಕೂಡ 

ಇಲ್ಲಾ! ಈಗ್ಲೆ ಕೊಟ್ರೆ ತಾನೆ ಮದ್ದೆ ಹೊತ್ಗೆ ಚಿಕ್ಕದ್ಮಾಡಿ ತರ್ಸ್ಬಹುದು ? 


ವೆಂಕಮ್ಮ: ಚಿಕ್ಕದ್ಮಾಡೋದು! ಯಾಕೋ ಕಾಣೆ! ನೀವೇಳೋದ್ ನನಗರ್ಥವಾಗ್ಲಿಲ್ಲ!  


ಸುಬ್ಬಮ್ಮ: (ಘಟ್ಟಿಯಾಗಿ) ಯಾಕ್ಚಿಕ್ಕದ್ಮಾಡ್ಸೋದೇ? ನಂಕೆಂಚೂ ಕುತ್ತಿಗ್ಗೆ ಕೈಗಳ್ಗೆ 

ಸರಿಹೋಗೋದಕ್ಕೆ... ಆ ಹೊತ್ತೇ ಹೇಳಿಲ್ವೇ ನಾನು-ನಿನ್ಗಂಡ್ನೆದುರ್ಗೇ ? ಆಕ್ಸಾಲೇನ್ ಕರ್ಸೂಂತಾ? 


ವೆಂಕಮ್ಮ: ನನ್ಕಿವೀಗ್ಬೀಳ್ಳಿಲ್ವೇನೋ! ಆ ಹೊತ್ತೊಂದ್ವೇಳೆ ನಾನ್ಕಿವ್ಡೋ ಏನೋ ಕಾಣೆ... ಆದ್ರೆ 

ನನಗೀಗ್ಲೂ ಅರ್ಥವಾಗಿಲ್ಲ-ನಿಂ ಕೆಂಚೂಗೂ ನಂ ಪುಟ್ಟಾನ್ತಾಯಿ ಒಡೆಗಳಿಗೂ ಇರೋ ಸಂಬಂಧ! 

ಕಿಟ್ಟೂಗೆ ಕೆಂಚನ್ತಂದ್ಕೊಂಡು ಮದ್ವೇ ಮಾಡ್ಕೊಳ್ಳೋದ್ನಿಮ್ಮಿಷ್ಟ. ಆದ್ರೆ ಅವಳ್ಹಾಕ್ಕೊಂಡ್ ನಲ್ದಾಡೋಕೆ

-------------------------------------


ನಂ ಪುಟ್ಟಾನ್ತಾಯಿ ಒಡವೆಗಳಲ್ಲೊಂದು... ತಿರುಪ್ಳಿಕೂಡಾ ಪೆಟ್ಗೇಯಿಂದ್ಹೊರಕ್ಹೊರ್ಡೋದಿಲ್ಲ... 

ಈ ಮಾತ್ಖಂಡಿತ! 


ಸುಬ್ಬಮ್ಮ: (hysterically) ಖಂಡಿತ! ಖಂಡಿತ! ಇದ್ಯಾರು ಯಾರ್ಹತ್ರಾಡೋ ಮಾತು! ನೀ.... 


ವೆಂಕಮ್ಮ: (ಅಡ್ಡಮಾತನಾಡಿ) ಯಾರ್ಯಾರ್ಹತ್ರಾಡೊ ಮಾತೂಂತ ತಿಳಿದೇ ನನ್ಕೇಳ್ತೀರಾ! 

ಇಲ್ಲ ನನ್ನ ಈಹೊತ್ಕಣ್ಬಿಟ್ಟ ಹಸುಮಗೂಂತ ಹೆದ್ರಿಸಿ ಹೇಳ್ಕೊಡ್ತೀರಾ ನನಗೆ! ಪುಟ್ಟಾ ತಾಯಿಯಿಲ್ದ  ಮಗುವಾದಾಕ್ಷಣಕ್ಕೆ.... ಹೇಳೋರ್ ಕೇಳೊರಿಲ್ಲಾಂತಂದ್ಕೊಂಡು ... ಅವಳ್ತಾಯೀ ವಡ್ವೆಗಳ್ನ 

ಯೋಗ್ಯತೆ ಇಲ್ದ ಬೀದೀಲ್ಹೋಗೋ ಚಿಳ್ಳೆ ಪಿಳ್ಳೆಗಳೆಲ್ಲಾ ಬಾಚ್ಕೊಡೋದೆ? 


ಸುಬ್ಬಮ್ಮ: (ಚೀತ್ಕರಿಸುತ್ತಾ) ಏನಂದೆ? ಯೋಗ್ಯತೆ ಇಲ್ದ ಚಿಳ್ಳೆಪಿಳ್ಳೇನೇನೇ ನಂಕೆಂಚೂ ! 

ಅವಳ್ಯೋಗ್ತೆ, ಅಂತಸ್ತ್ನಲ್ಲಿ ಅರ್ಧವಾದ್ರೂ ನಿನ್ಗಿದ್ದಿದ್ರೆ... ದೊಡ್ಡೋಯ್ಯೋಚ್ನೇನ ಇಷ್ಟು ನಿರಾಕರಿಸ್ತಿದ್ದಿಯಾ 

ನೀನು? 


ವೆಂಕಮ್ಮ: (Sluperciliously) ಹಾಗಷ್ಟ್ಯೋಗ್ತೆ ಅಂತಸ್ತು ನಿಮ್ಮೆಂಚೂಗೆ ಇದ್ಪಕ್ಷದಲ್ಲಿ 

ಅವರ್ಮನೆಯಿಂದ ದೊಡ್ ದೊಡ್ ನಗಗಳ್ನ್ಹಾಕ್ಕೊಂಡ್ ಬಂದು... ನಿಗಿನಿಗಿನಿಗೀಂತ್ನಲೀಲಿ!... 

ಯಾರು ಬೇಡಾಂದ್ರು?! ನ೦ಪುಟ್ಟ! ಪಾಪ! ತಾಯಿ ಇಲ್ಲದ್ಮಗೂ, ಅವಳ ತಾಯಿ ಜ್ಞಾಪ್ಕಕ್ಕಾದ್ರೂ 

ಇಟ್ಕಂಡಿರೋ ಒಂದೆರಡು ಒಡ್ವೇನ ಸುಲ್ಕೊಂಡದ್ರಿಂದ ಏನ್ಬಂದ್ಹಾಗಾಯ್ತು ನಿಂ ಕೆಂಚೂಗೆ?  


ಸುಬ್ಬಮ್ಮ: ಈ ಮಹಾ ವೊಡ್ವೆಯಿಂದೇನ್ಬಂದ್ಹಾಗೂ ಆಗೋದಿಲ್ಲಾ! ಆದ್ರೆ ಮನೆ ಒಡ್ವೆಗ್ಳು 

ಮನೇಲೇ ಇದ್ಬಾಳೊ ಸೊಸೆಗ್ ಕೊಡೋ ಸಂಪ್ರದಾಯ್ವೇ ಹೊರ್ತು... ಮನೆಬಿಟ್ 

ಮಾವನ್ಮನೇಗ್ಹೋಗ್ಬಿಡೋ ಮಗಳಿಗಲ್ಲ ಕೊಡೊ ಪದ್ಧತಿ! 


ವೆಂಕಮ್ಮ: (With a Sarcastic smile) ನೀವ್ಹೇಳೋ  ನ್ಯಾಯಾ-ಕುಟುಂಬ್ಬಲ್ಲಿ- 

ವಂಶಪಾರಂಪರೆಯಾಗ್ಬಂದಿರೊ ಒಡ್ವೆಗಳ್ಮಾತು! ಈಗ್ನಿಮ್ಚರ್ಚೆಗೆ ತಗಲ್ಕೊಂಡಿರೋ-ವಡ್ವೆಗ್ಳು- 

ಪುಟ್ಟನ್ತಾಯಿಗೆ ಅವಳ್ತಂದೆ, ಗಂಡ, ಮಾವ ಇವ್ರೆಲ್ರೂ ಅವಳ್ಮೇಲಿನಾಶೇಗ್ಮಾಡ್ಸ್ಹಾಕಿದ್ದು, ಅವು 

ತಿರುಪಾಗ್ಲಿ, ಹರಳಾಗ್ಲೀ-ಹಿತ್ತಾಳೆಯಾಗ್ಲೀ, ಭಂಗಾರ್ವಾಗ್ಲೀ:, ಟೊಳ್ಳಾಗ್ಲಿ, ಗಟ್ಟಿ ಆಗ್ಲೀ-ಹ್ಯಾಗಿದ್ರೂನೂವೆ, 

ಸಂತೋಷ್ದಿಂದ ತಾಯಿ ಜ್ಞಾಪಕಕ್ಹಾಕ್ಕೊಳ್ಳೊ ಮಗಳ್ದೇ ಹೊರ್ತು-ದುರ್ಬಿಣಿ ಹಾಕ್ನೋಡಿ- 

ಒರೆಗಲ್ನಲ್ತಿಕ್ನೋಡಿ... ಅಂದಾಜ್ಹಾಕ್ನೋಡಿ ತೊಟ್ಕೊಂಡ್ಸುಳಿಯೋ ಸೊಸೆ ಸೌತಿಯರ್ದಲ್ಲ! ಹಯ್ಯೋ! 

ಹೀಗೆಲ್ಲಾ ನೀವೂ ನಾನೂ ಕಾದಾಡಿ ಪ್ರಯೋಜವೇನೂ ಇಲ್ಲಾಂದ್ರೆ... ಮನೇಲಿ 

ಯಜಮಾನೊಬ್ರಿರೋವಾಗ! ಅವರಿಷ್ಟ ಹ್ಯಾಗೊ ಹಾಗಾಗುತ್ತೆ. 


ಸುಬ್ಬಮ್ಮ: ನಿನ್ಗಂಡನ್ಗೆಜಮಾನ್ಕೆ ಬೇರೆ ಬಾಕೀ ಇಟ್ಟಿದ್ದೀಯಾ ನೀನು? ನೀನೀ ಮನೇ 

ಹೊಸಲ್ದಾಟಿದ ತಕ್ಷಣ್ವೇ... ಏನ್ಮಂಕ್ಬೂದೀ ತೂರ್ದ್ಯೋಕಾಣೆ... ನೀನ್ಹೇಳ್ದ್ಮಾತ್ಗೆ ಬದಲ್ಹೇಳ್ದೆ 

ಬಪ್ಪಾಗೊಪ್ಕೊಳ್ತಾನೆ... ನಿನ್ಯೋಚ್ನೆಗ್ಳೂ, ನಿನ್ಪಿತೂರಿಗ್ಳೂ ಎಲ್ಲಾ ನನಗ್ಗೊತ್ತಿಲ್ಲಾಂತಿಳ್ಕೊಂಡಿದ್ದೀಯೇನೋ?... 

ನಾ ಬೇಡಾ ಬೇಡಾಂತ್ಬಡುಕೊಂಡ್ರೂನೂ ಕಿಟ್ಟೂಗೆ ನಿಮ್ಮ ಅಣ್ಣನ್ಮಗಳ್ನ ತಂದ್ಕೊಂಡದ್ ನಿನ್ಕೃತ್ತಿಮಾಂತ  ನನಗ್ಗೊತ್ತಿಲ್ವೇನು? ಇಷ್ಟಕ್ಕೂ ಆ ಮದ್ದೇ ಈ ಮನೇಲ್ಯಾರ್ಗೂ ಇಷ್ಟ್ವೇ ಇಲ್ಲ... 


ವೆಂಕಮ್ಮ: (ಅಡ್ಡ ಮಾತನಾಡಿ) ಅವಳ್ವ್ ತಂದ್ಕೊಳ್ಳೋ ಇಷ್ಟ್ವಿಲ್ವೇನೋ! .... ಅವಳ್ಜೊತೇಲಿ...

---------------------------------------


ಈ ಮನೇ ಭೋಗ್ಯಾಬಿಡಿಸ್ಕೊಳ್ಳೋಕ್ ನಂಮಣ್ಕೊಟ್ ಹಣ ಹುಳ್ಳಗಿರ್ಲಿಲ್ವಲ್ಲಾ!? ಈ ಮದ್ದೇ ತಾನೇ 

ಏನು ?... ನಿಮಗ್ಕೆಂಚೂ ಮೇಲಿರೋ: ಮಮ್ತೆ ವಿಶ್ವಾಸಗ್ಳೂ ನನಗ್ಗೊತ್ತಿಲ್ವೇ ? ಈಗ್ನಿಮ್ಮಗನ್ಗಿರೋ 

ಸಾಲಾನ್ತೀರ್ಸೋಕೆ ಬೇಕಾದ ಹಣಾನ, ನಾಗಮ್ಮ ಕೆಂಚೂ ಹೆಗಲ್ಮೇಲ್ಹೇರ್ಸಿ ಹೊರ್ಸಿ ಕಳ್ಸೋದು... 

ನಂಕೆಂಚು? !... ನಂಕೆಂಚೂಂತ!... ಬಿಡ್ಕಾಸಿಲ್ದೆ ಬರೀಕೈಬೀಸ್ಕೊಂಡ್ಬರ್ಲಿ ಮನೇಗೇ.... ಆಗ್ನೋಡ್ತೇನೆ... 

(ಅಣಕಿಸುತ್ತಾ) ನಂ ಕೆಂಚೂ ನಂ ಕೆಂಚೂ ಅಂತ ಕುಣ್ಯೋದ್ನ! 


ವೆಂಕಮ್ಮ: (in a loud whisper), ಸರಿ! ಈ ಚಿತ್ರಾಂಗೀ ಜೊತೇಲ್ಚರ್ಚೆ ಮಾಡೋಕ್ 

ಚರ್ಮದ ಬಾಯಿದ್ರೂ ಸಾಲ್ದು! 


ವೆಂಕಮ್ಮ: ಚಿತ್ರಾಂಗಿ!... ಸರಿ ! ನಾನೊಬ್ಳುಹುಚ್ಚು... ಹೆದ್ರಕೊಂಡ್ ಬಿದ್ದಿದೇನಲ್ಲ. ಈ ಹಲ್ಲಿದ್ದ 

ಹದ್ದುಗಳ್ಗೆ! ನನ್ನ... 


ಸುಬ್ಬಮ್ಮ: ಹಲ್ಬಿದ್ಹದ್ದೂ!... ಯಾರ್ನೇ ಹಲ್ಬಿದ್ಹದ್ದೂಂತೀಯಾ? ಇನ್ನೀ ಮನೇಲ್ಮಾನ್ಮರ್ಯಾದೇ 

ಕಳ್ಕೊಳ್ಳೋಕಿಂತ್ಲೂ ಭಾವೀಲ್ಬಿದ್ಸಾಯೋದ್ಮೇಲು-ರಾಮೂ! ರಾಮೂ! 


ರಾಯಣ್ಣ: (ಒಳಗಿನಿಂದ) ಏನದು... ಬಂದೇ! 


ವೆಂಕಮ್ಮ: ಬರ್ಲಿ! ಬರ್ಲಿ! ಬಂದೇನ್ಮಾಡತ್ತೋ ನೋಡೋಣ! 


ರಾಮಣ್ಣ (Precipitalely ) ಓಹೋ! ಸರಿ ! ತಿರಿಗ್ಷುರುಮಾಡ್ಬಿಟ್ರಾ ಜಗ್ಳಾನ... ಅತ್ತೇನೂ 

ಸೊಸೇನೂ ! ಇದೇನ್ಮನೇನೋ... ಇಲ್ಲ... ಮಾರ್ಕಟ್ಟೋ ಕಾಣೆ...! ಈ ನಿಮ್ಜಗ್ಳತೀರ್ಸೋಕಾದ್ರೂ 

ಇನ್ನೊಂದವ್ತಾರಾನೆತ್ಬಾರ್ದೆ ಜಗದೀಶ !... ಏನ್ಜಗಳ ಇದು? 


ಸುಬ್ಬಮ್ಮ: (hysterically) ಹಬ್ಬಿದ್ದದ್ದೂಂತ ಯಾರ್ನವಳಂದ್ಕೇಳು... ಕೇಳವಳ್ನ... 


ವೆಂಕಮ್ಮ: ಪಿಶಾಚಿ.... ಚಿತ್ರಾಂಗೀಂತಂದ್ಹಾಗಿತ್ತು ಯಾರೊ... ಅವರ್ನ ನಾನಂದದ್ದೂ... 

(ಬರೆದು) ಹಲ್ಲು... ಬಿದ್ದ... ಹದ್ದೂಂತ... 


ಸುಬ್ಬಮ್ಮ: ನೋಡ್ದ್ಯಾತಿರ್ಗೂನೂ ನಿನ್ನೆದ್ರಿಗೆ ಬೈತಾಳೆ.... ನಾನಿನ್ನೀಮನೇಲಿರೋದಿಲ್ಲ.... 

ಎಲ್ಲಾದ್ರೂ ದೇಶಾಂತಕಹೊರಟ್ಹೋಗಿ ಪ್ರಾಣಗಳ್ನ ಕಳ್ಕೊತೇನೆ... 

 

ರಾಮಣ್ಣ: (Loudly) ಲೇ... ದೊಡ್ಡೋರ್ನ.... ಹಾಗನ್ಬಹುದೇನೆ ?... ಏನೇ... ದೊಡ್ಡೋರ್ನ... 

ಹಾಗನ್ಬಹುದೇನೆ... (Then Teekly gesticulating) ಲೇ ಹಾಗನ್ಬಹುದೇನೆ ... ದೊಡ್ಡೋರ್ನ ? 

 

ವೆಂಕಮ್ಮ: ಸರಿ ! ಸೇರ್ಬಿಟ್ರಾ ನೀವೂನೂ! ಈ ಮನೇಲಿನ್ನೇನ್ಕೆಲ್ಸ ನಂಗೆ... ಬದ್ಕಿ! ಬದ್ಕಿ! 

ನೆಮ್ಮದಿಯಾಗಿ ಬದ್ಕಿ! ತಾಯೀನೂ... ಮಗ್ನೂ... ಬೋರಾ! ನನ್ಟ್ರಂಕ್ನೂ ಹಾಸ್ಗೇನೂ ಹೊರಗ್ಜಗ್ಲೀಮೇಲಿಟ್ಟು 

ಒಂದ್ಜಟ್ಕಾನ ಹೊಡ್ಕೊಂಬಾರೋ! 


[ಬೋರನು ಬಂದು ಹೋಗುವನು] 


ರಾಮಣ್ಣ: ಹಯ್ಯಯ್ಯೋ... ನೀನೆಲ್ಹೋಗ್ತೀಯೇ ನನ್ಬಿಟ್ಬಿಟ್ಟೂ...? 

ವೆಂಕಮ್ಮ: ಬೇರೆಲ್ಲಿಗೆ?... ನಂಮನೆಗೆ!... ಏನ್ಗತೀಕೆಟ್ನಿಮ್ಮನೇಗ್ಬಂದೇನ್ತಿಳ್ಕೊಂಡ್ರೇನು...? 


---------------------------------------


ರಾಮಣ್ಣ: ಹಯ್ಯಯ್ಯೋ ನೀನ್ಯಾಕೇ ಹೋಗ್ಬೇಕೀಗ?... 


ವೆಂಕಮ್ಮ : ಹೋಗ್ದೇ ಬೇರೇನಿಧೆ ಈ ಮನೇಲ್ನನ್ಗೆ?... ನಿಮ್ಮನ್ನ ಮದ್ವೇಯಾಗ್ಬಂದಾಕ್ಷಣ... 

ಇವರ್ಮನೇಲಿರೋ ಮುದಿಗೂಬೆಗ್ಳ? ಬೈಗುಳ್ನೇಳ್ಕೊಂಡ್ಬಿದ್ಧಿರ್ಬೆಕೂಂತ್ಪರ್ದಿದೆಯೇ ನನ್ನಣೇಲಿ? ಅದ್ರಲ್ಲೂ 

ಲಾಯ್ರಂತೆ ಇದು ಒಳ್ಳೆ ಲಾಯ್ರು! ಒಂದ್ಮಾತು... ಒಂದ್ಚರ್ಚೆ... ಒಂದ್ಸಂವಾದ... ಒಂದ್ವಾಗ್ವಾದಾ 

ಜರಗ್ತೂಂದ್ರೆ, ಏನು? ಎತ್ತ? ಯಾರೆನ್ಹೇಳಿದ್ರು? ಮಾತೆತ್ಕಡೆ? ನ್ಯಾಯ್‌ವೆತ್ಕಡೇಂತ ವಿಚಾರಿಸ್ದೇ 

ಕೋಣೇಶ್ವರನ್ಹಾಗೆ ಕೊನೇಗ್ನುಗ್ಗಿ, ಈ ಕಣ್ಣಿಂಗಿದ್ಕಪೋತದ ಕಿರ್ಲಾಟಕ್ ಕಿವಿಕೊಟ್ಕೊಂಡ್ಮೈಮೇಲ್ಬೀಳೋ 

ಮಂಕ್ಮುಚ್ದೀ ಗಂಡ್ಸು, ಲಾಯ್ರಿ ಕೆಲ್ಸ ಬೇರೆ ಮಾಡತ್ತಂತೆ?... ಲಾಯ್ರಿ ಕೆಲ್ಸ! 


ರಾಮಣ್ಣ: ಹಯ್ಯೋ! ಯೆಲ್ಲಾ ವಿಚಾರಿಸ್ತೇನೇ! ನಿನ್ಕೋಪಾನ್ ಸ್ವಲ್ಪ ಅಡಗಿಸಿಕೊಳ್ಳೇ... 

ವಿಚಾರ್ಸಿ ಎಲ್ಲಾ ಫೈಸಲ್ ಮಾಡ್ತೇನೆ! (aside) ಒಳ್ಳೆ ಮರಣ ಸಂಕ್ಟ ಇದು! (to Bora 

who is bringing the trunk and bed) ಲೋ! ತಿರಿಗೊಳಕ್ತಕ್ಕೊಂಡ್ಹೋಗೊ ಮಂಕು! 


ವೆಂಕಮ್ಮ: (to Bora) ಹೊರಗಿಡೊ ಹುಚ್ಚು! 


ಬೋರ: (aside) ಒಳ್ಳೆ ಕಾಟಕ್ತಗಲ್ಕೊಂಡ್ನಲ್ಲಾ! ಒಳ್ಗಿಟ್ರೂ ಜಗ್ಳ! ಒರಗಿಟ್ರೂ ಜಗ್ಳ! ಸರಿ! 

ನರಸಿಂದ್ರೇವ್ರಿಟ್ಟಾಂಗೆ ಒಸಿಲ್ಮೇಲಿಟ್ ಬಿಡ್ತೀನೀ ಕಾಣಪ್ಪ; (Placing the trunk and the bed on 

the door step) ನಮ್ಮನೇಲಿ ನಮ್ಮವ್ವನ ಬೈದ್ಗೀದ್ಲೋ ನನ್ನೆಂಡ್ರು... ಅಪ್ಪಳ್ಸಿಬಿಡ್ತಿದ್ದೆ ನನ್ನೆಂಡ್ರನಾ... 

ಈ ಮನೆಗ್ಳಾಗ್ನ್ಯಾಯ ಅಂಗಲ್ಲ, ಕಾಫೀ ಕುಡ್ಯೋದು... ಕಾದಾಡೋದು... ಕಾದಾಡೂದು.. ಕಾಪಿ 

ಕುಡ್ಯೋದು. 


ರಾಮಣ್ಣ: ಲೇ... ವಿಚಾರ್ಸಿ ನಿನ್ನಿಷ್ಟದ್ಪ್ರಕಾರ ಫೈಸಲ್ಮಾಡ್ತೇನೇಂತ್ಮಾತ್ಕೊಟ್ಮೇಲಿನ್ನೂಕೋಪ್ವೇನೆ 

ನಿನ್ಗೆ? 


ವೆಂಕಮ್ಮ : (Coyly) ಹಾಗಾದರೆ ಹೋಗಿ... ವಿಚಾರ್ಸಿ... ಏನು ಫೈಸಲ್ಮಾಡ್ತೀರೋ... 

ನೋಡ್ಬಿತ್ಹೋಗ್ತೇನದ್ನೂನು ! 

 

ರಾಮಣ್ಣ: (Approaching his mother) ಅಮ್ಮ ! ಯಾವ ಮಾತಿನ್ಮೇಲಮ್ಮ ಹುಟ್ಟಿದ್ದೀಜಗ್ಳ?  ಜಗಳ್ವೇನು... ವಾಗ್ವಾದಾ... ಅಲ್ಲಾ... ಸಂಭಾಷ್ಣೆ? 

 

ಸುಬ್ಬಮ್ಮ: ನಂಗೂ ಅವಳಿಗೂ ಯಾವಾಗ ಜಗಳ ಯಾವ್ಮಾತಿನ್ಮೇಲೆ ಷುರುವಾಗೋದು ? 

ಈ ಮನೆ ಹಾಳಾಗಿ ಅವಳಿಂದ ಕಾಡ್ಪಾಲಾಗೋ ಮಾತನ್ಮೇಲೆ... ಈವತ್ತಿನ್ಕಾದಾಟ ಕಿಟ್ಟೂ ಹೆಂಡ್ತಿ 

ಒಡ್ವೇಗಳ್ಮೇಲ್ಬಂದದ್ದು... ಚಿಕ್ಕದ್ಮಾಡಿ ಕೆಂಚೂ ಬಂದಾಗ ಅವಳ್ಕೈಗೂ ಕುತ್ತಿಗ್ಗೂ ಸರಿಮಾಡಿಟ್ಟಿರೋದೂಂತ 

ಅವತ್ತೇ ಒಪ್ಪೋಂಡ್ಯಲ್ವೇ ನೀನೂ? 


ರಾಮಣ್ಣ: ಹೌದೂ? 


ಸುಬ್ಬಮ್ಮ: ಈಗ್ಕೇಳವಳ್ನ... ಆ ಒಡವೆಗಳ್ನ ಕೆಂಚೂಕ್ಕೊಡೋದಾದ್ರೆ ಒಂದ್ತಿರುಪ್ಳೀ ಕೂಡಾ 

ಹೊರಕ್ಹೊರ್ಡೋದಿಲ್ವಂತೆ .. ಪುಟ್ಟಾ... 

 

ರಾಮಣ್ಣ: ನ೦ಪುಟ್ಟಾ....?

----------------------------------


ಸುಬ್ಬಮ್ಮ : ನಂಪುಟ್ಟಾ ಹೌದು ಆದ್ರೆ ಮರಿಬೇಡ... ನಿನ್ಹೆಂಡ್ತಿ ಅಣ್ಣನ್ಮೊಮ್ಮಗಳೂ ಹೌದೂ. 

ಪುಟ್ಟಾಗೆ ಅವಳ್ತಾಯಿ ಒಡ್ವೆ ಅವಳಿಗೆ ಇಟ್ಟಿರ್ಬೇಕಂತೇ.... ಇದರರ್ಥ ನಿನಗ್ಗೊತ್ತಿಲ್ವಲ್ಲಾ... 

ಹೇಳ್ತೇನ್ಕೇಳು. ಇವಳಿಗೆ ನಾವು ನಂಕೆಂಚೂನ್ತನಂದ್ಕೊಳ್ಳೊದ್ರಲ್ಲಿ ಮೊಟ್ಮೊದ್ಲೇ ಇಷ್ಟ್ವಿಲ್ಲಾ... ಈ 

ಒಡ್ವೆಗಳೆಲ್ಲಾ ಹೀಗೆ ಇಟ್ಕೊಂಡಿದ್ದು... ನ೦ಪುಟ್ಟಾನ... ಅವಳಕ್ಕನ್ಮಗನಿಗೆ ತಂದ್ಕೊಂಡು ... ಆ 

ಒಡ್ವೆಗಳನ್ನೂ... ನಂಮನೇನೂ ನುಂಕೊಂದ್ಹೋಗ್ಬೇಕೂಂತ್ಬಂದಿರೋ ಮಾರಿ, ಇವಳು ! ನಾನೋ... 

ಈವತ್ತಿದ್ದು ನಾಳೆ ಸಾಯೋ ಮುದ್ಕಿ... ಭದ್ರ! ಭದ್ರ! ಭದ್ರ! ಅವಳೋ 

ನಂಕುಟುಂಬಕ್ಕಿಚ್ಚಿಟ್ಹೋಗೊಕ್ಬಂದಿರೋ ಕುಲಕಳಂಕಿ!... ಜೋಕೆ! ಜೋಕೆ !! ಜೋಕೆ !!! ನಿನ್ಗಂಡಸ್ತನಾ 

ಏನಾದ್ರೂ ಅವಳು ಅಲ್ಪ ಸ್ವಲ್ಪ ಬಾಕೀಗೀಕಿ ಇಟ್ಟಿರೋ ಪಕ್ಷದಲ್ಲಿ... ಈ ಕ್ಷಣವೇ ಆ ಒಡ್ವೆಗಳ್ನ 

ಹೊರಕ್ತೆಗ್ದು... ಚಿಕ್ಕದ್ಮಾಡ್ಸಿ... ಕೆಂಚೂ ಕೈಗ್ಹಾಕ್ಬಿಟ್ಟು... ಆಮೇಲೇಳೂಟಕ್ಕೆ! 


ರಾಮಣ್ಣ My God!... This is serious....... 


ವೆಂಕಮ್ಮ: ಸರಿ... ಇವರ ಮೈಗಾಡೂ, ಮುಖಸಪ್ಪಗ್ಮಾಡ್ಕೊಂಡು Serious ಅಂಬೋ 

ಸೂಚ್ನೇನೂ ನನಗೊತ್ತಿಲ್ವೆ? ಸೇರ್ಬಿಟ್ರತ್ಕಡೆ! ಅಬ್ಬ!... ಹಣ, ಒಡ್ವೆಗಳಿರ್ಲಿ! ಒಂದ್ಕಾಸು... 

ಒಂದ್ಬಿಡ್ಕಾಸಿನ್ಲಾಭಾಯೆತ್ಕಡೇನೋ ಅತ್ಮಡೇ ಸೇರ್ಬಿಡೋದು. ಮಾನಮರ್ಯಾದೆ ಮತಾಕೂಡಾ 

ಬಿಟ್ಟಿಟ್ಟು! ಈ ಮುದ್ಕೀ ಮಾತ್ಕೇಳ್ಕೊಂಡು ಒಡ್ವೆಗಳ ಹೊರಗೆ ತೆಗೆದಿಡೂಂದ್ರೆ ಏನ್ಮಾಡೋದೂ ? 

..ಸರಿ!... ನಾನೂ ಅದೇ ತಂತೀನ್ಮೀಟಿದ್ರೆ ತಾನೇ ತಿರಿಗ್ಬರ್ತಾರೆ ಹದಕ್ಕೆ....... (looking Coyly)

ಇಲ್ಬನ್ನೀಂದ್ರೆ! 


(Ramanna approaches Venkamma) 


ವೆಂಕಮ್ಮ: (in an irritatingly low tone) ಎನು! ಯಾರನ್ ಬೆದರಿಸ್ತೀರಿ? ನ್ನಾನ್ಹುಚ್ಚೀಂತ 

ತಿಳ್ಕೊಂಡ್ರಾ?... ಇಲ್ಲ ನೀವ್ಹುಚ್ಚೇ.... ಈಗ ಈ ಮನೇಗೆ ನೀವೂ ನಾನೂ ಶಾಶ್ವತವೋ ಇಲ್ಲಾ “ಈ 

ಹೊತ್ತಿದ್ದು... ನಾಳೇ ಸಾಯೋ ಮುದ್ಕಿ ನಾನೂ” ?ಂತ ತಾನೇ ಒಪ್ಕೊಳ್ಳೋ ಆ ಮುದ್ಕಿ ಶಾಶ್ವತ್ವೋ! 

ಈಗೇನ್ನಿಮ್ಮನಾಗತ್ತೆ ಗತಿಗೆಟ್ಟಿರೋದು... ಆವರ್ಕೆಂಚೂ ಒಡ್ವೆಯೋಚ್ನೆ ನಾವ್ಮಾಡ್ಬೇಕಾದ್ದಕ್ಕೆ? ಇಲ್ಲಿರೋ 

ಕಾಲ್ಕತ್ರಿಬಾವ್ಲಿ ಅರ್ಧ ಅಂದಿಲು ಮುಕ್ಕಾಲ್ ಮೂಗ್ತಿ ನಾವೇ ಹಾಕ್ಕೊತೇವೇಂದ್ರೆ ನಿಮ್ಯೋಗ್ಯತೆ 

ಪ್ರಕಾರ ಹಾಕೊಳ್ಳಿ ಒಡ್ವೆಗಳ್ನಾಂತ ಕೋಪಿಸಿಕೊಂಡು ತೆಪ್ಪನೆ ಇದ್ಬಿಡ್ತಾಳೆ! ಈ ಮನೆ ಸಾಲಾತೀರ್ಸೋ 

ಯೋಚ್ನೇಲಿರೋ ನಮ್ಕೈಲಿ ಸದ್ಯ ಒಡ್ವೆ ಮಾಡ್ಸೋದೆಲ್ಲಾಗುತ್ತೆ? ನಮ್ ಮನೇಲಿರೋ ವಡ್ವೆ 

ಅಷ್ಟ್ರಲ್ಲೇ ಇಧೆ... ಇರೋ ಅಲ್ಪ ಸ್ವಲ್ಪ ಪುಟ್ಟಾನ್ತಾಯೀದು ಪುಟ್ಟಾಗೇಂತ ಇಟ್ಟಿದೇವೆ ಅಂದ್ರೆ... 

ಲಕ್ಷಾಧಿಕಾರಿ ಅವ್ಳು... ಅವಳ ಮುದ್ಮಗೂಕೆಂಚೂ.... ಅವರ್ಮನೇ ಕೊನೇ ಮದ್ವೆ ಇದು: ಕೆಂಚೂ 

ಮುಖ ಮೈ ಕೈ ತುಂಬಾ ಒಡ್ವೆಗಳ್ನ ಆ ಯೋಗ್ಯತೆಪ್ರಕಾರ ಹೊರಿಸ್ಕಳಿಸ್ತಾಳೆ. ನಮ್ಮನೇಗ್ ಆ ಒಡ್ವೆಗ್ಳು 

ಆಯ್ತು! ಈಗಿರೋ ಒಡ್ವೆಗ್ಳೂ ಆಯ್ತು! ಹೀಗ್ನಮ್ಮನೇಗೊಂದಕ್ಕೆ ಎರಡ್ಸೆಟ್ಟು ಒಡ್ವೆ ಇದ್ರೆ ಒಗರೇನು ? 

ಮನೇಗೆ ಮುಂದಕ್ಕೆ ಯಾವದ್ಲಾಭಾಂಬೋ ಮುಂದ್ಯೋಚ್ನೆ ಇಲ್ದೆ ಮಾತಾಡೋ ಮುದಿಗೂಬೇ 

ಮಾತುಗಳಿಗೊಪ್ಕೊಂಡು ನಿಂತಿಧೀರಲ್ಲಾ ನಾನೂ ಒಬ್ಗಂಡ್ಸೂಂತ!... ಅದಲ್ವೇ ನನಗಾಶ್ಚರ್ಯ! 


ರಾಮಣ್ಣ: ಮನೇಗೆ two sets of jewelsoo! (face lights up) ಲೇ! 

Cogent ಆಗಿಧೆಯೇ!

----------------------------------------



ವೆಂಕಮ್ಮ: (Smiling aside) ಜುಟ್ಸಿಕ್ಕಿರೋವಾಗ್ಲೆ ಜಗ್ಗಿಸಿಬಿಡಬೇಕು! (ಪ್ರಕಾಶ) ಕೋಜೆಂಟೋ 

ಗೀಜೆಂಟೋ, ಅದಿಲ್ಹೇಳೇನ್ ಪ್ರಯೋಜ್ನ! ಅಲ್ಹೋಗ್ಹೆದರ್ದೆ ಹೇಳಿ... ಮಾತೂ ಚರ್ಚೆ ಇಷ್ಟಕ್ಸಾಕೂ... 

ಇನ್ಜಾಸ್ತೀ ಮಾತಾಡಿದ್ರೆ ಆಕೆ ಮೈಗೆ ಆಗೋದಿಲ್ಲಾಂತ ಹೇಳಿ! 


ರಾಮಣ್ಣ: ಅಮ್ಕೋಪ್ದಲ್ಲಿಧಾಳೆಯೇ!! ಅದೆಲ್ಲಾ diplomatic ಆಗಿ ನಿಲ್ಲಿಸ್ತೇನೆ!... ಲೇ! 


ವೆಂಕಮ್ಮ: ಈಗೇನ್ಬಂತು ?! 


ರಾಮಣ್ಣ: ಈಗ್ಲಾದ್ರೂ ನಿನ್ಟ್ರಂಕೂ ಹಾಸ್ಗೇ ತಿರಿಗೊಳಕ್ಹೋಗ್‌ಬಹುದೇನೆ ? 


ವೆಂಕಮ್ಮ: (looking fascinatingly at him) ಹೂಂ! 


ರಾಮಣ್ಣ (to Bora) ಒಳಗಿಡೊ ತೆಗೆದೂ! 


(Bora does not move) 


ರಾಮಣ್ಣ (appealingiy to Venkamma) ಲೇ...! 


ವೆಂಕಮ್ಮ: (to Bora) ತಗೊಂಡ್ಹೋಗೋ ತಿರಿಗೊಳ್ಗೆ! 


ಬೋರ: (taking things back} ಈ ಮನೇ ಚೀಫ್ಕೋರ್ಟೇಳೂವರ್ಗೂ ಕದ್ಲೋಕಾಗಾಕಿಲ್ಲ  

ಒಂದ್ಹೆಜ್ಜೇನೂ (Exit) 


ರಾಮಣ್ಣ: (aside) ಈಗಮ್ಮನ approach ಮಾಡೋದ್ಹ್ಯಾಗೆ? ಈಗವಳ disposition 

ನೋ chronically choleric... (ಕ್ಷಣಮಾತ್ರ ಯೋಚಿಸುವನು)... ಸರಿ... ಗೊತ್ತೇ ಇದೆ; Last 

resourceಉ... religion... philosophy... good old piatitudesಊ......... (approaching 

Subbanna gradually) ಅಮ್ಮಾ!... ಈ ಪ್ರಪಂಚದಲ್ಲಿರೋ ಸಮಸ್ತ ಚರಾಚರ ವಸ್ತುಗ್ಳೂ 

ನಶ್ವರವಾಗಿರೋವಾಗ.... ಈ ಕೇವಲ ರಕ್ತಮಾಂಸಮಯವಾದ ಈ ಮನುಷ್ಯದೇಹಾಂಬೊ ಈ 

ಮೃತ್ಪಿಂಡದಲ್ಲಿ ಸ್ಥಿರಾಭಿಮಾನಾನಿಟ್ಕೊಂಡು... ಹೀಗೆ... ಮನೆ...ಬಾಕ್ಲು... ಒಡ್ವೆ... ಯಜಮಾನಿಕೆ... 

ಬಿಡ್ಕಾಸೂಂತ... ವಯಸ್ಕರೂ ಜ್ಞಾನಿಗಳೂ ಆದ ನಾವು ಮಕ್ಳ್ಹಾಗೆ ಕಾದಾಡೋದು ಉಚಿತ್ವೇನಮ್ಮಾ....? 


ಸುಬ್ಬಮ್ಮ : (Opens her mouth wide: dumb-struck for a while) ಇದೇನ್ಬಂತೀಗ! 


ರಾಮಣ್ಣ: ಏನೋ ಆ ಸರ್ವಲೋಕೈಕನಾಥ ಕೊಟ್ಟ ಅಲ್ಪ ಸ್ವಲ್ಪ ವಯಸ್ನ ಭಗವಧ್ಯಾನ್ದಲ್ಲಿ 

ಕಳೆದು ಕಾಲಕ್ರಮೇಣ ಕಣ್ಮುಚ್ಚಿ... ಆ ಜಗದೀಶನ ಪಾದಾರವಿಂದಗಳ ಹೊಂದಿ ಸಾಯುಜ್ಯಾನ್ಹುಡ್ಕೋ 

ನಮ್ಗಳ್ಗೆ ಈ ಕೇವಲ ಐಹಿಕ ವಿಷ್ಯಗಳ್ನ ಮನಸ್ಸಿಗೆ ಹಚ್ಕೊಳ್ಳೋಕ್ ಬಿಡ್ವಿದ್ಯೇನಮ್ಮಾ? ಬಿಡುವು! 

 

ಸುಬ್ಬಮ್ಮ: (Suddenly drop ing a brass 'chemboo' from her hand) 

ನಿಸೂಊರಾಯ್ತು.... ಎಲ್ಲಿಂದೆಲ್ಗೆ!... ಅಲ್ಲಾ... ಈಗ್ನೀನೊಂದು ಕ್ಷಣಕ್ಕುಂಚೆ ಹೋದಾರ್ಭಟವೇನು! 

ಅಟ್ಟಹಾಸ್ವೇನು! ಈಗ್ನೀನ್ಬೆಕ್ಕಿನ್ಪಿಳ್ಳೆಹಾಗ್ಯಣ್ಬಿಡ್ತಾ ಬೆಬ್ಬೆಬ್ಬೇಂತ್ವಾಯಿಬಿಡ್ತಾ ಇರೋದೇನು? ನಿನ್ನೀಗ ಈ 

ತತ್ವಕ್ಕಿಳಿಸ್ಬಿಟ್ಳೋ ಆ ತಾಟ್ಕಿ! ಚನ್ನಾಆಯ್ತು!... ನೀನ್ನಿಲ್ಲಿಸ್ಬೇಡ... ಅವಳ್ಹೇಳ್ಕೊಟ್ಟ ಬಾಯಿಪಾಠ್ದಲ್ಲಿರೋ 

ಬಾಕಿ.... ನೀನೊಪ್ಸಿಬಿಡೂ! 


---------------------------------------------------


ರಾಮಣ್ಣ: ಹಯ್ಯೋ! ಇದೆಲ್ಲಾ ಯಾರೇನ್ಹೇಳ್ಕೊಡೋದಮ್ಮಾ.... ಇದೆಲ್ಲ... ಆ ಕಪಟನಾಟಕ 

ಸೂತ್ರಧಾರ್ನ ಲೀಲೆಗ್ಳಮ್ಮಾ! 


ಸುಬ್ಬಮ್ಮ: ಏನೂ? 


ರಾಮಣ್ಣ: ಕಪಟನಾಟಕ ಸೂತ್ರಧಾರ್ನ ಲೀಲೆಗ್ಳಮ್ಮಾ! 

 

ಸುಬ್ಬಮ್ಮ: (ಎದೆಬಡಿದುಕೊಳ್ಳುತ್ತಾ)  ಹಯ್ಯೋ!... ನನಗ್ಗೊತ್ತಿಲ್ವೆ!... ಹೇಳ್ತೇನ್ಕೇಳೂ!... ಈ 

ಲೀಲೆಗ್ನೆಲ್ಲಾ ಯಾವ ಕಂಪ್ನಿ ಸೂತ್ರಧಾರಂದೂ ಅಲ್ಲಾ... ನಿನಿಗೆ ಹೀಗ್ಗಂಡಸ್ತನದ ಗೌರ್ವಾನ್ಹೋಗ್ಲಾಡ್ಸ್ಬಿಟ್ಟು 

ರಬ್ಬರ್ಚಂಡಿನ್ಹಾಗಲ್ಲಿಂದಿಲ್ಲಿಗೆ ಇಲ್ಲಿಂದಲ್ಗೆ ಕುಣ್ಸೋಲೀಲೆಗ್ಳೆಲ್ಲ ಆ ಲಂಕಿಣೀದೂ!... (in sad submission) ಸರಿ! ಇನ್ಗೋಳಾಡೇನ್ ಪ್ರಯೋಜ! ಯಾವತ್ತಿನ್ಹಾಗೇ ಈ ಹೊತ್ತೂ! ಆ ಹಿಡಿಂಬಿ ಹಿಡಿದ್ಹಟವೇ ಹಟ ! 


ವೆಂಕಮ್ಮ: ಚನ್ನಾಯ್ತು! ದಾಸರ್ಗ್ದುಡ್ಡು ದಕ್ಷ್ಣೆ ಕೊಟ್ಟು ಪುರಾಣ ಕೇಳಿದ್ದಕ್ಕುಪಯೋಗ್ವಾದ್ರೂ 

ಇದೆಯಲ್ಲಾ!... ತಾಟಕೀ, ಲಂಕಿಣೀ... ಹಿಡಿಂಬೀ.... ದೇವ್ರೇಗತಿ ! ಇನ್ನೇನ್ಪುರಾಣ್ದಲ್ಲಿ ಪೂತ್ನಿಯೊಬ್ಳೇ 

ಬಾಕೀ! ಅವಳ್ನೂ ಹೊಂದಿಸ್ಬಿಡ್ತಾಳೀ ಮುದ್ಕೀ... ನನಗೊತ್ತು... ಅಬ್ಬಬ್ಬಬ್ಬಬ್ಬಾ! ಏನು ಬಾಯಿಂದ್ರೆ 

ಬರೋಕೋಪ್ದಲ್ಲಿ ಮುಂದಲೇ ಹಿಡಿದು ಎಳೆದು ಬಿಡೋಣಾನ್ಸತ್ತೇಂದ್ರೆ! 

 

ರಾಮಣ್ಣ (aside to Venkamma) ನಿನ್ಧರ್ಮಕ್ಸುುಮ್ನಿರೇ... ಅಮ್ಹಹದಕ್ಬಂದಿಧಾಳೆ ! (aloud)

ಹಾಗಲ್ಲಾಮ್ಮಾ... ಈ ಚಪಲಗ್ಳೆಲ್ಲಾ ಆ (holding his hands aloft) ಮಾಯಾವಧೂ... 


ಸುಬ್ಬಮ್ಮ: (ಕೈ ಮುಗಿಯುತ್ತ)  ಇನ್ಸಾಕು ದಮ್ಮಯ್ಯಾ! ಇನ್ಸಾಕು ಸುಮ್ನಿರೋ !... ನಿನ್ಕಣ್ಣಿಗ್ಮಣ್ತೂರಿ... 

ಮಂಕು ಮುಚ್ಚಿರೋ ಮಾಯಾವಧೂನಲ್ಲೆಲ್ಲೋಲ್ತೋರಸ್ತಿಯಾ! ದೂಲಾನ! ಅಲ್ಲೆಲ್ಲೂ ಇಲ್ಲ... 

ನಿನ್ಕಣ್ಣೆದ್ರುಗೆ (poining to Venkamma) ಅಲ್ನಿಂತಿಧಾಳ್ನೋಡು ... ಆ ಮಾರಿ!... ಇನ್ನಿದಕ್ಮೇಲೆ 

ನಿನ್ನಂಸಾರ್ದ ಗೋಜಿಗೆ ನಾ ಬಂದ್ರೆ ಕೇಳು... (holding both hands lolt) ಗಂಡುಮಕ್ಕಳ ಹೆರೋ 

ತಾಯಿಗ್ಳ ಹಣೇಬರ್ಹವೆಲ್ಲ ಹೀಗೆ... ಹೊಟ್ಟೇಲ್ಹುಟ್ಟಿದ್ಮಕ್ಳಿಂದ ಇದೇ ಅವರಿಗ್ಫಲ ! (ಗದ್ದದ ಸ್ವರದಿಂದ) 

ಒಂಭತ್ತಿಂಗ್ಳು ಹೊತ್ತು... ಹೆತ್ತು ಎದೆ ಹಾಲ್ಕೊಟ್ಟು... ತನ್ಪ್ರಾಣಕ್ಕಿಂತ್ಲೂನೂ ಜಾಸ್ತಿ ಆಶೆ ಇಟ್ಕೊಂಡು.... 

ಸಾಕೋದು! ಯಾಕೆ ? ಯಾಕೆ ? ಅವರ್ದೊಡ್ಡೋರಾಗುತ್ಲೂನೂ ಇಂಥ (pointing lo Venkamma) 

ಅಣ್ಣಮ್ಮಗಳಿಗಾಹುತಿ ಅರ್ಪ್ಸೋಕೆ ! ಇನ್ಸಾಕ್ನನಗೀ ಇಹಲೋಕದ್ಫಲಗ್ಳೂ!... 


(ವಕ್ರವಾಗಿ ಗೋಳಾಡುವಳು) 


(ಒಳಗೆ-ಯಜಮಾನ್ತಿಧಾರೆಯೇ ಮನೇಲಿ?) 


ವೆಂಕಮ್ಮ: (looking at the door) ಯಾರೋ ಬಂದ್ಹಾಗಿದೆ! (to husand) ಹಯ್ಯೋ! ಇನ್ನೀ 

ಪ್ರಲಾಪಸಾಕು, ಅಡಗಿಸ್ಕೋ ಅನ್ನೀಂದ್ರೆ!... ಇದೇನ್ನಾಚಿಗ್ಕೇಡು ! ಮನೆಗ್ಬಂದಿರೋವ್ರೇನ್ತಿಳ್ಕೊಂಡಾರು ? 

ಯಾರಾದರೂ ಸತ್ತರೂಂದ್ಕೊಂಡಾರು! 


ಸುಬ್ಬಮ್ಮ: ಅಂದ್ಕೊಳ್ಳಿ! ಇಲ್ಲದ್ದೇನಂದ್ಕೊಂಡಾರೂ... ನನಗಿನ್ನೀ ಮನೇಲೆಲ್ರೂ ಸತ್ಹಾಗ್ತಾನೇ... 


(ಒಳಗೆ.. ರಾಮಣ್ಣೋರಿಧಾರೇನು, ಯಜಮಾನ್ರೂ! ಯಜಮಾನ್ತಿಧಾರೇನು, ರಾಮಣ್ಣೋರು ?)


--------------------------------------


ಸುಬ್ಬಮ್ಮ: ಯಾರೋ ಕಾಣೆ.... ಬಡ್ಕೊತಿಧಾನೆ ಬಾಕ್ಲಲ್ಲಿ... ಯಜ್ಮಾನ್ರೂ... ರಾಮಣ್ಣೋರು! 

ರಾಮಣ್ಣೋರು... ಯಜ್ಮಾನ್ರೂಂತ... ಯಾರೋ ಕಾಣೆ... ಈ ಮನೇಗುಟ್ಟವನಿಗೆ ಗೊತ್ತಿಲ್ಲ! ಪಾಪ! 

ಈ ಯಜಮಾನ್ಕೆ ಆ ರಾಮಣ್ಣಂದೂಂತ ತಿಳ್ಕೊಂಡಿಧಾನೇ ಆ ಮೂಢ!... ಸರಿ! ಆಫೀಸ್ರೂಮ್ಗೆ 

ಎಳ್ಕೊಂಡೋಗಿ ಕುರ್ಚಿ ಮೇಲ್ಕೂಡ್ಸೀ... ಬೋಳ್ಸಿದ್ನಿನ್ಮೀಸೇನವಳ ತುಟೀಗ್ತಗಲ್ಸೀ (ವೆಂಕಮ್ಮನನ್ನು 

ಸೂಚಿಸಿ) ತೋರ್ಸು! ಮನೆ ಯಜಮಾನ್ರನ್ನ! ಮೂಢಾ! ಮೂಢಾ! 


[ತೆರೆ]





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ